ಮಸ್ಕಿ: ಶೈಕ್ಷಣಿಕ ವರ್ಷ ಆರಂಭದ ಅಂಗವಾಗಿ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದಲ್ಲಿ ನಡೆದ ಅಕ್ಷರ ಬಂಡಿ ಜಾಥಾ ಎಲ್ಲರ ಗಮನ ಸೆಳೆಯಿತು.
ಬಂಡಿ ಹಾಗೂ ಎತ್ತುಗಳಿಗೆ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಎತ್ತಿನ ಬಂಡಿಯಲ್ಲಿ ಮಕ್ಕಳೊಂದಿಗೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಇದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಂದ ವೀರಗಾಸೆ ಕುಣಿತ, ಬಯಲಾಟ ನೃತ್ಯ ಸೇರಿದಂತೆ ವಿವಿಧ ಜಾನಪದ ನೃತ್ಯಗಳು ಸಾರ್ವಜನಿಕರ ಗಮನ ಸೆಳೆದವು. ಶಾಲಾ ದಾಖಲಾತಿ ಬಿಂಬಿಸುವ ಭಿತ್ತಿಪತ್ರಗಳನ್ನು ಹಿಡಿದು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ‘ನೂತನ ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಸಾರ್ವಜನಿಕರ, ಸಂಘ ಸಂಸ್ಥೆಗಳ ಹಾಗೂ ಪಾಲಕರ ಸಹಾಯ, ಸಹಕಾರ ಅಗತ್ಯವಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆಗಳು ಮಂಗಳವಾರದಿಂದ ಆರಂಭವಾಗಿವೆ. ಪ್ರತಿಯೊಬ್ಬ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವ ಮೂಲಕ ಶಾಲಾ ದಾಖಲಾತಿ ಹೆಚ್ಚಿಸಬೇಕು’ ಎಂದು ಹೇಳಿದರು.
’ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಉಚಿತ ಪಠ್ಯಪುಸ್ತಕ, ಬಿಸಿಯೂಟ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳನ್ನು ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಿದಾಗ ಮಾತ್ರ ಮಸ್ಕಿ ಶೈಕ್ಷಣಿಕ ತಾಲ್ಲೂಕು ಕೇಂದ್ರವಾಗುತ್ತದೆ’ ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ನಾಗನಗೌಡ, ಸಂಪನ್ಮೂಲ ವ್ಯಕ್ತಿ ನಾಗನಗೌಡ ಪಾಟೀಲ, ಗುಂಡುರಾವ್ ದೇಸಾಯಿ, ಬಾಲಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಬ್ದುಲ್ ಗನಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಿ’(ಮುದಗಲ್): ‘ಸಂವಿಧಾನದಲ್ಲಿ ಕಲ್ಪಿಸಿರುವ ಶಿಕ್ಷಣದ ಹಕ್ಕುಗಳನ್ನು ಪಡೆಯಲು ಎಲ್ಲರೂ ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು’ ಎಂದು ಲಿಂಗಸುಗೂರು ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ ಸಲಹೆ ನೀಡಿದರು.
ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ಸರ್ವಶಕ್ತಿಯಾಗಿದ್ದು, ವಿದ್ಯೆಯಿಂದ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು. ಸಮಾಜದಲ್ಲಿ ಒಳ್ಳೆಯ ನಾಗರಿಕನಾಗಲು ಶಿಕ್ಷಣ ಬಹು ಮುಖ್ಯವಾಗಿದ್ದು, ಮಕ್ಕಳನ್ನು ತಿದ್ದಿತಿಡಿ ಉನ್ನತ ಮಟ್ಟದ ವ್ಯಕ್ತಿಯಾಗಿ ನಿರ್ಮಿಸುವುದರಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ದೊರಕಿಸಲು ತಾಲ್ಲೂಕು ಶಿಕ್ಷಣಾಧಿಕಾರಿ ಮುಂದಾಗಬೇಕು’ ಎಂದು ಸೂಚಿಸಿದರು.
ಲಿಂಗಸುಗೂರು ತಾಲೂಕು ಶಿಕ್ಷ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ ಮಾತನಾಡಿದರು.
ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ಗುಂಡಪ್ಪ, ಮುದಗಲ್ ಪುರಸಭೆ ಮುಖ್ಯಾಧಿಕಾರಿ ಹಾಜಿಬಾಬು, ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ ಗದ್ದಿ, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಸೆಕ್ರಡ್ ಶಾಲೆ ಫಾದರ್ ಫ್ರಾನ್ಸಿಸ್ ಚಿನ್ನಪ್ಪ, ಮುಖ್ಯ ಶಿಕ್ಷಕ ಎಂ.ಎಚ್ ಗೌಡರ, ಬಾಲಚಂದ್ರ ದಾಸರ್, ಎಂ.ಡಿ ಶರೀಫ್, ಹುಸೇನಸಾಬ ಹುನಗುಂದ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ಉಮೇಶ ಕುಲಕರ್ಣಿ, ಶಿಕ್ಷಣ ಸಂಯೋಜಕರಾದ ನೀಲಪ್ಪ ಹೊಸಮನಿ, ಶ್ರೀಕಾಂತ, ಯಮನಪ್ಪ ಭಜಂತ್ರಿ ಇದ್ದರು.
ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು
ಸಿರವಾರ: ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಶಾಲೆಯ ಕೊಠಡಿಗಳು ಮತ್ತು ಆವರಣವನ್ನು ಸ್ವಚ್ಛಗೊಳಿಸಿ ಪ್ರತಿಯೊಂದು ಹಸಿರು ತೋರಣಗಳಿಂದ ಸಿಂಗರಿಸಿ ರಂಗೋಲಿ ಬಿಡಿಸಲಾಗಿತ್ತು.
ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿನಿಯರಿಗೆ ಶಾಲೆಯ ವಾತಾವರಣ ಹಬ್ಬದ ದಿನದಂತೆ ಭಾಸವಾಯಿತು. ಶಾಲೆಯ ಪ್ರಾರಂಭೋತ್ಸವದ ನಂತರ ವಿದ್ಯಾರ್ಥಿನಿಯರಿಗೆ ಪಠ್ಯಪುಸ್ತಕಗಳನ್ನು ಮುಖ್ಯ ಶಿಕ್ಷಕಿ ಎಚ್.ಮಂಜುಳಾ ವಿತರಿಸಿದರು. ಶಾಲೆಯ ಶಿಕ್ಷಕರು, ಸಹಾಯಕ ಸಿಬ್ಬಂದಿ ಇದ್ದರು.
ಮಾಡಗಿರಿ ಶಾಲೆ: ಸಮೀಪದ ಮಾಡಗಿರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಶಿಕ್ಷಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರ್ಕಾರ ಉಚಿತ ಶಿಕ್ಷಣ ಮತ್ತು ಸೌಲಭ್ಯಗಳನ್ನು ತಿಳಿಸುತ್ತಾ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಜಾಥಾ ನಡೆಸಿದರು. ನಂತರ ಸಿಹಿ ಹಂಚಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ವಿತರಿಸಲಾಯಿತು. ಶಾಲೆ ಮುಖ್ಯ ಶಿಕ್ಷಕ ಕೆ.ಬಿ.ಸುನೀಲ್, ಸಹ ಶಿಕ್ಷಕ ರಾಜು ಗುಂಡೂರು ಶಾಲೆ ಮೇಲುಸ್ತುವಾರಿ ಸಮಿತಿ ಸದಸ್ಯರು ಇದ್ದರು.
ಯರಗುಂಟ: ಶಾಲೆ ಸಿಂಗರಿಸಿದ ಮಕ್ಕಳು
ಶಕ್ತಿನಗರ: ಶಾಲಾ ಪ್ರಾರಂಭೋತ್ಸವ ಅಂಗವಾಗಿ ಯರಗುಂಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಿಹಿಯಾದ ಬೆಲ್ಲದ ಸಜ್ಜಕವನ್ನು ನೀಡಿ ಶಾಲೆಗೆ ಬರಮಾಡಿಕೊಂಡರು.
ಬೇಸಿಗೆ ರಜೆಯ ಮಜಾದಲ್ಲಿದ್ದ ಮಕ್ಕಳು ಮಂಗಳವಾರ ಶಾಲೆಯತ್ತ ಹೆಜ್ಜೆ ಹಾಕಿದರು. ಬಹುದಿನಗಳ ಬಳಿಕ ಒಬ್ಬರಿಗೊಬ್ಬರು ಭೇಟಿಯಾದ ವಿದ್ಯಾರ್ಥಿಗಳು ಶಾಲೆಯಲ್ಲಿ ನೀಡಿದ ಸಿಹಿಯನ್ನು ಸ್ವೀಕರಿಸಿ ಸಂಭ್ರಮಿಸಿದರು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಯ ಆವರಣ, ಶಾಲಾ ಕೊಠಡಿ ಸ್ವಚ್ಛಗೊಳಿಸಿ, ಕುಡಿಯುವ ನೀರು ಮತ್ತು ಶೌಚಾಲಯಗಳು ಸುಸ್ಥಿತಿಯಲ್ಲಿ ಇಡಲಾಗಿದ್ದ ದೃಶ್ಯ ಶಾಲೆಗಳಲ್ಲಿ ಕಂಡುಬಂತು. ಶಾಲೆಯನ್ನು ಮಕ್ಕಳು ತಳಿರು ತೋರಣ ಮತ್ತು ರಂಗೋಲಿಯಿಂದ ಶೃಂಗಾರ ಮಾಡಿರುವುದನ್ನು ಕಂಡು ಶಿಕ್ಷಕರು ಶ್ಲಾಘಿಸಿದರು. ಸಗಮಕುಂಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗಪ್ಪಯರಗುಂಟ, ಸದಸ್ಯ ಮಾಳಿಂಗಪ್ಪ, ಶಾಲಾ ಮೇಲುಸ್ತವಾರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತು, ಸದಸ್ಯರಾದ ನಬೀಸಾಬ್, ಜಯಪ್ಪ, ನರಸಪ್ಪಕರೇಕಲ್, ಮುಖ್ಯ ಶಿಕ್ಷಕಿ ತಹನಿಯತ್ ಸುಲ್ತಾನ್, ವಿ.ವೇದಾವತಿ, ಮಹೇಶ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.