ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಪಾವಿತ್ರ್ಯತೆ ಕಲಿಸಿದ ಪುರುಷೋತ್ತಮ: ಸಿದ್ಧಬಸವ ದೇವರು

ಯಮಕನಮರಡಿಯ ಹುಣಸಿಕೊಳ್ಳ ಮಠದ ಸಿದ್ಧಬಸವ ದೇವರು
Published 19 ಮೇ 2024, 16:27 IST
Last Updated 19 ಮೇ 2024, 16:27 IST
ಅಕ್ಷರ ಗಾತ್ರ

ಬೆಳಗಾವಿ: ‘ಸಮಾನತೆ ತತ್ವ, ಸಾಮಾಜಿಕ ಕ್ರಾಂತಿ ಹಾಗು ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆ ನೀಡಿ, ಸೂಳೆ ಸಂಕವ್ವ ಸೇರಿದಂತೆ ಎಲ್ಲ ವೃತ್ತಿಯವರಿಗೆ ಸಮಾನವಾಗಿ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಬಸವಣ್ಣ ಎಲ್ಲರಿಗೂ ಪಾವಿತ್ರ್ಯತೆ ಕಲಿಸಿದ ಪುರುಷೋತ್ತಮ’ ಎಂದು ಯಮಕನಮರಡಿಯ ಹುಣಸಿಕೊಳ್ಳ ಮಠದ ಸಿದ್ಧಬಸವ ದೇವರು ಶ್ಲಾಘಿಸಿದರು.

ಇಲ್ಲಿನ ಶಿವಬಸವ ನಗರದ ಪ್ರಭುದೇವ ಸಭಾಗೃಹದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ನಾಗನೂರು ರುದ್ರಾಕ್ಷಿಮಠದ ಸಹಯೋಗದಲ್ಲಿ ಬಸವ ಜಯಂತ್ಯುತ್ಸವದ ಎರಡನೇ ದಿನವಾದ ಶನಿವಾರ ಹಮ್ಮಿಕೊಂಡಿದ್ದ ವಚನ ಸಂಶೋಧನಾ ಶತಮಾನೋತ್ಸವ ವರ್ಷಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಆಚರಣೆಗಳು ಇಲ್ಲದಿದ್ದರೆ ವಿಚಾರಗಳು ಉಳಿಯುವುದಿಲ್ಲ.‌ ಆಚರಣೆಗಳಿಂದಲೇ ವಿಚಾರಗಳ ಜೀವಂತಿಕೆ ಸಾಧ್ಯ. ಮೊಬೈಲ್ ಹಾವಳಿಯಿಂದ ಇಂದು ಹಾಳಾಗುತ್ತಿರುವ ಯುವಜನರಿಗೆ ಧಾರ್ಮಿಕ ಶಿಕ್ಷಣ ನೀಡಬೇಕಾದ ಅನಿವಾರ್ಯತೆ ಇದೆ. ಆಗ, ಈ ನೆಲದ ಸಂಸ್ಕೃತಿ, ಆಚಾರ–ವಿಚಾರ ಉಳಿಯುತ್ತವೆ’ ಎಂದರು.

‘ವಚನ ಪಿತಾಮಹ ಫ.ಗು.ಹಳಕಟ್ಟಿ’ ವಿಷಯ ಕುರಿತು ಉಪನ್ಯಾಸ ನೀಡಿದ ಜಾನಪದ ವಿದ್ವಾಂಸ ಕೆ.ಎಸ್.ಕೌಜಲಗಿ, ‘ಲಿಂಗಾಯತರು ಹಿಂದೂಗಳಲ್ಲ. ವೀರಶೈವರೂ ಅಲ್ಲ. ಬದಲಿಗೆ, ಬಸವ ಅನುಯಾಯಿಗಳು. ಅವರು ಎಂದೂ ಅಸ್ಪೃಶ್ಯತೆ ಪರಿಪಾಲಿಸಬಾರದು ಎಂಬ ನೀತಿ ತಿಳಿಸಿಕೊಟ್ಟ ಫ.ಗು.ಹಳಕಟ್ಟಿ ಒಬ್ಬ ಧಾರ್ಮಿಕ ಸಂತ. 12ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಚೈತನ್ಯ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಚ್ಚಿ ಹೋಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಒಂದು ವಿಶ್ವವಿದ್ಯಾಲಯ ಮಾಡಲಾರದಷ್ಟು ಸಾಧನೆಯನ್ನು  ಒಬ್ಬ ವ್ಯಕ್ತಿಯಾಗಿ ಮಾಡಿದ್ದಾರೆ’ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ, ‘ನೂರಾರು ವರ್ಷಗಳ ಹಿಂದೆಯೇ ವಚನಗಳ ಸಂಶೋಧನೆಯಾಯಿತು. ಆದರೆ, ಶೇ 95 ಲಿಂಗಾಯತರು ಆಗ ಸುಶಿಕ್ಷಿತರಾಗಿರಲಿಲ್ಲ. ಹಾಗಾಗಿ ವಚನಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ. ಪುರಾಣಗಳಲ್ಲಿ ಹೇಳಿದಂತೆ, ‘ಶಿವನೇ ನಂದಿಯನ್ನು ಬಸವ ರೂಪದಲ್ಲಿ ಧರೆಗೆ ಕಳಿಸಿದ’ ಎಂದು ನಂಬಿ ಇಂದಿಗೂ ಎತ್ತುಗಳನ್ನು ಬಸವಣ್ಣನೆಂದು ನಂಬಿ ಜನರು ಪೂಜಿಸುತ್ತಾರೆ‌. ಆದರೆ, ಬಸವಣ್ಣ ‘ಪುರಾಣವೆಂಬುದು ಪುಂಡರಗೋಷ್ಠಿ’ ಎಂದು ಇದನ್ನು ಅಲ್ಲಗಳೆದಿದ್ದರು. ಸಮಾಜ ಇದನ್ನು ಅರ್ಥೈಸಿಕೊಂಡು, ನೈಜ ಬಸವ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ‘ಮಾನವನ ಶ್ರೇಯಸ್ಸಿಗೆ ಮೇಲ್ಪಂಕ್ತಿಯಾಗಿ ನಿಂತ ಬಸವಣ್ಣನವರು, ಕೆಳಸ್ತರದಿಂದ  ಜನರನ್ನು ಮೇಲೆಕ್ಕೆ ಎತ್ತಿದರು. ಅಲ್ಲದೆ, ಕನ್ನಡ ಭಾಷೆ ಶ್ರೀಮಂತಗೊಳಿಸಿದರು’ ಎಂದರು.

ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಶೈಲಜಾ ಭಿಂಗೆ ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಪ್ರೇಮಕ್ಕ ಅಂಗಡಿ ಸ್ವಾಗತಿಸಿದರು. ಸುಧಾ ರೊಟ್ಟಿ ವಂದಿಸಿದರು. ಮನೋಹರ ಉಳ್ಳಾಗಡ್ಡಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT