ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಂಬೇಡ್ಕರ್‌ ಜಯಂತಿ ಆಚರಣೆಗೆ ಸಿದ್ಧತೆ ಕೈಗೊಳ್ಳಿ’

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸೂಚನೆ
Published 30 ಮಾರ್ಚ್ 2024, 16:14 IST
Last Updated 30 ಮಾರ್ಚ್ 2024, 16:14 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ಏಪ್ರಿಲ್ 14ರಂದು ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾಗಿದ್ದು, ಚುನಾವಣೆ ಆಯೋಗದ ಮಾರ್ಗಸೂಚಿ ಪಾಲಿಸಬೇಕು. ಕಾರ್ಯಕ್ರಮಕ್ಕೆ ಅಗತ್ಯವಿರುವ ಶಾಮಿಯಾನ, ವೇದಿಕೆ, ಆಸನ ವ್ಯವಸ್ಥೆ, ಉದ್ಯಾನ ಸ್ವಚ್ಛತೆ, ಅಂಬೇಡ್ಕರ್‌ ರಸ್ತೆಗೆ  ವಿದ್ಯುದ್ದೀಪಗಳಿಂದ ಅಲಂಕಾರ, ಪ್ರಮುಖ ವೃತ್ತಗಳಲ್ಲಿ ಬ್ಯಾನರ್ ಅಳವಡಿಕೆ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಉಪನ್ಯಾಸ ರಾಜಕೀಯ ಪ್ರೇರಿತ ಭಾಷಣಗಳಿಂದ ಮುಕ್ತವಾಗಿರಬೇಕು’ ಎಂದರು.

‘ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾಗುವ ರೂಪಕ ವಾಹನಗಳ ಮೆರವಣಿಗೆ ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಕಾಕತಿವೇಸ್, ರಾಣಿ ಚನ್ನಮ್ಮನ ವೃತ್ತದ ಮಾರ್ಗವಾಗಿ ಸಾಗಿ, ಅಂಬೇಡ್ಕರ್‌  ಉದ್ಯಾನ ತಲುಪಲಿದೆ. ಮೆರವಣಿಗೆಯಲ್ಲಿ ಭಾಗಿಯಾದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

‘ಮಾದರಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ, ಜಯಂತಿಯಲ್ಲಿ ಜನಪ್ರತಿನಿಧಿಗಳ ಭಾವಚಿತ್ರ ಬಳಸಲು ಹಾಗೂ ರಾಜಕಾರಣಿಗಳ ಭಾಷಣಕ್ಕೆ ಅವಕಾಶವಿಲ್ಲ. ವಿವಿಧ ಇಲಾಖೆಗಳ ರೂಪಕ ವಾಹನಗಳಲ್ಲಿ ಸರ್ಕಾರಿ ಯೋಜನೆಗಳ ಪ್ರಚಾರ ಮಾಡುವಂತಿಲ್ಲ. ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಮಾತ್ರ ಸೀಮಿತವಾಗಿ ಜಯಂತಿಯನ್ನು ಆಚರಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಜಯಂತಿ ಆಚರಿಸಬೇಕು’ ಎಂದರು.

ಸೌಂದರ್ಯೀಕರಣಕ್ಕೆ ಕ್ರಮ ವಹಿಸಿ: ‘ಬೆಳಗಾವಿಯ ಅಶೋಕ ವೃತ್ತವನ್ನು ಸ್ವಚ್ಛಗೊಳಿಸಿ, ಸೌಂದರ್ಯೀಕರಣಕ್ಕೆ ಕ್ರಮ‌ ಕೈಗೊಳ್ಳಬೇಕು. ‘ಅಂಬೇಡ್ಕರ್ ರಸ್ತೆ’ ಎಂಬ ಹೆಸರನ್ನು ಕೆಲವರು ತಮ್ಮ ಫಲಕಗಳಲ್ಲಿ ‘ಸಿವಿಲ್ ಆಸ್ಪತ್ರೆ ರಸ್ತೆ’ ಎಂದು ಬರೆದಿದ್ದಾರೆ. ಅಂಥ ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್, ‘ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗುವುದು’ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್‌.ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರ‍ಪುರ, ಸಮಾಜಕಲ್ಯಾಣ ಇಲಾಖೆ ಜಂಟಿನಿರ್ದೇಶಕ ನವೀನ ಶಿಂತ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮುಖಂಡರಾದ ಮಹಾದೇವ ತಳವಾರ, ಯಲ್ಲಪ್ಪ ಹುದಲಿ, ಕರೆಪ್ಪ ಗುಡೆನ್ನವರ ಉಪಸ್ಥಿತರಿದ್ದರು.

ಸಂವಿಧಾನ ಜಾಥಾ; ದ್ವಿತೀಯ ಸ್ಥಾನ

‘ಬೆಳಗಾವಿ ಜಿಲ್ಲೆಯಲ್ಲಿ ಜನವರಿ 26ರಂದು ಆರಂಭಗೊಂಡ ಸಂವಿಧಾನ ಜಾಗೃತಿ ಜಾಥಾಕ್ಕೆ ಬೆಳಗಾವಿ ವಿಭಾಗಮಟ್ಟದಲ್ಲಿ ದ್ವಿತೀಯ ಬಹುಮಾನ ಸಿಕ್ಕಿದೆ. ಜಿಲ್ಲೆಗೆ ₹1 ಲಕ್ಷ ನಗದು ಬಹುಮಾನ‌ವೂ ಬಂದಿದೆ’ ಎಂದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಜಾಥಾ ಯಶಸ್ಸಿಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT