ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಬೈಲ್‌ ಟವರ್‌ ಅಳವಡಿಕೆ ಪ್ರಶ್ನಿಸಿದ ಬೆಳಗಾವಿ ಪಾಲಿಕೆ ಸದಸ್ಯನ ಮೇಲೆ ಹಲ್ಲೆ

Published 23 ನವೆಂಬರ್ 2023, 15:25 IST
Last Updated 23 ನವೆಂಬರ್ 2023, 15:25 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಭಾಗ್ಯ ನಗರದ 9ನೇ ಕ್ರಾಸ್‌ನ ಮನೆ ಮೇಲೆ ಅನುಮತಿ ಇಲ್ಲದೆ ಮೊಬೈಲ್ ಟವರ್ ಅಳವಡಿಸುತ್ತಿರುವುದನ್ನು ಪ್ರಶ್ನಿಸಿದ ವಾರ್ಡ್‌ ಸಂಖ್ಯೆ 42ರ ಸದಸ್ಯ ಅಭಿಜಿತ ಜವಳಕರ ಅವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಈ ಸುದ್ದಿ ತಿಳಿದ ತಕ್ಷಣ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಟಿಳಕವಾಡಿ ಪೊಲೀಸ್ ಠಾಣೆಗೆ ಧಾವಿಸಿ, ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆರೋಪಿ ರಮೇಶ ಪಾಟೀಲ ಅವರನ್ನು ಪೊಲೀಸರು ಬಂಧಿಸಿದ ನಂತರ, ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

‘ರಮೇಶ ಪಾಟೀಲ ನಮ್ಮ ಪ್ರದೇಶದಲ್ಲಿ ಮೊಬೈಲ್‌ ಟವರ್‌ ಅಳವಡಿಸುತ್ತಿದ್ದರು. ಇದಕ್ಕೆ ಸ್ಥಳೀಯರಿಂದ ವಿರೋಧವಿತ್ತು. ಹಾಗಾಗಿ ಪಾಲಿಕೆಗೆ ದೂರು ಕೊಟ್ಟಿದ್ಧೇವು. ಈ ಕಾಮಗಾರಿಗೆ ಅನುಮತಿ ನೀಡುವುದಿಲ್ಲ ಎಂದು ಪಾಲಿಕೆಯೂ ಆಗಸ್ಟ್‌ನಲ್ಲಿ ತಿಳಿಸಿತ್ತು. ಈ ಹಿಂದೆ ರಾತ್ರಿಯ ವೇಳೆ ಕಾಮಗಾರಿ ನಡೆಯುತ್ತಿದ್ದಾಗ, ಪೊಲೀಸರಿಗೆ ತಿಳಿಸಿದ್ದೆವು. ಸ್ಥಳಕ್ಕೆ ಬಂದ ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇಂದು ಮತ್ತೆ ಕಾಮಗಾರಿ ಆರಂಭಗೊಂಡಿದ್ದನ್ನು ಪ್ರಶ್ನಿಸಿದಾಗ, ರಮೇಶ ಪಾಟೀಲ ಮತ್ತು ಸುಮಾರು 10 ಜನರ ತಂಡ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದೆ’ ಎಂದು ಅಭಿಜಿತ ಜವಳಕರ ದೂರಿದರು. ಈ ಘಟನೆಯಲ್ಲಿ ಅಭಿಜಿತ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮೊಬೈಲ್‌ ಟವರ್‌ ಅಳವಡಿಕೆಗೆ ಪಾಲಿಕೆಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ವೈಯಕ್ತಿಕ ಕಾರಣಕ್ಕೆ ಹಲ್ಲೆ ನಡೆದಿರುವ ಸಾಧ್ಯತೆಯಿದೆ. ಹಲ್ಲೆ ಮಾಡಿದವರು ಶಸ್ತ್ರಾಸ್ತ್ರ ಬಳಸಿರುವುದು ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಟಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT