ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಲೈಂಗಿಕ ದೌರ್ಜನ್ಯ ಪ್ರಕರಣ- ಕುಟುಂಬಕ್ಕೆ ಜೀವಭಯ: ಸಂತ್ರಸ್ತ ಮಹಿಳೆ

Published 25 ಏಪ್ರಿಲ್ 2024, 15:24 IST
Last Updated 25 ಏಪ್ರಿಲ್ 2024, 15:24 IST
ಅಕ್ಷರ ಗಾತ್ರ

ಬೆಳಗಾವಿ: ‘ನನ್ನ ಮೇಲೆ ದೌರ್ಜನ್ಯ ಎಸಗಿ, ಮತಾಂತರಕ್ಕೆ ಒತ್ತಾಯ ಮಾಡಿದವರಲ್ಲಿ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಇನ್ನೂ ಐವರು ಊರಲ್ಲೇ ಓಡಾಡುತ್ತಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಆರೋಪಿಗಳನ್ನು ಬಂಧಿಸಬೇಕು. ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕು’ ಎಂದು ಸವದತ್ತಿ ತಾಲ್ಲೂಕಿನ ಮುನವಳ್ಳಿಯ ಸಂತ್ರಸ್ತ ಮಹಿಳೆ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರಂತರ ದೌರ್ಜನ್ಯ ಎಸಗಿ ನನ್ನ ಖಾಸಗಿ ಫೋಟೊ, ವಿಡಿಯೊಗಳನ್ನು ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಮಾಡುವ ಬೆದರಿಕೆ ಹಾಕಿದ್ದಾರೆ. ನಾನು ಏಳು ಮಂದಿ ವಿರುದ್ಧ ದೂರು ನೀಡಿದ್ದೇನೆ. ಇದರಲ್ಲಿ ರಫೀಕ್‌ ಬೇಪಾರಿ ಹಾಗೂ ಆತನ ಪತ್ನಿಯನ್ನು ಮಾತ್ರ ಬಂಧಿಸಲಾಗಿದೆ. ಉಳಿದವರಿಂದ ಜೀವಭಯವಿದೆ’ ಎಂದರು.

‘ನಾನು ಕಿರಾಣಿ ಅಂಗಡಿ ನಡೆಸುತ್ತಿದ್ದೆ. ಎರಡು ಮಕ್ಕಳು, ಪತಿ ಜತೆಗೆ ಇದ್ದೆ. ರಫೀಕ್‌ ಬೇಪಾರಿ ನೌಕರಿ ಕೊಡಿಸುವುದಾಗಿ ಆಮಿಷ ತೋರಿಸಿದ. ಅವನೊಂದಿಗಿನ ಸಲುಗೆ ಗೊತ್ತಾಗಿ ನನ್ನ ಗಂಡ ನನ್ನಿಂದ ದೂರಾದ. ನಾನು ಬೆಳಗಾವಿಯ ‘ಸ್ವಾಧಾರ’ ಕೇಂದ್ರ ಸೇರಿದೆ. ನಾಲ್ಕು ತಿಂಗಳ ಬಳಿಕ ರಫೀಕ್‌ ಮತ್ತೆ ನನ್ನನ್ನು ಅಲ್ಲಿಂದ ಕರೆದುಕೊಂಡು ಬೆಳಗಾವಿಯಲ್ಲಿ ಮನೆ ಮಾಡಿ ಇಟ್ಟಿದ್ದ. ಅಲ್ಲಿಯೇ ಕಿರುಕುಳ ಕೊಟ್ಟ. ಮತಾಂತರಕ್ಕೆ ಒತ್ತಾಯ ಮಾಡಿದ’ ಎಂದು ಆರೋಪಿಸಿದರು.

‘ಆರೋಪಿಗಳು ಎರಡು ಬಾರಿ ನನ್ನ ಗಂಡನಿಗೆ ಅಪಘಾತ ಮಾಡಲು ಯತ್ನಿಸಿದ್ದರು. ಇದರಿಂದ ಬೇಸತ್ತು ಎರಡು ಬಾರಿ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ’ ಎಂದರು.

‘ನನ್ನ ಮೊಬೈಲ್‌ ಕಿತ್ತುಕೊಂಡಿದ್ದರಿಂದ ಯಾರನ್ನೂ ಸಂಪರ್ಕಿಸಲು ಆಗಲಿಲ್ಲ. ನನ್ನ ಗಂಡನೇ ಹುಡುಕಿ ಏ.15ರಂದು ಕರೆದುಕೊಂಡು ಬಂದ. ಏ.18ರಂದು ದೂರು ದಾಖಲಿಸಿದ್ದೆ. ಏ.21ರಂದು ಇಬ್ಬರನ್ನು ಪೊಲೀಸರು ಬಂಧಿಸಿದ್ದರು’ ಎಂದರು.

ವಕೀಲರಾದ ವೀಣಾ ಗಸ್ತಿ, ಪೂರ್ಣಿಮಾ ಹೆಗಡೆ, ಜಯಶ್ರೀ ಮಂಡ್ರೋಳಿ, ಮಾಧುರಿ ಪಾಟೀಲ, ರೇಣುಕಾ ಹೆಗ್ಗನಾಯಕ, ಗೃಹಿಣಿ ಶಾಂತಾ ಮುನಿಸ್ವಾಮಿ ಭಂಡಾರಿ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT