ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ | ಚುನಾವಣೆ ಬಹಿಷ್ಕಾರ, ಅಭ್ಯರ್ಥಿ ಪ್ರಚಾರಕ್ಕೆ ಪ್ರತಿರೋಧ

ಚನ್ನರಾಯಪಟ್ಟಣ: ಪ್ರತಿರೋಧ ಸಮಾವೇಶದಲ್ಲಿ ತೀರ್ಮಾನ
Published 14 ಏಪ್ರಿಲ್ 2024, 5:13 IST
Last Updated 14 ಏಪ್ರಿಲ್ 2024, 5:13 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟ ಧರಣಿ ಸ್ಥಳದಲ್ಲಿ ಶನಿವಾರ ನಡೆದ ‘ಪ್ರತಿರೋಧ ಸಮಾವೇಶದಲ್ಲಿ’ ಲೋಕಸಭಾ ಚುನಾವಣೆಯಲ್ಲಿ 13 ಹಳ್ಳಿಗಳ ರೈತರು ಮತದಾನ ಬಹಿಷ್ಕರಿಸಲು ಹಾಗೂ ಪ್ರಚಾರಕ್ಕೆ ಬರುವ ಅಭ್ಯರ್ಥಿಗಳ ರೈತ ವಿರೋಧಿ ಧೋರಣೆ ಖಂಡಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಸಮಾವೇಶದಲ್ಲಿ ಭಾಗಿಯಾಗಿದ್ದ ಕರ್ನಾಟಕ ಪ್ರಾಂತ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತ್‌ ಮಾತನಾಡಿ, ‘ಆಳುವ ಸರ್ಕಾರಗಳು ರೈತರಿಂದ ಫಲವತ್ತಾದ ಭೂಮಿಯನ್ನು ಕಸಿಯುವುದು ಆಡಳಿತದ ನೀತಿಯಾಗಿ ಹೋಗಿದೆ’ ಎಂದು ಆಕ್ರೋಶ ಹೊರಹಾಕಿದರು.

ಈಗಾಗಲೇ ರಾಜ್ಯದಲ್ಲಿ ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನವಾಗಿರುವ ಭೂಮಿಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗದೆ ಪಾಳು ಬಿದಿದ್ದು, ಅವುಗಳಿಗೆ ಕಾರ್ಪೋರೆಟ್‌ ಕಂಪನಿಗಳು ಬೇಲಿ ಹಾಕಿಕೊಂಡಿದೆ. ಇನ್ನೂ ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣಕ್ಕೆ ಸ್ವಾಧೀನಗೊಂಡ ಶೇ 80 ರಷ್ಟು ಭೂಮಿ ಖಾಲಿ ಇದ್ದರೂ ಮತ್ತೆ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿರುವುದು ರೈತ ವಿರೋಧಿ ಧೋರಣೆ ಅಲ್ಲದೇ ಮತ್ತೇನು ? ಎಂದು ಪ್ರಶ್ನಿಸಿದರು.

ಕಾರ್ಪೋರೆಟ್‌ ಭೂ ಕಬ್ಬಳಿಕೆಯ ಹುನ್ನಾರಕ್ಕೆ ಕಡಿವಾಣ ಹಾಕುವ ವಿಚಾರ ಚುನಾವಣಾ ಪ್ರಣಾಳಿಕೆಯಲ್ಲಿ ಯಾವ ಪಕ್ಷವೂ ಸೇರಿಸಿಲ್ಲ. ಈ ಭಾಗದ 13 ಹಳ್ಳಿ ಸೇರಿದಂತೆ ರಾಜ್ಯದಲ್ಲಿ ಬಕ್ಕರ್‌ ಹುಕ್ಕುಂ ಸಾಗುವಳಿದಾರರು, ಅರಣ್ಯ ಭೂಮಿ ಸಾಗುವಳಿದಾರರು ಭೂಮಿಯ ಹಕ್ಕಿಗಾಗಿ ಕಿರುಕುಳ ಅನುಭವಿಸುತ್ತಿದ್ದು 20 ಲಕ್ಷ ಎಕರೆ ಭೂಮಿ ಆಪತ್ತಿನಲ್ಲಿದೆ ಎಂದು ಎಚ್ಚರಿಸಿದರು.

ಬಲವಂತದ ಭೂ ಸ್ವಾಧೀನಕ್ಕೆ ಅವಕಾಶ ಮಾಡಿಕೊಡುವ ಕಾಯಿದೆಗಳನ್ನು ಕಸದ ಬುಟ್ಟಿಗೆ ಹಾಕಬೇಕು. ರೈತ ವಿರೋಧ ಧೋರಣೆ ನಾಯಕರ ಬಿಟ್ಟು, ಕೃಷಿಕರ ಪರವಾದ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು. ಕೈಗಾರಿಕೆ ಉದ್ದೇಶಕ್ಕೆ ವಶಕ್ಕೆ ಪಡೆದು ಪಾಳು ಬಿಟ್ಟಿರುವ ಭೂಮಿಯನ್ನು ಸರ್ಕಾರ ಮರು ವಶಕ್ಕೆ ಪಡೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು ಎಂದು ಒತ್ತಾಯಿಸಿದರು.

ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ ಮಾತನಾಡಿ, ಸರ್ಕಾರ ರೈತ ಹೋರಾಟದ ಬಗ್ಗೆ ಉದಾಸೀನ ತೋರುತ್ತಿದೆ. ಇನ್ನೆಷ್ಟು ದಿನ ಹೋರಾಟ ಮಾಡುತ್ತಾರೆ ಎಂದು ಅಸಡ್ಡೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧರಣಿ ಎಷ್ಟು ದಿನ ಮಾಡಿದ್ದೇವೆ ಎನ್ನುವುದಕ್ಕಿಂತ, ಸಮಸ್ಯೆಗೆ ಯಾವ ರೀತಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂಬುದನ್ನು ಚಿಂತಿಸಿ ಎಂದು ಸಲಹೆ ನೀಡಿದರು.

ರೈತರ ಮಕ್ಕಳಿಗೆ ಉದ್ಯೋಗ ಕೊಡಿಸುತ್ತೇವೆ ಎಂದು ತಾಲ್ಲೂಕಿನ ಫಲವತ್ತಾದ ಭೂಮಿಯನ್ನು ಕಸಿದು, ಏರ್‌ಪೋರ್ಟ್‌ನಲ್ಲಿ ಕೃಷಿಕರ ಮಕ್ಕಳ ಕೈಯಲ್ಲಿ ಕಕ್ಕಸು ಗುಂಡಿಗಳನ್ನು ಸ್ವಚ್ಛಗೊಳ್ಳಿಸುತ್ತಿದ್ದಾರೆ. ಬಿಡಿಗಾಸು ಹಣ ನೀಡಿ ಅವರ ಜೀವನವನ್ನೇ ಹಾಳು ಮಾಡಿರುವ ಕೀರ್ತಿ ಸರ್ಕಾರದ್ದು  ಎಂದು ವಾಗ್ದಾಳಿ ನಡೆಸಿದರು.

ದಲಿತ ಮುಖಂಡ ಶ್ರೀನಿವಾಸ್ ಪ್ರಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳು ಎರಡು ಒಂದೇ ನಾಣ್ಯದ ಎರಡು ಮುಖದಂತೆ. ಹಳೆಯ ಸರ್ಕಾರದ ನೀತಿಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರಗಳು ರೈತರನ್ನು ದಮನ ಮಾಡಿ, ಹಕ್ಕನ್ನು ಕಸಿದು, ಅವರ ಧ್ವನಿಯನ್ನು ಅಡಗಿಸಿ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಎಲ್ಲಾ ರಾಜಕೀಯ ಪಕ್ಷಗಳ ನಿಲುವು ರೈತ ವಿರೋಧಿ ಆಗಿದ್ದು, ಅವರ ಧೋರಣೆ ಖಂಡಿಸಿ ಪ್ರತಿರೋಧ ಒಡ್ಡುವುದಕ್ಕೆ ಈ ಸಮಾವೇಶ ಮಾಡಲಾಗುತ್ತಿದೆ ಎಂದರು.

ಕನ್ನಡಿಗರು ಪರಕೀಯರಂತೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹುಟ್ಟಿದ ಭೂಮಿಯ ಉಳಿವಿಗಾಗಿ ಹೋರಾಟಕ್ಕೆ ದುಮ್ಮುಕ್ಕುವ ಅನಿವಾರ್ಯತೆ ಎದುರಾಗಿದೆ. ಅನ್ನ ತಿನ್ನುವ ಪ್ರತಿಯೊಬ್ಬರು ಹೋರಾಟ ಬೆಂಬಲಿಸಬೇಕಿದ್ದು. ಈಗಾಗಲೇ ರಾಜ್ಯದಾದ್ಯಂತ ಕಾರ್ಮಿಕ, ರೈತ, ದಲಿತ, ಮಹಿಳಾ, ಭಾಷಾವಾರು, ವಿದ್ಯಾರ್ಥಿ ಸಂಘಟನೆಗಳು ರೈತ ಪರವಾಗಿ ಧ್ವನಿ ಎತ್ತಿವೆ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕರು ಮಾವಳ್ಳಿ ಶಂಕರ್‌, ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷರು ಚಂದ್ರ ತೇಜಸ್ವಿ, ರೈತ ಹೋರಾಟಗಾರ ಜಿ.ಜಿ ಹಳ್ಳಿ ನಾರಾಯಣಸ್ವಾಮಿ, ಸುವರ್ಣ ಕರ್ನಾಟಕ ಜನಪರ ವೇದಿಕೆಯ ಜಯಪ್ರಕಾಶ್‌, ಪ್ರಭಾ ಬೆಳವಂಗಲ, ದಲಿತ ಮುಖಂಡ ಸಿದ್ಧಾರ್ಥ್‌, ಸಂಶೋಧಕಿ ಎ.ಆರ್‌.ವಾಸವಿ, ವಕೀಲ ಸಂಘದ ಹರೀಂದ್ರ, ವಿದ್ಯಾರ್ಥಿ ಸಂಘಟನೆಯ ಶರತ್‌ ಇದ್ದರು.

ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಮಿಕ ರೈತ ದಲಿತ ಮಹಿಳಾ ಭಾಷಾವಾರು ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳು ರೈತರು
ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಮಿಕ ರೈತ ದಲಿತ ಮಹಿಳಾ ಭಾಷಾವಾರು ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳು ರೈತರು

Cut-off box - ಸಿ.ಎಂಗೆ ಮರೆವಿನ ಕಾಯಿಲೆ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಇದೇ ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ನಡೆಸುವ ವೇಳೆ ಸ್ಥಳಕ್ಕೆ ಬಂದಿದ್ದ ಸಿದ್ಧರಾಮಯ್ಯ ಅವರು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಮಾಡಲು ಬಿಡುವುದಿಲ್ಲ. ಅಧಿವೇಶನದಲ್ಲಿ ಪ್ರತಿಭಟಿಸುತ್ತೇನೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಸ್ವಾಧೀನ ಪ್ರಕ್ರಿಯೆ ರದ್ದು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅವರಿಗೆ ಮರೆವಿನ ಕಾಯಿಲೆ ಇರಬೇಕು. ಅದರ ಚಿಕಿತ್ಸೆಗೆ ರೈತರೇ ಹಣ ಕೊಟ್ಟು ಆರೈಕೆ ಮಾಡಿಸಬೇಕಿದ್ದು ಅವರ ಮಾತನ್ನು ಇನ್ನೊಮ್ಮೆ ನೆನಪಿಸಬೇಕಿದೆ. ರೈತರನ್ನು ಸಭೆಗೆ ಕರೆದು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಬುದ್ಧಿ ಹೇಳಿ ಕಳಿಸುತ್ತಾರೆ ಎಂದು ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT