ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಜೂನ್‌ 6ರೊಳಗೆ ನಾಗೇಂದ್ರ ರಾಜೀನಾಮೆ ನೀಡಲಿ: ಶಾಸಕ ಅಭಯ ಪಾಟೀಲ

Published 30 ಮೇ 2024, 14:28 IST
Last Updated 30 ಮೇ 2024, 14:28 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಹಗರಣದ ಆರೋಪಿ ಸಚಿವೆ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್‌ 6ರೊಳಗೆ ಅವರಿಂದ ರಾಜೀನಾಮೆ ಪಡೆಯದಿದ್ದರೆ ಬಿಜೆಪಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಿದೆ’ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಸಿದರು.

‘ಕಾಂಗ್ರೆಸ್‌ ಸರ್ಕಾರ ಬಂದು ಒಂದೇ ವರ್ಷದೊಳಗೆ ಇಷ್ಟು ದೊಡ್ಡ ಭ್ರಷ್ಟಾಚಾರ ಪ್ರಕರಣ ಬಯಲಾಗಿದೆ. ನಿಗಮದ ಹಣವನ್ನು ಸಚಿವ ನಾಗೇಂದ್ರ ಲಪಟಾಯಿಸಿದ್ದಾರೆ. ಅವರ ಕಿರುಕುಳ ತಾಳಲಾರದೇ ಅಧಿಕಾರಿ ಚಂದ್ರಶೇಖರ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಯದ ಪರವಾಗಿ ಹೋರಾಟಕ್ಕೆ ನಿಂತಿದ್ದ ಅಧಿಕಾರಿಯೊಬ್ಬರ ಜೀವಹಾನಿಯಾಗಿದೆ. ಚಂದ್ರಶೇಖರ್‌ ಅವರು ಡೆತ್‌ನೋಟ್‌ನಲ್ಲಿ ಸಚಿವ ನಾಗೇಂದ್ರ ಅವರ ಹೆಸರನ್ನು ಉಲ್ಲೇಖಿಸಿ ಭ್ರಷ್ಟಾಚಾರ ಹೊರಹಾಕಿದ್ದಾರೆ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಪ್ರಕರಣದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟೊತ್ತಿಗೆ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕಿತ್ತು. ಅಥವಾ ಸಂಪುಟದಿಂದ ವಜಾ ಮಾಡಬೇಕಿತ್ತು. ಪರಿಶಿಷ್ಟರ ಮತ ‍ಪಡೆದು ಅಧಿಕಾರಕ್ಕೆ ಬಂದ ಸರ್ಕಾರ ಪರಿಶಿಷ್ಟರ ಅನುದಾನವನ್ನೇ ದುರುಪಯೋಗ ಮಾಡಿಕೊಂಡಿದೆ’ ಎಂದು ಕಿಡಿ ಕಾರಿದರು.

‘ದಲಿತರ ಪರವಾದ ಸರ್ಕಾರ ಎಂದು ಜಂಬ ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದೆ. ಈ ಸರ್ಕಾರ 20:20 ಮ್ಯಾಚ್‌ ಆಡುವುದಕ್ಕೂ ಸಮರ್ಥವಿಲ್ಲ. ಇವರದ್ದು 10:10 ಮ್ಯಾಚ್‌ ಮಾತ್ರ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಸರ್ಕಾರದ ಮೊದಲ ವಿಕೆಟ್‌ ಪತನವಾಗಲಿದೆ’ ಎಂದರು.

‘ಬಿಜೆಪಿ ಸರ್ಕಾರದ ಮೇಲೆ ಶೇ 40 ಕಮಿಷನ್ ಆರೋಪ ಮಾಡಿದ್ದು ಇದೇ ಸಿದ್ದರಾಮಯ್ಯ. ಆದರೆ, ಈ ಕಾಂಗ್ರೆಸ್ ಸರ್ಕಾರ ನೂರಕ್ಕೆ 100 ಪರ್ಸೆಂಟ್ ಕಮಿಷನ್‌ ಹೊಡೆಯುತ್ತಿದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಲು ಆರಂಭಿಸುತ್ತೇವೆ’ ಎಂದು ಅಭಯ ಪಾಟೀಲ ಹೇಳಿದರು.

22 ಸ್ಥಾನ ಬಿಜೆಪಿಗೆ: ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ನಾಯಕರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಬೆಳಗಾವಿಯ ಎರಡೂ ಸ್ಥಾನಗಳು ಸೇರಿದಂತೆ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವುದು ಖಾತ್ರಿಯಾಗಿದೆ. ದೇಶದಲ್ಲಿ 402 ಸ್ಥಾನ ಗೆಲ್ಲುವ ಲೆಕ್ಕಾಚಾರ ಮಾಡಲಾಗಿದೆ’ ಎಂದರು.

‘ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಬ್ಬರೂ ನಮ್ಮ ನಾಯಕರು. ಯತ್ನಾಳ ಅವರು ವಿಜಯೇಂದ್ರ‌ ವಿರುದ್ಧ ಮಾತನಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ನಾನು ಕೂಡ ಗೌಡ ಇದ್ದೇನೆ; ಯಾವುದನ್ನೂ ಮುಚ್ಚಿಡುವ ಜಾಯಮಾನ ನನ್ನದಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ್, ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಇತರರು ಇದ್ದರು.

‘ರಾಹುಲ್‌ ಹುಚ್ಚಾಸ್ಪತ್ರೆ ಸೇರಲಿ’

‘ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಪ್ರತಿಯೊಬ್ಬರ ಅಕೌಂಟಿಗೆ ₹8,500 ಹಣವನ್ನು ತಕ್ಷಣ ಹಾಕುತ್ತೇವೆ’ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಭಯ ಪಾಟೀಲ, ‘ಧಾರವಾಡದಲ್ಲಿ ಹುಚ್ಚಾಸ್ಪತ್ರೆ ಇದೆ. ಟಕಾಟಕ್‌ ಟಕಾಟಕ್‌ ಹಣ ಹಾಕುತ್ತೇವೆ ಎಂದು ಹೇಳುವಂಥ 50 ಮಂದಿ ಅಲ್ಲಿ ಈಗಾಗಲೇ ದಾಖಲಾಗಿದ್ದಾರೆ. ಕಾಂಗ್ರೆಸ್‌ನ ನಾಯಕನೇ 51ನೇ ವ್ಯಕ್ತಿ’ ಎಂದು ಶಾಸಕ ಅಭಯ ಪಾಟೀಲ ಮೂದಲಿಸಿದರು.

‘ನಮ್ಮ ದೇಶದ ಆದಾಯ ಎಷ್ಟು, ಬಜೆಟ್‌ ಎಷ್ಟು ಎಂಬ ಲೆಕ್ಕಾಚಾರವೇ ಆ ವ್ಯಕ್ತಿಗೆ ಇಲ್ಲ. ತಲಾ ₹8500ರನ್ನು ಟಕಾಟಕ್‌ ಎಂದು ಜನರ ಅಕೌಂಟಿಗೆ ಹಾಕಿದರೆ ಫಟಾಫಟ್‌ ಎಂದು ಸರ್ಕಾರ ಬಿದ್ದುಹೋಗುತ್ತದೆ. ಯಾವುದನ್ನೂ ಲೆಕ್ಕ ಹಾಕಿ ತಾಳೆ ಮಾಡದೇ ಹೇಗೆ ಹೇಳುತ್ತಾರೆ? ಇದು ತಲೆ ಸರಿ ಇಲ್ಲದವರ ಹೇಳಿಕೆ’ ಎಂದೂ ಲೇವಡಿ ಮಾಡಿದರು.

‘ಇಂಥ ಮಾತನ್ನು ಯಾರಾದರೂ ಬುದ್ಧವಂತರು, ಅರ್ಥಶಾಸ್ತ್ರ ತಿಳಿದವರು ಹೇಳಿದರೆ ಜನರು ಒಪ್ಪುತ್ತಾರೆ. ಅದನ್ನು ಬಿಟ್ಟು ತಲೆ ಸರಿ ಇಲ್ಲದವರೆಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ಇಂಥ ಹೇಳಿಕೆ ನೀಡುವುದು ಅಸಂಬದ್ಧ. ಕಾಂಗ್ರೆಸ್ ಸ್ಟಾರ್ ಪ್ರಚಾರಕರಾಗಿ ರಾಹುಲ್‌ ಗಾಂಧಿ ಅವರು ಎಲ್ಲ ಕಡೆ ಇದನ್ನೇ ಹೇಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. 40 ಸ್ಥಾನಗಳನ್ನೂ ಗೆಲ್ಲಲು ಆಗದವರು ಈ ರೀತಿ ಭರವಸೆ ನೀಡುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT