ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಗೈತಿಹಾಸಿಕ ತಾಣ ತೆಕ್ಕಲಕೋಟೆ

ಚಾಂದ್ ಬಾಷ
Published 31 ಡಿಸೆಂಬರ್ 2023, 5:21 IST
Last Updated 31 ಡಿಸೆಂಬರ್ 2023, 5:21 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಪಟ್ಟಣವು ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಜಾಗ. ಈಗಿರುವ ದೇಶ, ರಾಜ್ಯ, ಜಿಲ್ಲೆಗಳಿನ್ನೂ ಮೂಡಿರದ, ಭಾಷೆ ಜಾತಿ ಮತ- ಧರ್ಮಗಳಿನ್ನೂ ಹುಟ್ಟಿರದ ಕಾಲಘಟ್ಟದಲ್ಲಿದ್ದ ಪೂರ್ವಜರ ತಾಣವಿದು.

ಆದಿಮಾನವರು ಹಣ್ಣು ಹೆಕ್ಕಿ ತಿನ್ನುವ ಮತ್ತು ಪ್ರಾಣಿಬೇಟೆಯಾಡುವ ಹಂತದಿಂದ ಮುಂಚಲಿಸಿ, ಒಂದೆಡೆ ನೆಲೆನಿಂತು ಕೃಷಿ ಮಾಡುವ ಮತ್ತು ಪಶುಪಾಲನೆ ಮಾಡುವ ಹಂತಕ್ಕೆ ದಾಟಿದರು. ಆ ತಿರುವಿನ ಘಟ್ಟದಲ್ಲಿ ಉದಯಿಸಿದ ಜನವಸತಿಗಳಲ್ಲಿ ‘ತೆಕ್ಕಲಕೋಟೆ’ಯೂ ಒಂದು.

ಇದು ಪೂರ್ವ- ಐತಿಹಾಸಿಕ ಹಾಗೂ ನವಶಿಲಾಯುಗದ ತಾಣವಾಗಿದ್ದು ಇಲ್ಲಿನ ಜನರಿಗೆ ಚಿನ್ನದ ಕಿವಿಯ ಆಭರಣಗಳ ಬಳಕೆ ತಿಳಿದಿತ್ತು ಎಂಬ ಪುರಾವೆ ದೊರೆತಿದೆ. ಇಲ್ಲಿನ ಬೆಟ್ಟಗಳಲ್ಲಿ ಶಿಲಾ ವರ್ಣಚಿತ್ರ, ಕಲ್ಲಿನ ರೇಖಾಚಿತ್ರ ಮತ್ತು ಕುಟ್ಟು ಚಿತ್ರಗಳ ವಿವಿಧ ಅವಶೇಷಗಳು ಕಂಡುಬರುತ್ತವೆ.

ಬುದ್ದಿವಂತ ಮಾನವನ ನೆಲೆ

ಇಲ್ಲಿನ ಬೆಟ್ಟಗಳಲ್ಲಿ ವಿಶಿಷ್ಟವಾದ ಸುಟ್ಟ ಬೂದಿ ಕುಂಬಾರಿಕೆ, ಸಣ್ಣ ಪ್ರಮಾಣದ ಕಪ್ಪು- ಕೆಂಪು ಬಣ್ಣದ ಮಡಿಕೆಗಳು, ಕಲ್ಲಿನ ಕೊಡಲಿ ಮತ್ತು ಚೂಪಾದ ಮೂಳೆಯ ಆಯುಧಗಳು ಮತ್ತು ಕಲ್ಲು- ಬ್ಲೇಡ್‌ಗಳನ್ನು ತಯಾರಿಸುವ ಕಲೆ ತಿಳಿದಿತ್ತು ಎಂಬ ಬಗ್ಗೆ ಪುರಾವೆಗಳು ದೊರೆತಿವೆ.

ತೆಕ್ಕಲಕೋಟೆ ಪಟ್ಟಣದ ಜಕ್ಕೇರು ಗುಡ್ಡದ ಉತ್ಪನನ ನಡೆದ ಸ್ಥಳಕ್ಕೆ ಇತ್ತೀಚೆಗೆ ಅಮೇರಿಕದ ನ್ಯೂಯಾರ್ಕ್ ಹಾರ್ಟ್ ವಿಕ್ ಕಾಲೇಜಿನ ಪ್ರೋಫೆಸರ್ ನಮಿತ.ಎಸ್.ಸುಗಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

ತೆಕ್ಕಲಕೋಟೆ ಪಟ್ಟಣದ ಜಕ್ಕೇರು ಗುಡ್ಡದ ಉತ್ಪನನ ನಡೆದ ಸ್ಥಳಕ್ಕೆ ಇತ್ತೀಚೆಗೆ ಅಮೇರಿಕದ ನ್ಯೂಯಾರ್ಕ್ ಹಾರ್ಟ್ ವಿಕ್ ಕಾಲೇಜಿನ ಪ್ರೋಫೆಸರ್ ನಮಿತ.ಎಸ್.ಸುಗಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಕಲ್ಲಿನ ಕೊಡಲಿಗಳು ಸಾಮಾನ್ಯವಾಗಿ ಅಂಡಾಕಾರದ ಭಾಗ ಮತ್ತು ಮೊನಚಾದ ಬಟಗಳೊಂದಿಗೆ ತ್ರಿಕೋನ ರೂಪವನ್ನು ಹೊಂದಿರುತ್ತವೆ. ಇಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಮೂರು ಚಿನ್ನದ ಆಭರಣಗಳು ದೊರೆತಿವೆ. ಇದು ಸ್ಥಳೀಯರಿಗೆ ಗಣಿಗಾರಿಕೆಯೂ ತಿಳಿದಿತ್ತು ಎಂದು ಸೂಚಿಸುತ್ತದೆ.

ಐತಿಹಾಸಿಕ ಕೋಟೆ

ತೆಕ್ಕಲಕೋಟೆಯು 18ನೇ ಶತಮಾನದ ಚೌಕಾಕಾರದ ಕೋಟೆಗೆ ಹೆಸರುವಾಸಿಯಾಗಿದೆ. ಕೋಟೆಯ ಪಶ್ಚಿಮ ಭಾಗದ ಗೋಡೆ ಕುಸಿದಿದ್ದು ಪುರಾತತ್ವ ಇಲಾಖೆ ಅಥವಾ ಸ್ಥಳೀಯ ಆಡಳಿತದ ಕಣ್ಣಿಗೆ ಬೀಳದಿರುವುದು ದುರಂತ.

ಅಶೋಕನ ಶಿಲಾಶಾಸನ

‘ದೇವಾನಾಂಪ್ರಿಯ’ ಎಂದು ಉಲ್ಲೇಖಿತ ಮೌರ್ಯ ಚಕ್ರವರ್ತಿ ಅಶೋಕನ ಸಣ್ಣ ಶಾಸನಗಳಿಗೆ ಹೆಸರುವಾಸಿಯಾಗಿರುವ ನಿಟ್ಟೂರು ಮತ್ತು ಉಡೇಗೋಳ ಗ್ರಾಮಗಳು ಈ ಪಟ್ಟಣದಿಂದ 5 ರಿಂದ 7 ಕಿ.ಮೀ ದೂರದಲ್ಲಿವೆ. ಶಾಸನಗಳ ರಕ್ಷಣೆಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಬೇಸರದ ಸಂಗತಿ ಎಂದು ಉಪನ್ಯಾಸಕ ಸಿ.ಎಂ. ಮನೋಹರ್, ಇತಿಹಾಸ ಸಂಶೋಧನಾರ್ಥಿ ಕಾಡಸಿದ್ದ ತಿಳಿಸುತ್ತಾರೆ.

ನಾದ ಹೊಮ್ಮಿಸುವ ಶಿಲಾ ಬೆಟ್ಟ

ತೆಕ್ಕಲಕೋಟೆಯಿಂದ ನಡವಿಗೆ ಹೋಗುವ ಮಾರ್ಗದಲ್ಲಿ ಕಡೆಗುಡ್ಡ, ಜಕ್ಕೇರಗುಡ್ಡ ಮತ್ತು ಉಡೇಗುಡ್ಡ ಬರುತ್ತವೆ. ಇಲ್ಲಿನ ಶಿಲೆಗಳಿಂದ ನಾದ ಹೊರಡುತ್ತಿದೆ.

ಹಂಪಿಯ ಇತಿಹಾಸ ಪ್ರಸಿದ್ಧಿ ವಿಜಯವಿಠ್ಠಲ ದೇವಸ್ಥಾನದ ನಾದ ಹೊಮ್ಮಿಸುವ ಕಂಬಗಳನ್ನು ಹೋಲುವ ಶಿಲೆಗಳು ಇಲ್ಲಿನ ಬೆಟ್ಟಗಳಲ್ಲಿ ಪತ್ತೆಯಾಗಿದ್ದು, ಇತಿಹಾಸ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಈ ಶಿಲೆಗಳನ್ನು ಕುಟ್ಟಿದಾಗ ಕೆಲವು ಮೃದಂಗ, ಕೆಲವು ಜಾಗಟೆ, ಇನ್ನು ಕೆಲವು ಶಿಲೆಗಳು ಗಂಟೆ ನಾದ ಮೊಳಗಿಸುತ್ತವೆ. ಆದರೆ ಇತಿಹಾಸ ಸಂಶೋಧಕರು ರಾಸಾಯನಿಕಗಳ ಕೊರತೆಯಿಂದ ಕಲ್ಲು ಬಂಡೆಗಳಿಂದ ಈ ರೀತಿ ನಾದ ಹೊಮ್ಮುತ್ತಿರಬಹುದು ಎನ್ನುತ್ತಾರೆ.

ತೆಕ್ಕಲಕೋಟೆ ಪಟ್ಟಣ ಸಮೀಪದ ನಿಟ್ಟೂರು ಗ್ರಾಮದಲ್ಲಿ ದೊರೆತ ಅಶೋಕನ ಶಾಸನ ಸೂಕ್ತ ರಕ್ಷಣೆ ಇಲ್ಲದೆ ಅನಾಥವಾಗಿದೆ

ತೆಕ್ಕಲಕೋಟೆ ಪಟ್ಟಣ ಸಮೀಪದ ನಿಟ್ಟೂರು ಗ್ರಾಮದಲ್ಲಿ ದೊರೆತ ಅಶೋಕನ ಶಾಸನ ಸೂಕ್ತ ರಕ್ಷಣೆ ಇಲ್ಲದೆ ಅನಾಥವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT