ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿಗಳಲ್ಲಿ ನೀರಿನ ಕೊರತೆ: ಟ್ಯಾಂಕರ್‌ ನೀರಿಗೆ ಮೊರೆಹೋಗುತ್ತಿರುವ ರೈತರು

Published 23 ಜನವರಿ 2024, 14:40 IST
Last Updated 23 ಜನವರಿ 2024, 14:40 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕುಸಿತವಾಗುತ್ತಿದ್ದು, ರೈತರು ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ಟ್ಯಾಂಕರ್ ಮೂಲಕ ಕೃಷಿಹೊಂಡಕ್ಕೆ ನೀರು ತುಂಬಿಸಿ ಬೆಳೆ ಸಂರಕ್ಷಣೆಗೆ ಮುಂದಾಗಿದ್ದಾರೆ.

ಈ ಬಾರಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ಕೆರೆಗಳು ಬರಿದಾಗುತ್ತಿವೆ. ಕೊಳೆವೆಬಾವಿಗಳಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಆದ್ದರಿಂದ ಬಹುತೇಕ ರೈತರು, ತಮ್ಮ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಟ್ಯಾಂಕರ್‌ ಮೂಲಕ ನೀರು ತಂದು, ತೋಟಗಳಲ್ಲಿ ನಿರ್ಮಾಣ ಮಾಡಿರುವ ಕೃಷಿಹೊಂಡಗಳಿಗೆ ತುಂಬಿಸಿ, ಅದರ ಮೂಲಕ ತುಂತುರು ನೀರಾವರಿಯ ಪದ್ಧತಿಯಲ್ಲಿ ತೋಟಗಳಿಗೆ ಹರಿಸುತ್ತಿದ್ದಾರೆ.

ಸುಮಾರು 1,200 ಅಡಿಗಳ ಆಳಕ್ಕೆ ಕೊರೆದಿರುವ ಕೊಳವೆಬಾವಿಗಳಲ್ಲಿ ನೀರು ಮೇಲೆತ್ತುತ್ತಿದ್ದ ರೈತರ ಪಾಲಿಗೆ, ಕಳೆದ ವರ್ಷದಲ್ಲಿ ಆಗಿದ್ದ ಉತ್ತಮ ಮಳೆ ಆಸರೆಯಾಗಿತ್ತು. ಅಂತರ್ಜಲದ ಮಟ್ಟ ವೃದ್ಧಿಯಾಗುವ ಆಶಾಭಾವನೆ ಇತ್ತು. ಈ ವರ್ಷದಲ್ಲಿ ಮಳೆಯಾಗದ ಕಾರಣ, ಎಲ್ಲೆಲ್ಲೂ ಬರಗಾಲವಿದೆ. ಕೆರೆ, ಕುಂಟೆಗಳಲ್ಲಿ ಸಂಗ್ರಹವಾಗಿದ್ದ ನೀರು ಬತ್ತಿಹೋಗುವ ಹಂತಕ್ಕೆ ಬಂದಿದ್ದು, ರೈತರಲ್ಲಿ ಪುನಃ ಆತಂಕ ಶುರುವಾಗಿದೆ.

ಬಾರದ ಎಚ್.ಎನ್.ವ್ಯಾಲಿ ನೀರು: ಬಯಲುಸೀಮೆಯ ಭಾಗವಾಗಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಕೆರೆಗಳಿಗೆ ಹರಿಸಲಾಗುತ್ತಿದ್ದ ಎಚ್.ಎನ್.ವ್ಯಾಲಿ ಯೋಜನೆಯ ನೀರು ಈಗ ಹರಿಸದೆ ನಿಲ್ಲಿಸಿರುವ ಕಾರಣ, ಕೆರೆಗಳಲ್ಲಿ ನೀರಿನ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ವಿಧಾನಸಭಾ ಚುನಾವಣೆಗೂ ಮೊದಲು ಕೆರೆಗಳಿಗೆ ನೀರು ಹರಿಸಿದ್ದು ಹೊರತುಪಡಿಸಿದರೆ, ಚುನಾವಣೆಯ ನಂತರ ನೀರು ಹರಿಯಲಿಲ್ಲ.

ಕುಡಿಯುವ ನೀರಿಗೂ ತತ್ವಾರ: ಸಂಕ್ರಾಂತಿಯ ನಂತರ ಬಿಸಿಲಿನ ಬೇಗೆ ಶುರುವಾಗಿದ್ದು, ಪಟ್ಟಣವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆಗಳು ಹೆಚ್ಚು ಕಾಣಿಸುತ್ತಿವೆ. ಹಳ್ಳಿಗಳಲ್ಲಿನ ಕೊಳವೆಬಾವಿಗಳಲ್ಲಿಯೂ ನೀರು ಕಡಿಮೆಯಾಗುತ್ತಿದೆ.

ಇಳುವರಿ ಬಾರದ ಬೆಳೆಗಳು: ಹೋಬಳಿಯಲ್ಲಿ ಬಹುತೇಕ ರೈತರು ದ್ರಾಕ್ಷಿ, ದಾಳಿಂಬೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಾಟಿ ಮಾಡಿದ್ದಾರೆ. ತೋಟಗಳಿಗೆ ಅಗತ್ಯವಾಗಿರುವ ಸಮಯಕ್ಕೆ ಸರಿಯಾಗಿ, ಅಗತ್ಯವಿರುವಷ್ಟು ನೀರನ್ನು ಬೆಳೆಗೆ ಒದಗಿಸಲು ಸಾಧ್ಯವಾಗದ ಕಾರಣ, ಬೆಳೆಗಳ ಇಳುವರಿ ಕುಂಠಿತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT