ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಅಸ್ಪೃಶ್ಯತೆ ನಿರ್ಮೂಲನೆ ಸಮಾವೇಶ

Published 28 ಜನವರಿ 2024, 4:46 IST
Last Updated 28 ಜನವರಿ 2024, 4:46 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಪ್ರಜಾ ವಿಮೋಚನಾ ಚಳವಳಿಯ ವತಿಯಿಂದ ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಸಾಮಾಜಿಕ ಆರ್ಥಿಕ ಸಬಲೀಕಣಕ್ಕಾಗಿ ಸಮಾಲೋಚನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡು ಜಾತೀಯತೆಯಿಂದಾಗಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಪ್ರಜಾ ವಿಮೋಚನಾ ಚಳವಳಿಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ ಮಾತನಾಡಿ, ಭಾರತ ಸಂವಿಧಾನ ಅಂಗೀಕರಿಸಿಕೊಂಡು 75ವರ್ಷಗಳು ಕಳೆದಿದ್ದರೂ ಜಾತೀಯತೆ, ಮೇಲು ಕೀಳು ಎಂಬ ಭೇದಭಾವ ಇಂದಿಗೂ ಪ್ರಸ್ತುತವಾಗಿದೆ. ಇದು ಪ್ರಜಾಪ್ರಭುತ್ವದ ಅಭಿವೃದ್ಧಿಗೆ ಪೂರಕವಾದ ವಾತಾವರಣವಲ್ಲ ಎಂದರು.

ಸಮ ಸಮಾಜದ ನಿರ್ಮಾಣ ಬುದ್ಧ, ಬಸವ, ಅಂಬೇಡ್ಕರ್‌ ಅವರ ಸಿದ್ದಾಂತವಾಗಿದೆ. ಹಾಗಾಗಿ ಪ್ರತಿಯೊಬ್ಬರು ಸಾಮಾಜಿಕ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಆದರ್ಶ ಸಮಾಜವನ್ನು ನಿರ್ಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಂಘಟನೆಯ ವತಿಯಿಂದ ಸಮಾಲೋಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಅಂಬೇಡ್ಕರ್‌ ಅವರ ಸಂವಿಧಾನದಲ್ಲಿ ಸಮಾನತೆ ಮತ್ತು ಸಹೋದರತೆಗೆ ಹೆಚ್ಚಿನ ಮಹತ್ವವಿದೆ. ಅಂಬೇಡ್ಕರ್‌ ಅವರ ಚಿಂತನೆಗಳು ಸರ್ವಕಾಲೀಕವಾಗಿವೆ. ಶಿಕ್ಷಣ ಸಂಘಟನೆ ಮತ್ತು ಹೋರಾಟಗಳೆಂಬ ಮೂರು ಮೂಲ ಮಂತ್ರಗಳನ್ನು ಅಂಬೇಡ್ಕರ್‌ ಅವರು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಸಂವಿಧಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ವಿದ್ಯಾವಂತರು ಗಮನ ವಹಿಸಬೇಕು. ಯುವ ಸಮುದಾಯ ಭ್ರಷ್ಟಾಚಾರ, ಜಾತೀಯತೆಯ ವಿರುದ್ಧ ದನಿ ಎತ್ತುವ ಅವಶ್ಯಕತೆಯಿದೆ ಎಂದರು.

ಪಿವಿಸಿ ತಾಲ್ಲೂಕು ಕಾರ್ಯದರ್ಶಿ ಸಬ್‌ಮಂಗಲ ರವಿ ಮಾತನಾಡಿ, ಸಂವಿಧಾನದ ಶಕ್ತಿಯನ್ನು ಕುಂದಿಸುವ ಪ್ರಯತ್ನ ಮಾಡುವವರಿಗೆ ಜನತೆ ತಕ್ಕ ಪಾಠ ಕಲಿಸಬೇಕು. ಭಾರತ ಸಂವಿಧಾನ ಈ ದೇಶದ ಅಸ್ಮಿತೆಯಾಗಿದೆ, ಶಕ್ತಿಯಾಗಿದೆ. ಗ್ರಾಮೀಣ ಭಾಗದಲ್ಲಿ ಜಾತೀಯತೆಯನ್ನು ತೊಲಗಿಸಲು ಸಂಘಟನೆ ಸಂಕಲ್ಪ ಮಾಡಿದೆ ಎಂದರು.

ಮುಖಂಡರಾದ ಆದೂರು ದೇವರಾಜು, ಕೊಪ್ಪ ರಾಮಾಂಜಿ, ಮುನಿಯಪ್ಪ, ಸಂಪಿಗೆಹಳ್ಳಿ ದೊರೆ, ಬಸವರಾಜು, ರವಿಕುಮಾರ್‌, ಮುನಿರಾಜು, ಸಂತೋಷ್, ಪರುಶುರಾಮ್, ಮುನಿರತ್ನ, ಮುರುಳಿ, ಗಣೇಶ್, ಮೋಹನ್‌, ನಾಗರಾಜು, ದೇವರಾಜು, ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT