ಶನಿವಾರ, ಮೇ 15, 2021
29 °C
ಉಪ ಚುನಾವಣೆ ಅಖಾಡಕ್ಕೆ ಬಂದ ಬಾಲಚಂದ್ರ

ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ: ಉಪ ಚುನಾವಣೆ ಅಖಾಡಕ್ಕೆ ಬಂದ ಬಾಲಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಬೇರೆ ಕೆಲಸದಲ್ಲಿ ತೊಡಗಿದ್ದರಿಂದಾಗಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ಪ್ರಚಾರ ನಡೆಸಲು ಈವರೆಗೆ ಸಾಧ್ಯವಾಗಿರಲಿಲ್ಲ. ಈಗ ಬಂದಿದ್ದೇನೆ. ಏ. 16ರವರೆಗೂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ’ ಎಂದು ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದಿವಂಗತ ಸುರೇಶ ಅಂಗಡಿ ಅವರಿಗೆ ಬಂದಿದ್ದಷ್ಟೇ ಲೀಡ್‌ ಈಗಲೂ ಬರುವಂತೆ ನೋಡಿಕೊಳ್ಳುತ್ತೇವೆ’ ಎಂದರು.

‘ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ‌ ನಮ್ಮ ಸಹೋದರ ಇರಬಹುದು. ಆದರೆ, ನಾನು ಮತ್ತು ರಮೇಶ ಜಾರಕಿಹೊಳಿ ನಮ್ಮ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಪಕ್ಷದ ಆದೇಶ ಪಾಲಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಸಹೋದರ ರಮೇಶಗೆ ಕೋವಿಡ್–19 ದೃಢಪಟ್ಟಿದ್ದು, ಸದ್ಯ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಗೆಟಿವ್ ವರದಿ ಬಂದರೆ ಅವರೂ ಖಂಡಿತ ಪ್ರಚಾರ ನಡೆಸುತ್ತಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ ಅವರೊಂದಿಗೆ ಭಾಗವಹಿಸುತ್ತೇವೆ. ಏ. 13ರಂದು 10 ಹಳ್ಳಿಗಳಲ್ಲಿ ಮತ ಯಾಚಿಸುತ್ತೇನೆ. ಬಿಜೆಪಿಯು ಖಂಡಿತ ಗೆಲವು ಸಾಧಿಸುತ್ತದೆ’ ಎಂದು ಹೇಳಿದರು.

‘ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಿದ್ದೇವೆ. ವಕೀಲರ ಮೂಲಕ ನೋಡಿಕೊಳ್ಳುತ್ತಿದ್ದೇವೆ. ಎಸ್‌ಐಟಿ ತನಿಖೆ ಪ್ರಗತಿಯಲ್ಲಿದೆ. ಆ ಯುವತಿಯು, ಸದಾಶಿವನಗರ ಠಾಣೆಯಲ್ಲಿ ರಮೇಶ ಜಾರಕಿಹೊಳಿ ದಾಖಲಿಸಿದ್ದ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಒಪ್ಪಿರುವ ವಿಷಯ ನನಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಉಪ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಚುನಾವಣೆ ಇದೆ. ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಬಹುದು. ಹೀಗಾಗಿ, ಆ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಕೆಎಂಎಫ್‌ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಆ ಕೆಲಸ ಮಾಡುತ್ತಿದ್ದೇನೆ. ದೈವದ ಬಲ ಇದ್ದವರು ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು