ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆಗಳಿಗೆ ನಾವೇ ಗ್ಯಾರಂಟಿ: ಸಂತೋಷ್ ಲಾಡ್

ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ
Published 11 ಫೆಬ್ರುವರಿ 2024, 16:28 IST
Last Updated 11 ಫೆಬ್ರುವರಿ 2024, 16:28 IST
ಅಕ್ಷರ ಗಾತ್ರ

ಬಳ್ಳಾರಿ: ರಾಜ್ಯ ಸರ್ಕಾರವು ಜಾರಿಗೊಳಿಸಿದ ಐದು ಗ್ಯಾರೆಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ನಮ್ಮ ಸರ್ಕಾರದ ಅವಧಿ ಇರುವವರೆಗೂ ಗ್ಯಾರೆಂಟಿಯೋಜನೆಗಳನ್ನು ಪ್ರತಿ ವರ್ಗದ ಜನರಿಗೂ ತಲುಪಿಸುತ್ತೇವೆ. ಅದಕ್ಕೆ ನಾವೇ ಗ್ಯಾರೆಂಟಿಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಸ್ಪಷ್ಟಪಡಿಸಿದ್ದಾರೆ. 

ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಸುಮಾರು ₹58,000 ಕೋಟಿ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ವ್ಯಯಿಸಿದೆ. ಇಡೀ ದೇಶದಲ್ಲಿಯೇ ನಮ್ಮ ಸರ್ಕಾರವು ಉಚಿತ ಐದು ಗ್ಯಾರೆಂಟಿಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

‘ಐದು ಗ್ಯಾರೆಂಟಿ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಇತರೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿಯೂ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಶಾಸಕರು ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಸರ್ಕಾರ 26 ಲಕ್ಷ ರೈತರ ಖಾತೆಗೆ ತಲಾ ₹2000 ರಂತೆ ಬರ ಪರಿಹಾರ ಹಣ ವರ್ಗಾವಣೆ ಮಾಡಲಾಗಿದೆ. ಇನ್ನುಳಿದ 3 ರಿಂದ 4 ಲಕ್ಷ ರೈತರ ಖಾತೆಗೆ ಬರ ಪರಿಹಾರ ಹಣ ಜಮಾ ಮಾಡಲಾಗುವುದು.  ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ನಿರೀಕ್ಷಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತ ತಕ್ಷಣ ಕೇಂದ್ರದಿಂದ ಶೇ.88 ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದಿಂದ ಶೇ.12 ರಷ್ಟು ಅನುದಾನ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು’  ಎಂದು ವಿವರಿಸಿದರು.

ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು, ಜಿಲ್ಲೆಯಲ್ಲಿ ಅಪೇರಲ್ ಪಾರ್ಕ್, ಜೀನ್ಸ್ ಪಾರ್ಕ್ ನಿರ್ಮಾಣ ಕುರಿತು, ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.

ನಾಗೇಂದ್ರ, ಜಮೀರ್‌ ನೇತೃತ್ವದಲ್ಲಿ ಚುನಾವಣೆ: ‘ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್‌ ಗೆಲ್ಲುತ್ತದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭದ್ರ ಬುನಾದಿ ಇದೆ. ಯಾರೇ ಅಭ್ಯರ್ಥಿಗಳಾದರೂ ಅವರನ್ನು ಗೆಲ್ಲಿಸುತ್ತೇವೆ. ಅದಕ್ಕಾಗಿ ಹೋಬಳಿ ಮಟ್ಟದಲ್ಲಿ ಗ್ಯಾರೆಂಟಿ ಯೋಜನೆಗಳ ಬಗ್ಗೆ ಮನೆ ಮನೆ ಜಾಗೃತಿ ಮೂಡಿಸಲಾಗುವುದು. ಬಿ.ನಾಗೇಂದ್ರ ಮತ್ತು ಜಮೀರ್ ಅಹ್ಮದ್‌ಖಾನ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳಿದರು.

ಪಾಲಿಕೆ ಮೇಯರ್ ಬಿ.ಶ್ವೇತಾ ಸೇರಿದಂತೆ ಪಾಲಿಕೆಯ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಇದ್ದರು. 

‘ಕೆಲಸ ಮಾಡಿದ್ದರೆ ಪ್ರಚಾರ ಏಕೆ?’

‘ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ₹6500 ಕೋಟಿ ವ್ಯಯಿಸಿದ್ದಾರೆ. ಅಭಿವೃದ್ಧಿ ಕಾರ್ಯ ಮಾಡಿದರೆ ಇಷ್ಟೊಂದು ಪ್ರಚಾರ ಮಾಡುವ ಅಗತ್ಯ ಇರಲಿಲ್ಲ. ಯುಪಿಎ ಸರ್ಕಾರದ ಮತ್ತು ಈಗಿನ ಎನ್‌ಡಿಎ ಸರ್ಕಾರದ ಅವಧಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಆಗಬೇಕಿದೆ’ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.  ‘ದೇಶದಲ್ಲಿ ಆರ್ಥಿಕತೆ ಕುಸಿಯುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆ ಬುಲೆಟ್‌ಟ್ರೈನ್ ಯೋಜನೆಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಅದರ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಜಿಡಿಪಿ ಬಗ್ಗೆ ಮಾತನಾಡುತ್ತಾರೆಯೇ? ಬೇರೆ ದೇಶಗಳೊಂದಿಗೆ ಭಾರತದ ಜಿಡಿಪಿಯನ್ನು ಹೋಲಿಸುತ್ತಾರಾ? ಪುಲ್ವಾಮಾ ದಾಳಿ ಬಗ್ಗೆ ಇನ್ನು ಸಂಪೂರ್ಣ ತನಿಖೆ ಆಗಲಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಜಾಗದಲ್ಲಿ ರಾಮಮಂದಿರ ಕಟ್ಟಿಲ್ಲ. ಆದರೂ ನಾವೇ ಕಟ್ಟಿದ್ದು ಎಂದು ಬಿಜೆಪಿಯವರು ಬಿಂಬಿಸಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗಳಲ್ಲಿ 50:50 ಜಾಗ ಕೊಡಿ  ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಗ್ಗೆ ಬಣ್ಣಿಸಿಕೊಳ್ಳಲು ಪ್ರಚಾರ ಪಡೆಯಲು ಟಿ.ವಿ ಮಾಧ್ಯಮಗಳಲ್ಲಿ ಎಷ್ಟು ಜಾಗ ಪಡೆಯುತ್ತಿದ್ದಾರೆಯೋ ಅಷ್ಟೇ ಜಾಗವನ್ನು ವಿರೋಧ ಪಕ್ಷಗಳಿಗೆ ನೀಡಲಿ. ಅತ್ಯಂತ ಶಕ್ತಿಶಾಲಿ ಪ್ರಧಾನಿಗಳು ಇಂಥದ್ದೊಂದು ಕಾನೂನನ್ನು ಭಾರತದಲ್ಲಿ ತರಲಿ. ಆಗ ವಿರೋಧ ಪಕ್ಷಗಳ ವಾದವೂ ಜನರಿಗೆ ತಲುಪುತ್ತದೆ. 24 ಗಂಟೆಯೂ ಮೋದಿಯವರನ್ನೇ ತೋರಿಸಿದರೆ ನಮ್ಮ ಬಗ್ಗೆ ಎಲ್ಲಿ ತಿಳಿಯುತ್ತದೆ ಎಂದು ಸಚಿವ ಸಂತೋಷ್‌ ಲಾಡ್‌ ವ್ಯಂಗ್ಯವಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT