ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ‘ಫಿಟ್‌’ ಆಗಲು ಪೊಲೀಸರ ಕಸರತ್ತು

Published 9 ಜೂನ್ 2024, 5:56 IST
Last Updated 9 ಜೂನ್ 2024, 5:56 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಸ್ಥೂಲಕಾಯ ಹೊಂದಿದ್ದ ನೂರು ಪೊಲೀಸರನ್ನು ಸದೃಢರಾನ್ನಾಗಿರುವ ಕಾರ್ಯ ಕಳೆದ 10 ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. 

ಜಿಲ್ಲೆಯಲ್ಲಿ ಒಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಇಬ್ಬರು ಎಎಸ್‌ಪಿ, ಮೂವರು ಡಿವೈಎಸ್‌ಪಿ, 15 ಮಂದಿ ಪಿಐ, 45 ಪಿಎಸ್‌ಐಗಳೂ ಸೇರಿದಂತೆ ಒಟ್ಟು 867 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದಾರೆ.

ಇತ್ತೀಚೆಗೆ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಬಿಎಂಐ (ಬಾಡ್‌ ಮಾಸ್‌ ಇಂಡೆಕ್ಸ್‌) ಅಂಕ 30ಕ್ಕಿಂತ ಅಧಿಕವಿರುವ (ಸ್ಥೂಲಕಾಯ) ನೂರು ಸಿಬ್ಬಂದಿಗೆ ಮೇ 29ರಿಂದ ಆರೋಗ್ಯ ಶಿಬಿರ ಕೈಗೊಳ್ಳಲಾಗಿದೆ.

ನೂರು ಸಿಬ್ಬಂದಿಯನ್ನು ಮೂರು ತಂಡಗಳಾಗಿ ವಿಭಾಗಿಸಲಾಗಿದೆ. ಇದರಲ್ಲಿ ಮೂವರು ಪಿಎಸ್‌ಐಗಳು, 10 ಎಎಸ್‌ಗಳು ಇದ್ದಾರೆ. 21 ದಿನಗಳ ವರೆಗೆ ಇವರಿಗೆ ನಿತ್ಯ ಆರೋಗ್ಯ ತರಬೇತಿ ನೀಡಲಾಗುತ್ತದೆ. ‘ಸುರಕ್ಷಿತ ಬಳ್ಳಾರಿಗಾಗಿ ಸದೃಢ ಪೊಲೀಸ್’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪೊಲೀಸರಿಗೆ ಆರೋಗ್ಯ ಪಾಠ ಮಾಡಲಾಗುತ್ತಿದೆ. 

ಆರೋಗ್ಯ ತರಬೇತಿಗೆ ಆಯ್ಕೆಯಾಗಿರುವ ಪೊಲೀಸರಿಗೆ ನಿತ್ಯದ ಕರ್ತವ್ಯದಿಂದ ವಿನಾಯ್ತಿ ನೀಡಲಾಗಿದ್ದು, ಆರೋಗ್ಯ ಕಾಯ್ದುಕೊಳ್ಳುವುದೇ ಅವರ ಪ್ರಧಾನ ಕೆಲಸವಾಗಿದೆ. ದಿನವೂ ಯೋಗ, ಏರೋಬಿಕ್‌, ಈಜು,  ವಾಕಿಂಗ್‌, ಕ್ರಿಕೆಟ್‌, ಲಾಠಿ ಡ್ರಿಲ್‌, ವೆಪನ್‌ ಡ್ರಿಲ್‌, ಪರಿಸರ ಸಂರಕ್ಷಣೆ,  ಜಿಮ್‌ನಲ್ಲಿ ಕಸರತ್ತು ಮಾಡಿಸಲಾಗುತ್ತಿದೆ. ಚಾರಣಕ್ಕೂ ಕರೆದೊಯ್ಯಲಾಗುತ್ತಿದೆ. ಜತೆಗೆ ಪತ್ಯಾಹಾರ ನೀಡಲಾಗುತ್ತಿದೆ. 

ಇದಿಷ್ಟೇ ಅಲ್ಲದೇ, ಪೊಲೀಸರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸಲು ಜಿಲ್ಲಾ ಶಸ್ತ್ರಚಿಕಿತ್ಸಕ ಬಸಾರೆಡ್ಡಿ, ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಿಲ್ಪಾ, ವೈದ್ಯರಾದ ಸುಂದರ್‌ ಅವರನ್ನು ಒಳಗೊಂಡ ತಂಡ ರಚಿಸಲಾಗಿದೆ. ಈ ತಂಡ ನೂರು ಮಂದಿ ಪೊಲೀಸರಿಗೂ ಮಾರ್ಗದರ್ಶನ ನೀಡುತ್ತಿದೆ. 

ಆರೋಗ್ಯ ತರಬೇತಿ ಪಡೆದ ಪೊಲೀಸರನ್ನು ಆರು ವಾರಗಳ ಬಳಿಕ ಮತ್ತೆ ತಪಾಸಣೆ ಮಾಡಲಾಗುತ್ತದೆ. ನಂತರವೂ ಬಿಎಂಐ ಮಟ್ಟ ಹೆಚ್ಚಿದ್ದರೆ, ಬಳಿಕ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದರು.

‘ಜಾಗೃತಿ’ಯ ನಡಿಗೆ

‘ಆರೋಗ್ಯ ತರಬೇತಿಯಲ್ಲಿರುವ ಪೊಲೀಸ್‌ ಅಧಿಕಾರಿ ಸಿಬ್ಬಂದಿಯನ್ನು ಸಂಜೆ ಹೊತ್ತು ನಗರದಲ್ಲಿ ಜಾಗೃತಿ ಜಾಥಾಕ್ಕೆ ಕರೆದೊಯ್ಯಲಾಗುತ್ತಿದೆ. ಜಾಥಾದಲ್ಲಿ ನಾಗರಿಕರಿಗೆ ಕಾನೂನು, ಟ್ರಾಫಿಕ್‌, ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಲಾಗುತ್ತಿದೆ. ಪೊಲೀಸರನ್ನು ನಡಿಗೆಗೆ ಹಚ್ಚುವುದು ಅದರ ಮೂಲಕ ಜನರಲ್ಲಿ ಜಾಗೃತಿಯನ್ನೂ ಮೂಡಿಸುವುದು ನಮ್ಮ ಉದ್ದೇಶ’ ಎಂದು ಎಸ್‌ಪಿ ರಂಜಿತ್‌ ಕುಮಾರ್‌ ತಿಳಿಸಿದರು.

ಇಲಾಖೆ, ಕುಟುಂಬಕ್ಕೂ ಒಳಿತು

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಶೇಷ ಅಸ್ಥೆ ವಹಿಸಿ ಕೈಗೊಂಡಿರುವ ಉಪಕ್ರಮದ ಬಗ್ಗೆ ಪೊಲೀಸ್‌ ಸಿಬ್ಬಂದಿಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಶಿಬಿರದಲ್ಲಿ ನೀಡಲಾಗುತ್ತಿರುವ ಸಲಹೆಗಳು, ನಿತ್ಯ ಮಾಡುತ್ತಿರುವ ವ್ಯಾಯಾಮದ ಪರಿಣಾಮವಾಗಿ ನಮ್ಮ ಆರೋಗ್ಯ ಸುಧಾರಿಸುತ್ತಿದೆ. ಇದರಿಂದ ನಾವು ಚೈತನ್ಯಪೂರ್ಣವಾಗಿ ಕರ್ತ್ಯವ್ಯ ನಿರ್ವಹಿಸಬಹುದು. ಮತ್ತೊಂದೆಡೆ ನಮ್ಮ ಆರೋಗ್ಯ ಲಾಭ ಇಡೀ ಕುಟುಂಬಕ್ಕೆ ಲಭ್ಯವಾಗಲಿದೆ. ನಾವು ಆರೋಗ್ಯವಾಗಿದ್ದರೆ, ಇಡೀ ಕುಟುಂಬ ನೆಮ್ಮದಿಯಾಗಿರುತ್ತದೆ ಎಂದು ಶಿಬಿರದಲ್ಲಿ ಪಾಲ್ಗೊಂಡ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.

ಸುರಕ್ಷಿತ ಬಳ್ಳಾರಿಗಾಗಿ ಸದೃಢ ಪೊಲೀಸ್’ ಕಾರ್ಯಕ್ರಮದಡಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಿಬ್ಬಂದಿ ಉತ್ಸುಕರಾಗಿ ಪಾಲ್ಗೊಳ್ಳುತ್ತಿದ್ಧಾರೆ.
ರಂಜಿತ್‌ ಕುಮಾರ್‌ ಬಂಡಾರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT