ವಿವಿಧ ಜಾತಿಯ ಬೀಜಗಳ ನೇರ ಬಿತ್ತನೆ

7
ದೇವರಬೆಟ್ಟದ ತಪ್ಪಲಿನಲ್ಲಿ ಹಸಿರು ಆಂದೋಲನ

ವಿವಿಧ ಜಾತಿಯ ಬೀಜಗಳ ನೇರ ಬಿತ್ತನೆ

Published:
Updated:
Deccan Herald

 ದೊಡ್ಡಬಳ್ಳಾಪುರ: ಎಸ್‌.ಎಸ್‌. ಘಾಟಿ ಸಮೀಪದ ದೇವರಬೆಟ್ಟ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿರುವ ಭೂಮಿಯಲ್ಲಿ ವಿವಿಧ ಜಾತಿಯ ಬೀಜಗಳನ್ನು ನೇರ ಬಿತ್ತನೆ ಮಾಡಲಾಯಿತು.

ಹಸಿರು ಕರ್ನಾಟಕ ಆಂದೋಲನದ ಭಾಗವಾಗಿ ವಲಯ ಅರಣ್ಯ ಇಲಾಖೆ, ಯುವ ಸಂಚಲನ ತಂಡ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್ಎಸ್‌ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ವಲಯ ಅರಣ್ಯ ಅಧಿಕಾರಿ ನಟರಾಜು ಮಾತನಾಡಿ, ರಾಷ್ಟ್ರೀಯ ಅರಣ್ಯ ನೀತಿಯಂತೆ ಒಟ್ಟು ಭೂ ಪ್ರದೇಶದ ಶೇ33 ರಷ್ಟು ಪ್ರದೇಶವು ಹಸಿರು ಹೊದಿಕೆಯಿಂದ ಕೂಡಿರಬೇಕು. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ 8ರಷ್ಟು ಮಾತ್ರ ಅರಣ್ಯ ಇದೆ. ಇದು ಸರಾಸರಿ ಮಟ್ಟಕಿಂತ ಕಡಿಮೆ ಪ್ರಮಾಣದಲ್ಲಿದೆ ಎಂದರು.

ಹಸಿರು ಕರ್ನಾಟಕ ಆಂದೋಲನದ ಅಡಿ ಸಾಮಾಜಿಕ ಅರಣ್ಯಕ್ಕೆ ಒತ್ತು ಕೊಡಲಾಗಿದೆ. ಪರಿಸರಾತ್ಮಕವಾಗಿ ಕೆಲಸ ಮಾಡುವ ಸಂಘಟನೆಗಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಮನೆಗೊಂದು ಮರ, ಊರಿಗೊಂದು ವನ, ತಾಲ್ಲೂಕಿಗೊಂದು ಕಿರು ಅರಣ್ಯ ಮತ್ತು ಜಿಲ್ಲೆಗೊಂದು ಕಾಡು ಬೆಳೆಸುವುದು ಆಂದೋಲನದ ಧ್ಯೇಯವಾಗಿದೆ ಎಂದರು.

ಇದರ ಅಂಗವಾಗಿ ಆ.15 ರಿಂದ 18ರ ಮೂರು ದಿನಗಳವರೆಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇವರಬೆಟ್ಟ ಅರಣ್ಯ ಪ್ರದೇಶದಲ್ಲಿ ನೇರ ಬಿತ್ತನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಯುವ ಸಂಚಲನದ ಅಧ್ಯಕ್ಷ ಚಿದಾನಂದ್ ಮಾತನಾಡಿ, ಹಸಿರು ದೊಡ್ಡಬಳ್ಳಾಪುರ ಮಾಡುವ ಸಲುವಾಗಿ ಯುವ ಸಂಚಲನ ತಂಡವು ಅನೇಕ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ಹಮ್ಮಿಕೊಳ್ಳತ್ತಾ ಬಂದಿದೆ.

ನೀಲಗಿರಿ ತೆರವುಗೊಳಿಸಿರುವ ಜಾಗದಲ್ಲಿ ಪರ್ಯಾಯವಾಗಿ ವಿವಿಧ ಜಾತಿಯ ಬೀಜಗಳನ್ನು ನೇರ ಬಿತ್ತನೆ ಕಾರ್ಯಕ್ರಮವು ವಿಭಿನ್ನ ಹಾಗೂ ಹೆಚ್ಚು ಫಲಕಾರಿಯಾಗಿದೆ. ಈ ವಿಧಾನವು ರೈತರು ಉಳುಮೆ ಮಾಡಿ ಬಿತ್ತನೆ ಮಾಡುವ ರೀತಿಯಾಗಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಸಂಚಾಲಕಿ ಅಂಜುಳ, ರಾಷ್ಟ್ರೀಯ ಜೀವ ವೈವಿಧ್ಯತಾ ಘಟಕದ ಸಂಚಾಲಕಿ ಸುಷ್ಮ, ಅರಣ್ಯ ಇಲಾಖೆಯ ಕಿರಣ್ ಹಾಗೂ ಯುವ ಸಂಚಲದ ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !