ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ದಶಕ ಕಳೆದರೂ ಸರಿಯಾಗದ ಒಳಚರಂಡಿ ವ್ಯವಸ್ಥೆ

ಚರಂಡಿ ಅವ್ಯವಸ್ಥೆ, ರಸ್ತೆ, ಮನೆಗಳಿಗೆ ನುಗ್ಗುವ ಕೊಳಚೆ ನೀರು
ನಟರಾಜ ನಾಗಸಂದ್ರ
Published 11 ಮಾರ್ಚ್ 2024, 4:30 IST
Last Updated 11 ಮಾರ್ಚ್ 2024, 4:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ : ದೆಹಲಿಯ ಹಸಿರು ನ್ಯಾಯಮಂಡಳಿಯಿಂದ ಮೊದಲುಗೊಂಡು ನಗರದ ಸಾರ್ವಜನಿಕರು, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳವರೆಗೂ ಈಗ ಬಹು ಚರ್ಚಿತ ವಿಷಯ ಮತ್ತು ಸಮಸ್ಯೆ ಆಗಿರುವುದು ನಗರಸಭೆ ವ್ಯಾಪ್ತಿಯಲ್ಲಿನ ಒಳಚರಂಡಿ ಅವ್ಯವಸ್ಥೆ ಕುರಿತಂತೆ.

ಹೌದು, ಬೆಳೆಯುತ್ತಿರುವ ಜನಸಂಖ್ಯೆ, ನಗರದ ವಿಸ್ತಾರ... ಇದ್ಯಾವುದನ್ನು ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡದೆ ಒಳಚರಂಡಿ ನಿರ್ಮಿಸಿ 2009ರಲ್ಲಿ ಉಪಯೋಗಕ್ಕೆ ಮುಕ್ತಗೊಳಿಸಲಾಯಿತು.

ಇದರಿಂದ ಒಳಚರಂಡಿಯಲ್ಲಿನ ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ನಗರದಲ್ಲಿನ ರಸ್ತೆಗಳಲ್ಲಿ ಹುಕ್ಕಿ ಹರಿಯುತ್ತಿವೆ. ನೀರಿನ ಒತ್ತಡಕ್ಕೆ ಮ್ಯಾನ್‌ ಹೋಲ್‌ಗಳು ಕುಸಿದು ಬೀಳುತ್ತಿವೆ. ಅದರಲ್ಲೂ ಈಗಷ್ಟೇ ಬೆಳೆಯುತ್ತಿರುವ ನಗರದಂಚಿನ ಬಡಾವಣೆಗಳಲ್ಲಿ ಒಳಚರಂಡಿಯೇ ಇಲ್ಲಿನ ನಿವಾಸಿಗಳಿಗೆ ಶಾಪವಾಗಿ ಪರಿಣಮಿಸಿದೆ.

ಮನೆ ಮುಂದಿನ ರಸ್ತೆಗಳಲ್ಲಿ ಒಳಚರಂಡಿ ನೀರು ಹರಿಯುತ್ತಿದೆ. ರಸ್ತೆಗಳ ಮಧ್ಯದಲ್ಲೇ ಉಂಟಾಗಿರುವ ಗುಂಡಿಗಳಲ್ಲಿ ನಿಂತಿರುವ ಚರಂಡಿ ನೀರಿನ ದುರ್ನಾತ, ಸೊಳ್ಳೆಗಳ ಹಾವಳಿಗೆ ಸ್ಥಳೀಯ ನಿವಾಸಿಗಳು ಹೈರಾಣಾಗಿ ಹೋಗಿದ್ದಾರೆ. ನಗರಸಭೆ ಅಂಚಿನ ಬಡಾವಣೆಗಳಾದ ಪ್ರಿಯದರ್ಶಿನಿ, ಟಿ.ಬಿ.ನಾರಾಯಣಪ್ಪ, ಕರೇನಹಳ್ಳಿ, ಭುವನೇಶ್ವರಿ ನಗರ, ಮುತ್ತೂರು, ಮುತ್ಸಂದ್ರ ಭಾಗದಲ್ಲಿ ಒಳಚರಂಡಿಯ ಸಮಸ್ಯೆ ತೀವ್ರಗೊಂಡಿದೆ.

ಇತ್ತೀಚೆಗೆ ನಗರಸಭೆಯಲ್ಲಿ ನಡೆದ ಮಾಸಿಕ ಸಭೆಯಲ್ಲೂ ಒಳಚರಂಡಿ ಅವ್ಯವಸ್ಥೆ ಕುರಿತು ಹೆಚ್ಚು ಚರ್ಚಿತವಾಯಿತು. ಆದರೆ ತಾರ್ಕಿಕ ಅಂತ್ಯಕಾಣದೆ ಮುಕ್ತಾಯವಾಯಿತು.

ಸಭೆಯಲ್ಲಿ ಸದಸ್ಯರು ಚರ್ಚಿಸಿದಂತೆ ‘ನಗರಸಭೆಯಲ್ಲಿ 27,000 ಆಸ್ತಿಗಳು ನೋಂದಣಿಯಾಗಿವೆ. ಇವುಗಳ ಪೈಕಿ ಸುಮಾರು 18 ಸಾವಿರ ಮನೆಗಳಿವೆ. ಅಧಿಕೃತವಾಗಿ ಒಳಚರಂಡಿ ಸಂಪರ್ಕ ಪಡೆದಿರುವುದು 7,000 ಮನೆಗಳವರು ಮಾತ್ರ. ಒಳಚರಂಡಿಯಲ್ಲಿ ನೀರು ಹರಿಯಲು ಪ್ರಾರಂಭವಾಗಿ ಒಂದು ದಶಕ ಪೂರೈಸಿದೆ. ಆದರೆ ಇದುವರೆಗೂ ಸುಮಾರು 11 ಸಾವಿರ ಮನೆಗಳವರು ಒಳಚರಂಡಿ ಸಂಪರ್ಕವನ್ನೇ ಪಡೆದಿಲ್ಲ. ಇವುಗಳಲ್ಲಿ ಅನಧಿಕೃತ ಸಂಪರ್ಕಗಳು ಸೇರಿಕೊಂಡಿವೆ.

ಒಳಚರಂಡಿ ನೀರು ಶುದ್ದೀಕರಣದ ವಿದ್ಯುತ್‌ ಬಿಲ್‌, ಕಾರ್ಮಿಕರ ವೇತನ, ಮ್ಯಾನ್‌ಹೋಲ್‌ಗಳು ಬಂದ್‌ ಆಗುವ ಸಂದರ್ಭದಲ್ಲಿ ಕೆಲಸ ಮಾಡಲು ಎರಡು ವಾಹನಗಳು ಸೇರಿದಂತೆ ಇವುಗಳ ನಿರ್ವಹಣೆಗಾಗಿ ನಗರಸಭೆ ವತಿಯಿಂದ ವಾರ್ಷಿಕ ₹75 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಆದರೆ ಒಳಚರಂಡಿ ಸಂಪರ್ಕ ಪಡೆದಿರುವ ಕುಟುಂಬಗಳಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆಯುತ್ತಿಲ್ಲ. ಹೀಗಾಗದರೆ ನಿರ್ವಹಣೆ ಮಾಡುವುದು ಹೇಗೆ’ ಎಂದು ಬಹುತೇಕ ಸದಸ್ಯರು ಚರ್ಚಿದರು. ಆದರೆ ಇದಕ್ಕೆ ಪರಿಹಾರವನ್ನು ಮಾತ್ರ ಕಂಡುಕೊಳ್ಳಲೇ ಇಲ್ಲ.

ಈಗ ಆಗಬೇಕಿರುವುದು ಏನು ?

ನಗರದಲ್ಲಿನ ಎಲ್ಲಾ 18 ಸಾವಿರ ಮನೆಗಳು ಕಾಲಮಿತಿಯಲ್ಲಿ ಕಡ್ಡಾಯವಾಗಿ ಒಳಚರಂಡಿಯ ಅಧಿಕೃತ ಸಂಪರ್ಕ ಪಡೆಯಬೇಕು. ನೀರಿನ ಶುಲ್ಕದಂತೆ ಒಳಚರಂಡಿ ಶುಲ್ಕವು ನಿಗದಿಯಂತೆ ವಸೂಲಿ ಮಾಡಬೇಕು. ಒಳಚರಂಡಿ ನಿರ್ವಹಣೆಗಾಗಿ ಈಗ ಇರುವ ಸಿಬ್ಬಂದಿ, ವಾಹನಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚು ಮಾಡಬೇಕು. ಒಳಚರಂಡಿ ವ್ಯವಸ್ಥೆಯ ಎಲ್ಲಾ ಅಂಕಿ ಅಂಶಗಳ ನಿರ್ವಹಣೆ ಗಣಕೀಕೃತವಾಗಬೇಕು. ಒಳಚರಂಡಿ ಸಮಸ್ಯೆ ಕುರಿತಂತೆ ಸಾರ್ವಜನಿಕರು ಆನ್‌ಲೈನ್‌ ಮೂಲಕ ದೂರು ಸಲ್ಲಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎನ್ನುತ್ತಾರೆ ಪ್ರಜ್ಞಾವಂತರು.

***

ಅಂಕಿ ಅಂಶ

7,000

ಅಧಿಕೃತ ಸಂಕರ್ಪ

11,000

ಬಾಕಿರುವ ಸಂಪರ್ಕ

27,000

ನಗರಸಭೆಯಲ್ಲಿ ಆಸ್ತಿಗಳ ನೊಂದಣಿ

₹75 ಲಕ್ಷ ವೆಚ್ಚ

ಒಳಚರಂಡಿ ವಾರ್ಷಿಕ ನಿರ್ವಹಣೆಗೆ 

ದೊಡ್ಡಬಳ್ಳಾಪುರದ ನಗರದ ಪ್ರಮುಖ ರಸ್ತೆಗಳಲ್ಲಿ ಕುಸಿದ ಬಿದ್ದಿರುವ ಮ್ಯಾನ್‌ ಹೋಲ್‌ಗಳು
ದೊಡ್ಡಬಳ್ಳಾಪುರದ ನಗರದ ಪ್ರಮುಖ ರಸ್ತೆಗಳಲ್ಲಿ ಕುಸಿದ ಬಿದ್ದಿರುವ ಮ್ಯಾನ್‌ ಹೋಲ್‌ಗಳು
ಮ್ಯಾನ್‌ ಹೋಲ್‌ ನಿಂದ ಪ್ರವಾಹದಂತೆ ಹುಕ್ಕುತ್ತಿರುವ ಒಳಚರಂಡಿ ನೀರು
ಮ್ಯಾನ್‌ ಹೋಲ್‌ ನಿಂದ ಪ್ರವಾಹದಂತೆ ಹುಕ್ಕುತ್ತಿರುವ ಒಳಚರಂಡಿ ನೀರು
ಆರ್‌.ಅಶ್ವತ್ಥಯ್ಯ
ಆರ್‌.ಅಶ್ವತ್ಥಯ್ಯ
ಗಾಯಿತ್ರಿ
ಗಾಯಿತ್ರಿ
ವಿ.ಎಸ್‌.ರವಿಕುಮಾರ್‌
ವಿ.ಎಸ್‌.ರವಿಕುಮಾರ್‌

ಜನರ ಅಭಿಪ್ರಾಯ: ಮನವಿ ಸಲ್ಲಿಸಿ ಬೇಸತ್ತು ಹೋಗಿದ್ದೇವೆ ಎಲ್ಲರ ಮನೆಯಲ್ಲಿ ರಾತ್ರಿ ವೇಳೆ ಸೊಳ್ಳೆಗಳ ಕಾಟವಿದ್ದರೆ ನಮ್ಮ ಮನೆ ಸೇರಿದಂತೆ ಈ ಭಾಗದಲ್ಲಿ ಎಲ್ಲಾ ಸಮಯದಲ್ಲೂ ಸೊಳ್ಳೆ ಹಾವಳಿ ಇದ್ದೇ ಇರುತ್ತದೆ. ಇದಕ್ಕೆ ಕಾರಣ ಇಲ್ಲಿನ ಒಳಚರಂಡಿಗಳ ಅವ್ಯವಸ್ಥೆ. ನಗರಸಭೆಗೆ ಮನವಿ ಮಾಡಿ ಬೇಸತ್ತು ಹೋಗಿದ್ದೇವೆ. ಮನೆಯಲ್ಲಿನ ತ್ಯಾಜ್ಯ ನೀರನ್ನು ತೆರೆದ ಚಂಡಿಗಳಿಗೆ ಬಿಡಲು ಅವಕಾಶ ಇಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಒಳಚರಂಡಿಗಳಿಂದಾಗಿ ಮುಂದೆಕ್ಕೆ ಹೋಗಬೇಕಿರುವ ಕೊಳಚೆ ನೀರು ಹಿಮ್ಮುಖವಾಗಿ ಹರಿಯುತ್ತ ಎಲ್ಲೆಂದರಲ್ಲಿ ಮ್ಯಾನ್‌ ಹೋಲ್‌ಗಳಿಂದ ಹೊರಗೆ ಹರಿಯುತ್ತಿವೆ. ಆರ್‌.ಅಶ್ವತ್ಥಯ್ಯ ಪ್ರಿಯದರ್ಶಿನಿ ಬಡಾವಣೆ ನಿವಾಸಿ ತೆರಿಗೆ ಪಾವಸಿದರೂ ಸೌಲಭ್ಯ ಶೂನ್ಯ ಮನೆ ತೆರಿಗೆ ನೀರಿನ ಶುಲ್ಕ ಒಳಚರಂಡಿ ಸಂಪರ್ಕದದ ಠೇವಣಿ ಸೇರಿದಂತೆ ಎಲ್ಲವನ್ನು ಪ್ರತಿ ವರ್ಷವು ಪಾವತಿ ಮಾಡುತ್ತೇವೆ. ಆದರೆ ನಗರಸಭೆ ವತಿಯಿಂದ ನಮಗೆ ದೊರೆಯುತ್ತಿರುವ ಸೌಲಭ್ಯ ಮಾತ್ರ ಶೂನ್ಯ. ನಗರಸಭೆಯಲ್ಲಿನ ಎಂಜಿನಿಯರ್‌ಗಳ ಎಡವಟ್ಟಿನಿಂದ ಅವೈಜ್ಞಾನಿಕವಾಗಿ ನಿರ್ಮಾಣ ಆಗಿರುವ ಚರಂಡಿಯಿಂದ ಮಳೆ ನೀರು ಚರಂಡಿಗಳಿಂದ ಮನೆಗೆ ನುಗ್ಗುತ್ತಿದೆ. ಕನಿಷ್ಠ ನಾಗರೀಕ ಸೌಲಭ್ಯವನ್ನು ಕಲ್ಪಿಸದೇ ಇದ್ದರೆ ನಾವು ಯಾವ ಸುಖಕ್ಕಾಗಿ ಮತದಾನ ಮಾಡಬೇಕು. ಗಾಯಿತ್ರಿ ಪ್ರಿಯದರ್ಶಿನಿ ಬಡಾವಣೆ ನಿವಾಸಿ. ನಗರದ ಸ್ವಚ್ಛತೆಗೆ ಪ್ರಥಮ ಆದ್ಯತೆ ದೊರೆಯಬೇಕಿದ್ದರೆ ಮೊದಲು ಒಳಚರಂಡಿ ಅವ್ಯವಸ್ಥೆ ಸರಿಯಾಗಬೇಕಿದೆ. ನಗರಸಭೆ ವ್ಯಾಪ್ತಿಯಲ್ಲಿನ ಮನೆ ತೆರಿಗೆ ನೀರಿನ ತೆರಿಗೆ ಒಳಚರಂಡಿ ತೆರಿಗೆ ಸೇರಿದಂತೆ ಎಲ್ಲವೂ ಗಣಕೀಕೃತವಾಗಬೇಕು. ನಗರಸಭೆ ವ್ಯಾಪ್ತಿಯಮನೆಗಳ ಸಂಖ್ಯೆ ವಾಣಿಜ್ಯ ಮಳಿಗೆಗಳು ತೆರಿಗೆ ಪಾವತಿ ಸೇರಿದಂತೆ ಯಾವುದೇ ಅಂಕಿ ಅಂಶಗಳು ಸಹ ಅಧಿಕೃತವಾಗಿಲ್ಲ. ನಾಗರೀಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ನಗರಸಭೆಗೆ ಆದಾಯ ಹೆಚ್ಚಾಗಬೇಕು. ಇದಕ್ಕೆ ನಿಖರವಾದ ಅಂಶಗಳ ಅಗತ್ಯವಿದೆ. ಎಲ್ಲಾ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ತರುವ ಮೂಲಕ ಸಮೀಕ್ಷೆ ನಡೆಸಿ ನಿಖರವಾದ ಅಂಕಿ ಅಂಶಗಳನ್ನು ಸಂಗ್ರಹ ಮಾಡಿ ಗಣಕೀಕೃತ ವ್ಯವಸ್ಥೆ ಜಾರಿಯಾಗುವಂತೆ ಮಾಡಬೇಕಿದೆ. ವಿ.ಎಸ್‌.ರವಿಕುಮಾರ್‌ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT