ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ರಕ್ಷಣೆಗೆ ಒಗ್ಗಟ್ಟಾಗಲು ಕರೆ

‘ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಕಣಕುಂಬಿ ಪ್ರದೇಶದಲ್ಲಿ ಕಾರ್ಯಾಗಾರ
Published 9 ಮಾರ್ಚ್ 2024, 5:11 IST
Last Updated 9 ಮಾರ್ಚ್ 2024, 5:11 IST
ಅಕ್ಷರ ಗಾತ್ರ

ಕಣಕುಂಬಿ (ಖಾನಾಪುರ ತಾ): ‘ಸುತ್ತಲಿನ ಪರಿಸರ ಹಾಗೂ ಇಡೀ ಭೂಮಿ ಹಾಳಾಗುವುದನ್ನು ನೋಡಿ ನಾವು ಮೂಕಪ್ರೇಕ್ಷಕರಂತೆ ಕುಳಿತಿರಲು ಸಾಧ್ಯವಿಲ್ಲ. ನಮ್ಮ ಮನೆ– ನಮ್ಮ ಭೂಮಿಯ ರಕ್ಷಣೆಗಾಗಿ ಒಗ್ಗಟ್ಟಾಗಿ ದುಡಿಯಬೇಕಾದ ಸಮಯ ಬಂದಿದೆ’ ಎಂದು ಪರಿಸರವಾದಿ ಪರಶುರಾಮೇ ಗೌಡ ಹೇಳಿದರು.

‘ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಸದಸ್ಯರಿಗಾಗಿ ಕಣಕುಂಬಿ ಪ್ರದೇಶದ ಚೋರ್ಲಾ ಕಾಡಿನಲ್ಲಿ ಈಚೆಗೆ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೆಳಗಾವಿ ಸಂಘಟನಾ ತಂಡದ ನೈಲಾ ಕೊಹೆಲೊ ಅವರು ಕಣಕುಂಬಿಯಲ್ಲಿ ಕಾರ್ಯಾಗಾರ ಮಾಡುತ್ತಿರುವ ಉದ್ದೇಶ; ಪಶ್ಚಿಮ ಘಟ್ಟದ ಮತ್ತು ಉತ್ತರ ಕರ್ನಾಟಕದ ಪರಿಸರ ಸಮಸ್ಯೆಗಳ ಕುರಿತು ರಾಜ್ಯದ ಜನತೆ, ರಾಜಕೀಯ ಪಕ್ಷಗಳು ಮತ್ತು ಪರಿಸರವಾದಿಗಳ ಗಮನ ಸೆಳೆಯುವುದೇ ಆಗಿದೆ’ ಎಂದರು.

ನೈಲಾ ಕೊಹೆಲೊ ಮಾತನಾಡಿ, ‘ಉತ್ತರ ಕನ್ನಡದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಿಂದ ಆರಂಭಗೊಂಡು ಪಕ್ಕದ ಗೋವಾದ ಸಂರಕ್ಷಿತ ಕಾಡುಗಳು ಹಾಗೂ ಮಹಾರಾಷ್ಟ್ರದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದವನ್ನು ಹುಲಿ ಓಡಾಡುವ ಮಾರ್ಗ (ಟೈಗರ್ ಕಾರಿಡಾರ್) ಎಂದು ಗುರುತಿಸಲಾಗಿದೆ. ಈ ಪ್ರದೇಶದ ಮಳೆ ಕಾಡು ಅಪಾಯ ಎದುರಿಸುತ್ತಿದೆ’ ಎಂದರು.

ನಾಗರಾಜ ಅಡ್ವೆ ಬರೆದ ಕೆ.ಪಿ. ಸುರೇಶ್ ಅನುವಾದಿಸಿದ ‘ಭಾರತದಲ್ಲಿ ಜಾಗತಿಕ ತಾಪಮಾನ, ವಿಜ್ಞಾನ ಮತ್ತು ರಾಜಕೀಯ’ ಹಾಗೂ ನಾಗೇಶ ಹೆಗಡೆ ಅವರ ‘ಜೀವಿ ವೈವಿಧ್ಯ ಸಂಭ್ರಮವೇ, ಸಂಕಟವೇ?’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ದಿಕ್ಸೂಚಿ ಭಾಷಣ ಮಾಡಿದ ವಿಜ್ಞಾನಿ ಸಾಗರ ಧಾರಾ, ಪಳೆಯುಳಿಕೆ ಇಂಧನಗಳನ್ನು ಮಾನವ ಬಳಸಲು ಆರಂಭಿಸಿದ ದಿನಗಳಿಂದ ಇಂದಿನವರೆಗೆ ನಡೆದು ಬಂದ ಪರಿಸರ ಅವನತಿ ಮತ್ತು ಆರ್ಥಿಕ ಅಸಮಾನತೆಯ ಬಗ್ಗೆ ಸಚಿತ್ರ ವಿವರಣೆ ನೀಡಿದರು.

ಮಧ್ಯಾಹ್ನದ ನಂತರ ಕೆ.ಪಿ. ಸುರೇಶ್ ಹಾಗೂ ಸಾಯಿಲ್ ವಾಸು ಅವರಿಂದ ‘ಮಣ್ಣು ಸಂರಕ್ಷಣೆ ಹಾಗೂ ಸರ್ಕಾರಿ ನೀತಿಗಳ ಬಗ್ಗೆ ಗೋಷ್ಠಿ ನಡೆಯಿತು. ‘ಜಲಮೂಲಗಳ ಸಂರಕ್ಷಣೆ’ ಕುರಿತು ಚಿಕ್ಕಬಳ್ಳಾಪುರದ ಆಂಜನೇಯ ರೆಡ್ಡಿ ಹಾಗೂ ‘ಪಾನಿ ಅರ್ಥ್’ನ ಡಾ.ನಿರ್ಮಲಾ ಗೌಡ ಮಾತನಾಡಿದರು.

ಎರಡನೇ ದಿನ ‘ಇದು ನಮ್ಮ ಮಲಪ್ರಭಾ…’ ಹಾಡನ್ನು ಕಣಕುಂಬಿಯ ಶಾಲಾ ಮಕ್ಕಳು ಹಾಡಿದರು. ‘ದೇಶದ ಪರಿಸರ ಕಾನೂನು’ ಕುರಿತು ಗೋವಾದ ನೊರ್ಮಾ ಆಲ್ವಾರಿಸ್ ಮತ್ತವರ ಸಹೋದ್ಯೋಗಿ ಓಮ್ ಡಿಕೊಸ್ಟ ವಿವರ ನೀಡಿದರು. ‘ಕರ್ನಾಟಕದ ಪರಿಸರದ ಕಾನೂನು’ ಬಗ್ಗೆ ವಿನಯ ಶ್ರೀನಿವಾಸ್ ಒತ್ತಿ ಹೇಳಿದರು.

ಮಧ್ಯಾಹ್ನದ ನಂತರ ‘ಹವಾಮಾನ ಬದಲಾವಣೆ ಹಾಗೂ ಎದುರಿಸುವ ಬಗೆ’ ಕುರಿತು ನಾಗೇಶ ಹೆಗಡೆ ಹಾಗೂ ಶ್ರೀಕುಮಾರ್ ಅವರಿಂದ ಗೋಷ್ಠಿಗಳು ನಡೆದವು. 

ಮೂರನೆಯ ದಿನ ಉದ್ದೇಶಿತ ಪರಿಸರ ಸಂಘಟನೆಗೆ ಸಂವಿಧಾನ ರಚನೆಯ ಕುರಿತು ಬಸವಪ್ರಭು ಹೊಸಕೇರಿ ಹಾಗೂ ಜನಾರ್ದನ ಕೆಸರುಗದ್ದೆ ವಿವರಿಸಿದರು. ಬಳಿಕ ದಿಲೀಪ್ ಕಾಮತ್ ಹಾಗೂ ಡಾ.ಪ್ರಕಾಶ್ ಭಟ್ ಅವರಿಂದ ಸಂಘಟನೆಗೆ ಅಗತ್ಯವಿರುವ ಕಾರ್ಯಯೋಜನೆ ಮತ್ತು ಕಾರ್ಯವಿಧಾನದ ಗೋಷ್ಠಿ ನಡೆಯಿತು. ಪರಿಸರ ಸಂಘಟನೆ ಅನುಸರಿಸಬೇಕಾದ ನೀತಿ ನಿಯಮಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸಮಿತಿಗಳನ್ನು ರಚಿಸಲಾಯಿತು.

ಡಾ.ಸಂಜೀವ ಕುಲಕರ್ಣಿ ಅವರು ಜನರಲ್ಲಿ ಪರಿಸರ ಜಾಗೃತಿ ಮೂಡಿಸಿ, ಹವಾಮಾನ ವೈಪರೀತ್ಯ ತಡೆಗೆ ಬೇಕಾದ ಕ್ರಮಗಳ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT