ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಾರ್ದನ ರೆಡ್ಡಿಯಿಂದ ಬಿಜೆಪಿಗೆ ಅನುಕೂಲ: ಶ್ರೀರಾಮುಲು

Published 29 ಫೆಬ್ರುವರಿ 2024, 22:05 IST
Last Updated 29 ಫೆಬ್ರುವರಿ 2024, 22:05 IST
ಅಕ್ಷರ ಗಾತ್ರ

ಬಳ್ಳಾರಿ: ‘ಕಲ್ಯಾಣ ರಾಜ್ಯ ಪ್ರಗತಿ‌ಪಕ್ಷದ ನಾಯಕ, ಶಾಸಕ ಜನಾರ್ದನ ರೆಡ್ಡಿ ಅವರನ್ನು‌ ಬಿಜೆಪಿಗೆ ಸೇರಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿಪ್ರಾಯ ತಿಳಿಸಿರುವೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

‘ದೆಹಲಿಗೆ ಭೇಟಿ ನೀಡಿದ್ದ ವೇಳೆ ಅಮಿತ್ ಶಾ ಅವರು ಜನಾರ್ದನ ರೆಡ್ಡಿ ಬಗ್ಗೆ ಚರ್ಚಿಸಿದಾಗ, ರೆಡ್ಡಿ ಅವರು ಬಳ್ಳಾರಿ ಭಾಗದಲ್ಲಿ ಪ್ರಭಾವಿ ನಾಯಕ. ಅವರು ಮರುಸೇರ್ಪಡೆಯಾದರೆ, ಬಿಜೆಪಿಗೆ ಒಳ್ಳೆಯದಾಗುವುದು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದೆ. ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಗಮನಕ್ಕೂ ತಂದಿರುವೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ರೆಡ್ಡಿ ಮತ್ತು ನನ್ನ ನಡುವೆ ವೈಮನಸ್ಸು ಇರಬಹುದು. ಬೇರೆ ಬೇರೆ ಕಾರಣಕ್ಕೆ ದೂರ ಆಗಿರಬಹುದು. ಆದರೆ, ಅವರು ಪಕ್ಷಕ್ಕೆ ಬಂದರೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದರು.

ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಪರ ಮತ ಚಲಾಯಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಅವರ ಪಕ್ಷದ ನಿರ್ಧಾರ. ಅದರ ಬಗ್ಗೆ ನಾನು ಮಾತನಾಡಲ್ಲ’ ಎಂದರು.

ದೇವೇಂದ್ರಪ್ಪಗೇ ಟಿಕೆಟ್ ಕೊಟ್ಟರೆ ಅಭ್ಯಂತರವಿಲ್ಲ:

‘ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ನ್ನು ಹಾಲಿ ಸಂಸದ ದೇವೇಂದ್ರಪ್ಪ ಅವರಿಗೇ ಕೊಟ್ಟರೆ ಅಭ್ಯಂತರವಿಲ್ಲ. ಅವರ ಪರ ನಾವೆಲ್ಲ ದುಡಿಯುತ್ತೇವೆ. ಒಂದು ವೇಳೆ ನನಗೆ ನೀಡಿದರೂ ಸ್ಪರ್ಧಿಸುವೆ’ ಎಂದು ಶ್ರೀರಾಮುಲು ಹೇಳಿದರು.

ರಾಯಚೂರಿನಲ್ಲಿ ಸ್ಪರ್ಧಿಸುವ ಕುರಿತು ಕೇಳಲಾದ ಪ್ರಶ್ನೆಗೆ, ‘ನನಗೆ ಶಕ್ತಿ ಇರುವ  ಕಡೆಯಲೆಲ್ಲ ಪಕ್ಷದ ಪರ ಕೆಲಸ ಮಾಡಿರುವೆ. ರಾಯಚೂರಿನಲ್ಲೂ ನನ್ನ ಹೆಸರು ಕೇಳಿಬಂದಿದ್ದು ನಿಜ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT