ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಮಳೆಯೆಂದರೇ ಭಯ!

Published 27 ಮೇ 2024, 4:54 IST
Last Updated 27 ಮೇ 2024, 4:54 IST
ಅಕ್ಷರ ಗಾತ್ರ

ಬಳ್ಳಾರಿ: ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆ ನಗರದ ಚರಂಡಿ ಸಮಸ್ಯೆಯ ಹಲವು ಮುಖಗಳನ್ನು ತೆರೆದಿಟ್ಟಿದೆ. ಕೊಳೆಗೇರಿಗಳಲ್ಲಂತೂ ಮಳೆ ಎಂದರೆ ಜನ ನಡುಗುವಂತಾಗಿದೆ. ಇನ್ನೊಂದೆಡೆ ಗುಂಡಿಬಿದ್ದ ರಸ್ತೆಗಳಲ್ಲಿ ನೀರು ತುಂಬಿದ್ದು, ನಗರ ಕೆಸರುಗದ್ದೆಯಂತಾಗುತ್ತಿವೆ. 

ನಗರದಲ್ಲಿ ನಿತ್ಯ 155 ಟನ್‌ನಷ್ಟು ಕಸ ಸಂಗ್ರಹ ಮಾಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ನಗರದ ಬಹುತೇಕ ಪ್ರದೇಶಗಳಲ್ಲಿ ಚರಂಡಿಗಳು ಕಸವನ್ನೇ ಹೊದ್ದು ಮಲಗಿದಂತೆ ಕಾಣುತ್ತಿದ್ದು, ಪಾಲಿಕೆಯ ಕಸ ವಿಲೇವಾರಿಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಚರಂಡಿಯಲ್ಲಿನ ಕಸದಿಂದಾಗಿ ನೀರು ಹರಿದು ಹೋಗದೆ ಜನವಸತಿ ಪ್ರದೇಶಗಳತ್ತ ನುಗ್ಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಬದುಕೇ ದುಸ್ತರ ಎಂಬಂತಾಗಿದೆ. 

ಎಲ್ಲೆಲ್ಲಿ ಸಮಸ್ಯೆ?: 

ರಾಣಿತೋಟ, ಕಣೇಕಲ್‌ ಬಸ್‌ ನಿಲ್ದಾಣದ ವ್ಯಾಪ್ತಿಯ ಪ್ರದೇಶ, ಬಾಪೂಜಿ ನಗರ, ವಡ್ಡರಬಂಡೆ, ಬಂಡಿಮೋಟ್‌, ದೇವಿನಗರ, ಇಂದಿರಾನಗರ, ರೂಪನಗುಡಿ ರಸ್ತೆ, ಬೆಂಗಳೂರು ರಸ್ತೆಯ ಅಕ್ಕಪಕ್ಕದ ಪ್ರದೇಶಗಳು, ಎಪಿಎಂಸಿ ಯಾರ್ಡ್‌ ಸುತ್ತಲ ಪ್ರದೇಶ, ಮಿಲ್ಲರ್‌ ಪೇಟೆ, ಕೌಲ್‌ ಬಜಾರ್‌ ಪ್ರದೇಶದಲ್ಲಿ ಚರಂಡಿ ಸಮಸ್ಯೆ ಮೊದಲಿನಿಂದಲೂ ತಾಂಡವವಾಡುತ್ತಿತ್ತು. ಆದರೆ, ಈಗ ಸುರಿಯುತ್ತಿರುವ ಮಳೆಯು ಜನರನ್ನು ಮತ್ತಷ್ಟು ಸಮಸ್ಯೆಗೆ ದೂಡಿದೆ. 

ರಾಣಿತೋಟ ಪ್ರದೇಶದ ಇಲಾಹಿ ಮಸೀದಿ ಸರ್ಕಲ್‌ನಲ್ಲಿ ಕಾಲುವೆಗೆ ಅಳವಡಿಸಲಾಗಿದ್ದ ಕಸದ ಗೇಟ್ ಕಿತ್ತು ಹಾಕಲಾಗಿದೆ. ಹೀಗಾಗಿ ಕಾಲುವೆ ಮುಂದಿನ ಪ್ರದೇಶದ ಜನರ ಮನೆಗಳಿಗೆಲ್ಲ ಕೊಳಚೆ ನೀರು ನುಗ್ಗುತ್ತಿದೆ. ರಾಣಿ ತೋಟ ಮುಖ್ಯ ರಸ್ತೆಯಲ್ಲಿನ ಕಾಲುವೆಯ ಸೇತುವೆ ಮೇಲೆ ಕಾಲುವೆಯ ಕಸ ತೆಗೆದು ಹಾಕಲಾಗುತ್ತಿದೆ. ಮಳೆ ಬಂದರೆ, ಈ ತ್ಯಾಜ್ಯವು ನೀರಿನೊಂದಿಗೆ ಕಲೆತು ಪಕ್ಕದ ಮನೆಗಳತ್ತ ನುಗುತ್ತಿದೆ ಎಂದು ಸ್ಥಳೀಯ ನಿವಾಸಿಗಳಾದ ಸೋಮೇಶ್‌ ಹೇಳಿದ್ದಾರೆ.   

ಕಣೆಕಲ್ ಬಸ್ ನಿಲ್ದಾಣದ ಮುಖ್ಯರಸ್ತೆಯಲ್ಲಿ ಕಾಲುವೆಗೆ ಸೇತುವೆ ಮಾಡಿ ಕೇವಲ ಆರು ತಿಂಗಳಾಗಿವೆ. ಅದಾಗಲೇ ಸೇತುವೆ ಮುಂಭಾಗದಲ್ಲಿ ಗುಂಡಿ ಬಿದ್ದಿದ್ದು, ಅಲ್ಲಿ ಸಂಗ್ರಹವಾಗುವ ನೀರು ಅಕ್ಕಪಕ್ಕದ ಮನೆಗಳಿಗೆಲ್ಲ ನುಗ್ಗುತ್ತಿದೆ. ಸೇತುವೆ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. 

10ನೇ ವಾರ್ಡ್‌ನ ಕುರುಬರ ಓಣಿಯ ಮೋರಿಗಳು ಕಸದಿಂದಲೇ ತುಂಬಿದ್ದು, ಮಳೆಯಾಗುತ್ತಲೇ ನೀರು ಮೋರಿಯಿಂದ ಹೊರಗೆಲ್ಲ ಹರಿಯುತ್ತದೆ. ಕುರುಬರ ಓಣಿಯ ರಸ್ತೆಗಳೆಲ್ಲವೂ ಚರಂಡಿಯಂತಾಗುತ್ತಿವೆ. 

ರೇವಣ ಸಿದ್ಧೇಶ್ವರ ದೇಗುಲದ ಪಕ್ಕದಲ್ಲೇ ಕಾಲುವೆ ಹರಿಯುತ್ತಿದ್ದು, ಒಂದೇ ಒಂದು ಮಳೆ ಬಂದರೆ, ಇಡೀ ಕಾಲುವೆ ನೀರೆಲ್ಲ ದೇಗುಲ ಪಕ್ಕದ ಜನವಸತಿ ಪ್ರದೇಶಗಳಿಗೆ ನುಗುತ್ತದೆ. ಮೋತಿ ಸರ್ಕಲ್‌ನಿಂದ ಬರುವ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ರಾಜಕಾಲುವೆ ಎತ್ತರದಲ್ಲಿದ್ದು, ವಸತಿ ಪ್ರದೇಶ ತಗ್ಗಿನಲ್ಲಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯ ನಿವಾಸಿ, ವಕೀಲ ವೀರೇಶ್‌ ಅವರು ಆರೋಪಿಸಿದ್ದಾರೆ. ಇಲ್ಲಿನ 150 ಕುಟುಂಬಗಳು ಮಳೆಯೆಂದರೆ ಭಯ ಪಡುತ್ತಿವೆ. 

ಕಣೇಕಲ್ ಬಸ್ ನಿಲ್ದಾಣದಿಂದ ರೂಪನಗುಡಿಗೆ ತೆರಳುವ ಮಾರ್ಗದಲ್ಲಿ ಸಿಗುವ ಬೃಹತ್‌ ಕಾಲುವೆಯು ಅಕ್ಷರಶಃ ದೊಡ್ಡ ತಿಪ್ಪೆಯಂತಾಗಿದೆ. ಕಾಲುವೆಯಲ್ಲಿ ಕಸದರಾಶಿಯೇ ತುಂಬಿದೆ. 

ಮಳೆಗೆ ಗುಂಡಿಬಿದ್ದ ರಸ್ತೆಗಳು: ನಗರದ ಹಲವು ರಸ್ತೆಗಳು ಗುಂಡಿ ಬಿದ್ದಿವೆ. ಸದ್ಯ ಮಳೆಯಿಂದಾಗಿ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದೆ. ನೀರು ನಿಂತು ಜನ, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಾಲಿಕೆ ಕೂಡಲೇ ಗುಂಡಿ ಮುಚ್ಚುವ ಕೆಲಸ ಆರಂಭಿಸಬೇಕು. ಇಲ್ಲವಾದರೆ, ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ ಎಂಬ ಅಭಿಪ್ರಾಯ ನಾಗರಿಕರಿಂದ ವ್ಯಕ್ತವಾಗಿದೆ.

ಕುರುಬರವೋಟಿಯ ರಸ್ತೆ ಮಾರ್ಗದಲ್ಲಿ ಕೆಸರಿನ ತ್ಯಾಜ್ಯ ಹರಡಿರುವುದು
ಕುರುಬರವೋಟಿಯ ರಸ್ತೆ ಮಾರ್ಗದಲ್ಲಿ ಕೆಸರಿನ ತ್ಯಾಜ್ಯ ಹರಡಿರುವುದು
ರಾಣಿ ತೋಟ ಪ್ರದೇಶಕ್ಕೆ ಸ್ವಾಗತ ನೀಡುತ್ತಿರುವ ಕಸ 
ರಾಣಿ ತೋಟ ಪ್ರದೇಶಕ್ಕೆ ಸ್ವಾಗತ ನೀಡುತ್ತಿರುವ ಕಸ 
ರಾಜಕಾಲುವೆಯಲ್ಲಿನ ಕಸವನ್ನು ತೆಗೆದು ನಮ್ಮ ಮನೆ ಎದುರೇ ಹಾಕಲಾಗುತ್ತಿದೆ. ಮೋರಿಯಿಂದ ತೆಗೆದ ಕಸವನ್ನು ಒಣಗಿದ ನಂತರ ತೆಗೆದುಕೊಂಡು ಹೋಗುವುದಾಗಿ ಪಾಲಿಕೆಯ ಸಿಬ್ಬಂದಿ ಹೇಳುತ್ತಾರೆ. ಈಗ ಮಳೆ ಸುರಿಯುತ್ತಿದೆ. ಕಸ ಒಣಗುವುದಿಲ್ಲ ಅದನ್ನು ಪಾಲಿಕೆ ಸಿಬ್ಬಂದಿ ವಿಲೇವಾರಿ ಮಾಡುತ್ತಿಲ್ಲ.
ಸೋಮೇಶ್‌ ರಾಣಿ ತೋಟ ನಿವಾಸಿ 
ರೇವಣ ಸಿದ್ದೇಶ್ವರ ದೇಗುಲಕ್ಕೆ ಹೊಂದಿಕೊಂಡಿರುವ ಪ್ರದೇಶ ರಾಜಕಾಲುವೆಗಿಂತಲೂ ತಗ್ಗಿನಲ್ಲಿದೆ. ಮಳೆ ಬಂದರೆ ಮೋರಿ ನೀರು ಮನೆಗಳಿಗೇ ನುಗ್ಗುತ್ತದೆ. ಹೀಗಾಗಿ ನಾವು ಮನೆ ಖಾಲಿ ಮಾಡಿ ಬೇರೆ ಮನೆಗಳಿಗೆ ಹೋಗಿದ್ದೇವೆ. ಪಾಲಿಕೆಯ ಯಾವ ಅಧಿಕಾರಿಯೂ ಬಂದು ಸಮಸ್ಯೆ ಕೇಳುತ್ತಿಲ್ಲ.  
–ವಾಣಿ ರೇವಣ ಸಿದ್ದೇಶ್ವರ ದೇಗುಲ ಪಕ್ಕದ ನಿವಾಸಿ 
ಮೋತಿ ಸರ್ಕಲ್‌ನಿಂದ ಬರುವ ಕೊಳಚೆ ನೀರು ಕುರುಬರ ಓಣಿಯ 150 ಮನೆಗಳಿಗೆ ತೊಂದರೆ ಉಂಟು ಮಾಡುತ್ತಿದೆ. ಮೋರಿ ನೀರು ನೇರವಾಗಿ ಮನೆಗಳಿಗೇ ನುಗ್ಗುತ್ತದೆ. ಮಳೆ ನಿಂತ ಮೇಲೆ ಚರಂಡಿ ನೀರಿನ ಬಸಿ ಇಡೀ ರಸ್ತೆಯನ್ನೇ ಆವರಿಸಿ ಕೊಚ್ಚೆಯಂತಾಗುತ್ತದೆ. ಮಳೆ ಮತ್ತು ನಂತರದ ಅವಾಂತರಗಳಿಂದ ಇಲ್ಲಿನ ಜನ ಹೈರಾಣಾಗಿದ್ದಾರೆ.
- ವಿರೂಪಾಕ್ಷ  ಬಳ್ಳಾರಿ ನಗರ ನಿವಾಸಿ  

ಆಯುಕ್ತರು ಏನಂತಾರೆ? 

ಮಳೆ ಬಂದಾಗ ಮನೆಗಳಿಗೆ ನುಗ್ಗುವ ಚರಂಡಿ ನೀರಿನ ಸಮಸ್ಯೆಗೆ ಜನರೇ ಕಾರಣ. ಜನ ಸೂಕ್ತ ರೀತಿ ಕಸ ವಿಲೇವಾರಿ ಮಾಡುತ್ತಿಲ್ಲ. ಕಾಲುವೆ ಹಾಗೂ ಮೋರಿಗಳಿಗೇ ಕಸ ಎಸೆಯುತ್ತಾರೆ. ಹೀಗಾಗಿ ನೀರು ಮುಂದೆ ಹರಿದು ಹೋಗದೆ ಮನೆಗಳಿಗೆ ನುಗ್ಗುತ್ತದೆ. ಕಾಲುವೆಗಳಿಂದ ಎಷ್ಟೇ ಕಸ ತೆಗೆದು ಹಾಕಿದರೂ ಜನ ಮತ್ತೆ ಮತ್ತೆ ಕಸ ಹಾಕುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಸಮಸ್ಯೆ ಬಗೆಹರಿಸಲು ಪಾಲಿಕೆ ಅಧಿಕಾರಿಗಳೆಲ್ಲರೂ ಶ್ರಮಿಸುತ್ತಿದ್ದಾರೆ ಎಂದು ಪಾಲಿಕೆ ಆಯುಕ್ತ ಖಲೀಲ್‌ ಸಾಬ್‌ ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT