ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ’

ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಇರುವ ಬಹುತೇಕ ಕೆರೆಗಳು ಒತ್ತುವರಿ
Last Updated 21 ಮಾರ್ಚ್ 2019, 13:50 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಹಿಂದೆ ಕೆರೆಗಳು ಸ್ವಚ್ಛವಾಗಿ, ವಿಶಾಲವಾಗಿರುತ್ತಿದ್ದವು. ಈಗ ಅಂತಹ ವಾತಾವರಣವೇ ಇಲ್ಲ’ ಎಂದು ಮರುಗುತ್ತಾರೆಸ್ಥಳೀಯ ನಿವಾಸಿವಯೋವೃದ್ಧ ವೆಂಕಟಪ್ಪ.

ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ 114 ಸಣ್ಣ ಪುಟ್ಟ ಕೆರೆಗಳಿವೆ. ಕಳೆದ ಮೂರು ದಶಕಗಳಿಂದ ಯಾವುದೇ ಕೆರೆಯು ಪೂರ್ತಿ ತುಂಬಿಲ್ಲ.ವಾರ್ಷಿಕ ಮಳೆ ಪ್ರಮಾಣ ಕಡಿಮೆಯಾಗಿದೆ. ಕಳೆದ ಐದು ವರ್ಷಗಳಿಂದ ತಾಲ್ಲೂಕು ಬರಗಾಲಕ್ಕೆ ತುತ್ತಾಗಿದೆ. ಸ್ವಾತಂತ್ರ್ಯಪೂರ್ವದಿಂದ ಈವರೆಗೆಎತ್ತಿನಹೊಳೆ ಮತ್ತು ಎನ್.ಎಚ್. ವ್ಯಾಲಿ ಕಾಮಗಾರಿ ಹೊರತುಪಡಿಸಿ ಕುಡಿಯುವ ನೀರು ಮತ್ತು ನೀರಾವರಿಗಾಗಿ ಶಾಶ್ವತ ಯೋಜನೆಗಳು ಬಯಲು ಸೀಮೆ ತಾಲ್ಲೂಕಿಗೆ ಬಂದಿಲ್ಲ. ಕೆರೆ ಹೂಳು ಎತ್ತುವ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂಬುದು ಸಾರ್ವಜನಿಕರಿಂದ ಕೇಳಿ ಬರುತ್ತಿರುವ ಆರೋಪ.

‘ತಾಲ್ಲೂಕಿನಲ್ಲಿರುವ ಬಹುತೇಕ ಕೆರೆಗಳ ಸುತ್ತ ಒತ್ತುವರಿಯಾಗಿದೆ. ವಿಮಾನ ನಿಲ್ದಾಣ ಆರಂಭಗೊಂಡ ಸಮಯದಿಂದ ಸರ್ಕಾರಿ ಖರಾಬು, ಗೋಮಾಳ, ಸ್ಮಶಾನಗಳಿಗೆ ಒತ್ತುವರಿ ಭೂತ ಬೆನ್ನು ಬಿಟ್ಟಿಲ್ಲ. ನಾಲ್ಕು ವರ್ಷಗಳ ಹಿಂದೆ ಭೂಮಾಪನಾ ಇಲಾಖೆ ಅಳತೆ ಮಾಡಿದ ಒತ್ತುವರಿ ಜಾಗಕ್ಕೆ ಬೇಲಿ ಹಾಕಿಲ್ಲ. ಅನೇಕ ಕಡೆ ಒತ್ತುವರಿ ಯಾಗಿರುವುದರಿಂದ ರಾಜ ಕಾಲುವೆಗಳಲ್ಲಿ ನೀರು ಹರಿದು ಬರುತ್ತಿಲ್ಲ. ಇದರಿಂದ ಅಂತರ್ಜಲ ಕುಸಿದು ಜಲಕ್ಷಾಮ ಹೆಚ್ಚುತ್ತಿದೆ’ ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ ಬಿಜ್ಜವಾರ ನಾಗರಾಜ್ ಅಭಿಪ್ರಾಯಪಟ್ಟರು.

‘ಸದ್ಯ ತಾಲ್ಲೂಕಿನ ಏಳು ಕೆರೆಗಳಲ್ಲಿ ಸ್ಥಳೀಯ ಗ್ರಾಮಸ್ಥರ ಮತ್ತು ದಾನಿಗಳ ನೆರವಿನಿಂದ ಹೂಳು ಎತ್ತುವ ಕಾಮಗಾರಿ ನಡೆಯುತ್ತಿದೆ. ದೇವನಹಳ್ಳಿ ಕೆರೆಯಲ್ಲಿ ಹೂಳು ಎತ್ತುವ ಕೆಲಸ ಶೇ 95ರಷ್ಟು ಮುಗಿದಿದೆ. ಕನ್ನಮಂಗಲ ಮತ್ತು ಬ್ಯಾಡರಹಳ್ಳಿ ಕೆರೆಗಳಲ್ಲಿ ಶೇಕಡ 65ರ ಷ್ಟು ಮುಗಿದಿದೆ. ಕಾರಹಳ್ಳಿ, ದ್ಯಾವರಹಳ್ಳಿ, ಉಗನವಾಡಿ ಕೆರೆಗಳಲ್ಲಿನ ಕೆಲಸ ಒಂದು ತಿಂಗಳಲ್ಲಿ ಸಂಪೂರ್ಣ ಮುಗಿಯಲಿದೆ’ ಎಂದುಪುರಸಭೆ ಸದಸ್ಯ ರವೀಂದ್ರ ತಿಳಿಸಿದರು.

‘ದೇವನಹಳ್ಳಿ ಚಿಕ್ಕ ಸಿಹಿ ನೀರಿನ ಕೆರೆಯಲ್ಲಿ ಈವರೆಗೆ 4482 ಟಿಪ್ಪರ್ ಲೋಡ್ ಮಣ್ಣು ಹೊರಹಾಕಲಾಗಿದೆ. 78 ದಿನ ಕಾಮಗಾರಿ ನಡೆಸಲಾಗಿದ್ದು ಜೆ.ಸಿ.ಬಿ ಯಂತ್ರಗಳಿಗೆ ಮತ್ತು ಮಣ್ಣು ಸಾಗಾಣಿಕೆ ವಾಹನಗಳಿಗೆ ಬಾಡಿಗೆ ನೀಡಿಲ್ಲ. ಡೀಸೆಲ್ ವೆಚ್ಚವೇ ₹13 ಲಕ್ಷ ಆಗಿದೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ.

‘ಜಿಲ್ಲಾಧಿಕಾರಿ ಕರೀಗೌಡ ನೀರಿನ ಬವಣೆ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದರು.ಸಭೆ ನಡೆಸಿ ಉತ್ತಮ ಸಲಹೆ ಕೊಟ್ಟಿದ್ದರು. ಇದರಿಂದಾಗಿ ಒಮ್ಮತದಿಂದ ಸಮಾನ ಮನಸ್ಕರು ಪಕ್ಷಾತೀತವಾಗಿ ಸಹಕರಿಸಿದ ಪರಿಣಾಮ ಕೆರೆಗಳ ಹೂಳು ಎತ್ತಲು ಸಹಕಾರಿಯಾಗಿದೆ. ‘ನಮ್ಮ ಊರು, ನಮ್ಮ ಕೆರೆ ಉಳಿಸೋಣ’ ಅಭಿಯಾನ ಮೆಚ್ಚುವಂತಹದ್ದು. ಗ್ರಾಮಗಳಲ್ಲಿನ ಕೆರೆಗಳ ಸಂರಕ್ಷಣೆ ಬಗ್ಗೆ ಸ್ಥಳೀಯರು ಈಗಲಾದರೂ ಎಚ್ಚೆತ್ತೆಕೊಳ್ಳಬೇಕು’ ಎಂಬುದು ಜಿಲ್ಲಾ ಪಂಚಾಯಿತಿ ಸದಸ್ಯ ಕನ್ನಮಂಗಲ ಗ್ರಾಮದ ಕೆ.ಸಿ ಮಂಜುನಾಥ್ ಅಭಿಮತ.

‘ನೀರಿನ ಮಿತಬಳಕೆ ಇಂದಿನ ತುರ್ತಾಗಿದೆ. ಮನೆಗಳ ಮೇಲೆ, ಮರ–ಗಿಡಗಳ ಅಕ್ಕ ಪಕ್ಕ ನೀರು ತುಂಬಿಸಿಟ್ಟರೆ ಪಕ್ಷಿಗಳಿಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾಧಿಕಾರಿ ಕರೀಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT