ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ಶಿಥಿಲ ಕಟ್ಟಡದಲ್ಲೇ ಶಾಲೆ ಪ್ರಾರಂಭೋತ್ಸವ

ದುರಸ್ತಿಗೊಳ್ಳದ ಸರ್ಕಾರಿ ಶಾಲಾ ಕಟ್ಟಡಗಳು । ಮೂಲ ಸೌಕರ್ಯ ಕೊರತೆ
Published 31 ಮೇ 2024, 0:09 IST
Last Updated 31 ಮೇ 2024, 0:09 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಶಿಥಿಲ ಕಟ್ಟಡ ಹಾಗೂ ಮೂಲ ಸೌಕರ್ಯ ಕೊರತೆ‌ ನಡುವೆಯೇ ಸರ್ಕಾರಿ ಶಾಲೆ‌ಗಳು ಪ್ರಾರಂಭೋತ್ಸವಕ್ಕೆ ಸಜ್ಜಾಗಿವೆ.

ಬೇಸಿಗೆ ರಜೆ ಮುಗಿದು 2024-25ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಶಿಕ್ಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವಂತೆ ಪೋಷಕರ ಮನವೊಲಿಸುತ್ತಿದ್ದಾರೆ. ಆದರೆ ಕೆಲವು ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಿಕೊಡುವಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರಿದೆ.

ಹೋಬಳಿಯಲ್ಲಿ ಹಲವು ಶಿಥಿಲಗೊಂಡ ಶಾಲೆಗಳಲ್ಲೆ ಮಕ್ಕಳು ಪಾಠ ಕೇಳಬೇಕಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರು ಮಾಡಲು ಅಡುಗೆ ಕೋಣೆಯೂ ಶೌಚಾಲಯಯೂ ಇಲ್ಲ.

ಕಳೆದ ವರ್ಷದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ ಇದುವರೆಗೂ ಶಾಲೆಗಳ ಸ್ಥಿತಿ ಬದಲಾಗಿಲ್ಲ. ಈಗಲೂ ಮಳೆ ಬಂದರೆ ಸೋರುತ್ತವೆ. ಸೋರುವ ಕಟ್ಟಡದಲ್ಲಿ ಕುಳಿತು ಪಾಠ ಕೇಳಬೇಕಾದ ದುಸ್ಥಿತಿ. ಹೀಗಾಗಿಯೇ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂಜರಿಯುತ್ತಾರೆ.

ಗೊಡ್ಲುಮುದ್ದೇನಹಳ್ಳಿ ಕ್ಲಸ್ಟರ್‌ನಲ್ಲಿ ಚಂದೇನಹಳ್ಳಿ, ಚಿನುವಂಡನಹಳ್ಳಿ, ಬಿಜ್ಜವರ ಕ್ಲಸ್ಟರ್‌ನ ಗೋಣೂರು, ಚಿಕ್ಕಮರಳಿ, ಬಿಜ್ಜವಾರ, ವಿಜಯಪುರ ಕ್ಲಸ್ಟರ್‌ನ ಇಂದಿರಾನಗರ ಶಾಲೆ ಶಿಥಿಲಾವಸ್ಥೆಯಲ್ಲಿದೆ.

ಸಿ.ಎನ್.ಹೊಸೂರು, ಪಿ.ರಂಗನಾಥಪುರ, ಕೊಮ್ಮಸಂದ್ರ, ಯಲುವಹಳ್ಳಿ, ನಾರಾಯಣಪುರ, ಬಿಜ್ಜವಾರ, ಗೋಣೂರು, ಗೊಲ್ಲಹಳ್ಳಿ, ಶಾಲೆಗಳಲ್ಲಿ ಅಡುಗೆ ಕೋಣೆ ಇಲ್ಲ. ಚಿನುವಂಡನಹಳ್ಳಿ, ಚಂದೇನಹಳ್ಳಿ, ಭಟ್ರೇನಹಳ್ಳಿ, ಇರಿಗೇನಹಳ್ಳಿ, ದೊಡ್ಡಮುದ್ದೇನಹಳ್ಳಿ ಬಿಜ್ಜವರ ಶಾಲೆಗಳಲ್ಲಿ ಶೌಚಾಲಯ ಇಲ್ಲದೆ ಮಕ್ಕಳು ಪರದಾಡಬೇಕಾಗಿದೆ.

ಬೇಸಿಗೆ ರಜೆ ಸಮಯದಲ್ಲಿ ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸಿ, ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮವಹಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರ ವರದಿ ಕಳುಹಿಸಿ, ಸುಮ್ಮನಾಗಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಮಕ್ಕಳಿಗೆ ಬಿಸಿಯೂಟ, ಪಠ್ಯಪುಸ್ತಕ, ಹಾಲು, ಕೊಟ್ಟರೆ ಸಾಲದು ಅವರ ಕಲಿಕೆಗೆ ಸೂಕ್ತ ವಾತಾವರಣ ನಿರ್ಮಿಸಬೇಕು. ಸುಸಜ್ಜಿತ ಕಟ್ಟಡ, ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.

ಹೆಚ್ಚು ಮಕ್ಕಳಿದ್ದರಷ್ಟೆ ಹೊಸ ಕಟ್ಟಡ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕನಿಷ್ಠ 70 ರ ಮೇಲಿದ್ದರೆ ಸಿಎಸ್‌ಆರ್ ಅನುದಾನದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿದೆ. ಆದರೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಪೋಷಕರಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾಚಂದ್ರಶೇಖರ್ ತಿಳಿಸಿದ್ದಾರೆ. ಶಿಥಿಲ ಆಗಿರುವ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸಬೇಡಿ ಎಂದು ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಅಂತಹ ಶಾಲೆಗಳ ಪಟ್ಟಿ ಮಾಡಿ ಉಪನಿರ್ದೇಶಕರು ಹಾಗೂ ತಾಲ್ಲೂಕು ಪಂಚಾಯಿತಿಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT