ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ | 'ಗಡಿನಾಡ ಕನ್ನಡಿಗರ ಆಶೋತ್ತರಗಳಿಗೆ ಸರ್ಕಾರ ಸ್ಪಂದಿಸಲಿ'

ಗಡಿಭಾಗದ ಕನ್ನಡ ಶಾಲೆ; ಮೂಲ ಸೌಕರ್ಯಗಳ ಕೊರತೆ: ಶ್ರೀಶೈಲ ಅವಟಿ
Published 19 ಡಿಸೆಂಬರ್ 2023, 15:58 IST
Last Updated 19 ಡಿಸೆಂಬರ್ 2023, 15:58 IST
ಅಕ್ಷರ ಗಾತ್ರ

ಅಥಣಿ: ‘ಗಡಿನಾಡು ಕನ್ನಡಿಗರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಗಡಿನಾಡು ತಾಲ್ಲೂಕುಗಳನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ತನ್ನ ಕಾರ್ಯ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು’ ಎಂದು ಸಾಹಿತಿ ಹಾಗೂ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರೀಶೈಲ ಅವಟಿ ಸರ್ಕಾರವನ್ನು ಒತ್ತಾಯಿಸಿದರು.

ಅವರು ಭಾನುವಾರ ನೆರಿಗೆ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಉಮರಾಣಿ ಗ್ರಾಮದ ಮಾತಾಜಿ ಅಕ್ಕಮಹಾದೇವಿ ಜ್ಞಾನ ಯೋಗಾಶ್ರಮದ ಆಶ್ರಯದ 19ನೇ ವಾರ್ಷಿಕೋತ್ಸವದ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಡಿ ಭಾಗದ ಜನತೆಗೆ ಮೂಲ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆ ಸುಧಾರಣೆ, ರೈತರ ಜಮೀನುಗಳಿಗೆ ನೀರಾವರಿ ವ್ಯವಸ್ಥೆ, ರೈತರ ಮಕ್ಕಳಿಗೆ ಕನ್ನಡ ಶಾಲೆಗಳ ಸುಧಾರಣೆ, ಶಿಕ್ಷಕರ ಕೊರತೆ ನೀಗಿಸುವಲ್ಲಿ ಸರ್ಕಾರ ಹೆಚ್ಚಿನ ಅನುದಾನ ಒದಗಿಸದೆ ಗಡಿನಾಡಿನ ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಗಡಿನಾಡಿನ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.

ಗಡಿನಾಡು ಕನ್ನಡಿಗರ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಬೇಕು, ಈ ಭಾಗದ ದೇವಸ್ಥಾನಗಳನ್ನ ಜೀರ್ಣೋದ್ಧಾರಗೊಳಿಸಿ, ಓದುಗರಿಗೆ ಗ್ರಂಥಾಲಯಗಳನ್ನು ಸ್ಥಾಪಿಸಿ ಉಚಿತ ಪುಸ್ತಕ ಹಾಗೂ ಪತ್ರಿಕೆಗಳನ್ನು ಒದಗಿಸಬೇಕು. ಗಡಿ ಭಾಗದ ಪ್ರತಿ ತಾಲ್ಲೂಕಿನಲ್ಲಿಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿನಿಧಿಗಳನ್ನು ನಿಯೋಜಿಸಬೇಕು. ಗಡಿ ಭಾಗದ ರೈತರಿಗೆ ಕೃಷಿ ಸಾಲ ಮತ್ತು ಇನ್ನಿತರ ಸೌಲಭ್ಯಗಳು ದೊರಕಬೇಕು.  ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿ, ಗಡಿ ಭಾಗದ ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಕೊರತೆ ಇರುವ ಶಿಕ್ಷಕರನ್ನ ಕೂಡಲೇ ನೇಮಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದ ಉಮರಾಣಿ ಶ್ರೀಮಠದ ಅಕ್ಕಮಹಾದೇವಿ ಮಾತಾಜಿ ಮಾತನಾಡಿ, ಗಡಿ ಪ್ರದೇಶದಲ್ಲಿರುವ ಕನ್ನಡಿಗರಿಗಾಗಿ ಶ್ರೀಮಠದಿಂದ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.

ಗಡಿನಾಡ ಕನ್ನಡ ಸಾಹಿತಿಗಳು ರಚಿಸಿದ ವಿವಿಧ ಪುಸ್ತಕಗಳನ್ನು ಸಮ್ಮೇಳನ ಅಧ್ಯಕ್ಷರು ಮತ್ತು ಗಣ್ಯರು ಬಿಡುಗಡೆಗೊಳಿಸಿದರು.

ಸಾನ್ನಿಧ್ಯ ವಹಿಸಿದ್ದ ಗದಗದ ಅಕ್ಕ ಮಹಾದೇವಿತಾಯಿ, ಚಿಕ್ಕಪಡಸಲಗಿ ಅಕ್ಕಮಹಾದೇವಿತಾಯಿ, ಸಾಹಿತಿ ಮಲಿಕಜಾನ ಶೇಖ, ಬಾಬುರಾವ ದೇವನಾಯಿಕ, ಧರೇಪ್ಪ ಕಟ್ಟಿಮನಿ, ಅಶೋಕ ಸಾವಳಗಿ, ಚನ್ನಪ್ಪ ಸುತ್ತಾರ, ಮಾಣಿಕಪ್ರಭು ಬಡಿಗೇರ, ಕಾಡಪ್ಪ ನಾಗರಾಳ, ಚಿಕ್ಕಯ್ಯ ನಂದಿಕೊಲ, ಚನ್ನಪ್ಪ ಮಾಳಿ, ಪರಶುರಾಮ ಭೋರಾಡೆ, ಬಾಬು ಕೋಳಿ, ಮಹಾದೇವ ಪಾಚೋಳಿ ಉಪಸ್ಥಿತರಿದ್ದರು. ಶಿಕ್ಷಕಿ ಮೀನಾಕ್ಷಿ ಹತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಾನಂದ ತುಂಗಳ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗಡಿನಾಡು ಉಮರಾಣಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗ್ರಾಮದಲ್ಲಿ ಕನ್ನಡದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪ್ರಗತಿಪರ ರೈತ ಮುಖಂಡ ದುಂಡಪ್ಪ ಬಿರಾದಾರ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಗಡಿನಾಡಿನ ವಿವಿಧ ಗ್ರಾಮಗಳ ಕನ್ನಡಿಗರು ಶಾಲಾ ಮಕ್ಕಳು ಶಿಕ್ಷಕ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನದ ಮೆರಗು ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT