ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕಾಗಿ ಪ್ರಧಾನಿ ಕೀಳು ಭಾಷಣ: ಹೇಮಲತ

ಸಿಪಿಐ(ಎಂ) ಅಭ್ಯರ್ಥಿ ಪರ ಪ್ರಚಾರ
Published 24 ಏಪ್ರಿಲ್ 2024, 4:50 IST
Last Updated 24 ಏಪ್ರಿಲ್ 2024, 4:50 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅಧಿಕಾರದ ಆಸೆಗಾಗಿ ದೇಶದ ಪ್ರಧಾನೊಯೊಬ್ಬರು ಅತ್ಯಂತ ಕೀಳು ಮಟ್ಟದ ಭಾಷಣ ಮಾಡಿರುವುದು ಇದೇ ಮೊದಲು. ಬಿಜೆಪಿ ಅವರಿಂದ ದೇಶದ ಮಹಿಳೆಯರು ಗೌರವ ನಿರೀಕ್ಷೆ ಮಾಡುವುದು ಕನಸಿನ ಮಾತಾಗಲಿದೆ ಎಂದು ಸಿಪಿಐ(ಎಂ) ರಾಷ್ಟ್ರೀಯ ಮುಖಂಡರಾದ ಹೇಮಲತ ಹೇಳಿದರು.

ನಗರದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಅವರ ಪರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ದಿನ ನಿತ್ಯದ ಜೀವನಕ್ಕೆ ಸಂಬಂಧವೇ ಇಲ್ಲದ ಧರ್ಮ, ಜಾತಿ, ಪ್ರಾದೇಶಿಕತೆಯ ಕುರಿತು ಮೋದಿ ಅವರು ಮಾತನಾಡುತ್ತ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಮರೆಮಾಚುತ್ತಿದ್ದಾರೆ. ದೇಶದ ನಿರುದ್ಯೋಗ, ಕಾರ್ಮಿಕರ ಸಮಸ್ಯೆ, ರೈತರ ಕಷ್ಟದ ಬಗ್ಗೆ ಮಾತನಾಡುವ ಧೈರ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರಿಗೆ ಇಲ್ಲ ಎಂದು ಟೀಕಿಸಿದರು.

ಅಡುಗೆ ಅನಿಲ ಸೇರಿದಂತೆ ದಿನ ನಿತ್ಯದ ಎಲ್ಲಾ ಬಳಕೆಯ ವಸ್ತುಗಳ ಬೆಲೆ ಏರುತ್ತಲೇ ಹೋಗುತ್ತಿದೆ. ಜನರ ಆದಾಯ, ಖರೀದಿಸುವ ಶಕ್ತಿ ಕುಸಿಯುತ್ತಲೇ ಇದೆ. ಈ ಹಿಂದೆ ಮೋದಿ ಅವರು ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಈಗ ಮತ್ತೆ ಗ್ಯಾರಂಟಿ ಹೆಸರಿನಲ್ಲಿ ಮತದಾರರನ್ನು ವಂಚಿಸಲು ಟೋಟ್ಯಂತರ ರೂಪಾಯಿ ಖರ್ಚು ಮಾಡಿ ಅಬ್ಬದರ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದರು.

ದೇಶದಲ್ಲಿ ಹೊಸ ಉದ್ಯೋಗ ಸೃಷ್ಠಿಯೇ ಇಲ್ಲದಾಗಿವೆ. ಇರುವ ಉದ್ಯೋಗಗಳಿಗೂ ಭದ್ರತೆ ಇಲ್ಲದಾಗಿದೆ. ರೈತರು, ಕಾರ್ಮಿಕರು ಎಲ್ಲರೂ ಸಾಲದ ಸುಳಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. ಐಐಟಿಯಲ್ಲಿ ಪದವಿ ಪಡೆದವರೆಗೂ ಉದ್ಯೋಗ ಇಲ್ಲದಾಗಿದೆ. ಬಿಜೆಪಿ ಪ್ರಣಾಳಿಕೆ ನಂಬಿ ಮತ ಹಾಕಿದರೆ ಮತ್ತೆ ಜನರು ಮೋಸಕ್ಕೆ ಒಳಗಾಗುವುದು ತಪ್ಪಿದ್ದಲ್ಲ ಎಂದು ದೂರಿದರು.

ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮೀ ಮಾತನಾಡಿ, ಹುಬ್ಬಳ್ಳಿಯಲ್ಲಿನ ನೇಹಾ ಹಿರೇಮಠ ಕೊಲೆಯನ್ನು ಎಲ್ಲರೂ ಖಂಡಿಸಲೇಬೇಕು. ಆದರೆ ನೇಹಾ ಹಿರೇಮಠ ಅವರಂತೆ ಎಲ್ಲಾ ಮಹಿಳೆಯರ ಬಗ್ಗೆಯೂ ಬಿಜೆಪಿ ಮುಖಂಡರು ಕಾಳಜಿವಹಿಸಬೇಕು. ಮಣಿಪುರದ ಬೀದಿಗಳಲ್ಲಿ ಮಹಿಳೆಯರ ಮಾನಹಾನಿ ಆಗುತ್ತಿದ್ದರು. ಮಹಿಳೆಯರು ಬೇಡಿಕೊಂಡರು ದೇಶದ ಪ್ರಧಾನಿ, ಗೃಹ ಸಚಿವರು ಕನಿಷ್ಠ ಅಲ್ಲಿನ ಮಹಿಳೆಯರ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ ಎಂದು ದೂರಿದರು.

ಪ್ರಚಾರ ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ, ಸಿಪಿಐ(ಎಂ) ಕೇಂದ್ರ ಮಂಡಳಿ ಸದಸ್ಯ ಗೋಪಾಲಕೃಷ್ಣ ಅರಹಳ್ಳಿ, ಸಿಪಿಐ(ಎಂ)ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಮುಖಂಡರಾದ ಆರ್‌.ಚಂದ್ರತೇಜಸ್ವಿ, ಪಿ.ಎ.ವೆಂಕಟೇಶ್‌, ರುದ್ರಾಆರಾದ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT