ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮನ ಕಿತ್ತೂರು | ಶೌಚಕ್ಕೆ ವಿದ್ಯಾರ್ಥಿನಿಯರ ಪರದಾಟ

400ಕ್ಕೂ ಹೆಚ್ಚು ಮಕ್ಕಳಿಗೆ 8 ಮೂತ್ರಾಲಯ
Published 3 ಜೂನ್ 2024, 9:08 IST
Last Updated 3 ಜೂನ್ 2024, 9:08 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಗ್ರಾಮಾಂತರ ಪ್ರದೇಶದ ಪ್ರಥಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ಇಲ್ಲಿನ ಸರೋಜಾತಾಯಿ ಮಾರಿಹಾಳ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯು ವಿದ್ಯಾರ್ಥಿನಿಯರ ಸಂಖ್ಯೆಗೆ ಅಗತ್ಯವಾಗಿರುವ ಮೂತ್ರಾಲಯ ವ್ಯವಸ್ಥೆಯನ್ನು ಹೊಂದಿಲ್ಲ. ಹೀಗಾಗಿ ಅವರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

‘ವರ್ಷದಿಂದ ವರ್ಷಕ್ಕೆ ಏರುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಮೂತ್ರಾಲಯ ಸೌಲಭ್ಯ ಕಲ್ಪಿಸಬೇಕಿತ್ತು. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಲು ಹೋಗಿಲ್ಲ’ ಎಂದು ದೂರುತ್ತಾರೆ ಪಾಲಕರು.

‘ಬಾಲಕಿಯರ ಪ್ರೌಢಶಾಲೆಯ ಬಳಿಯೇ ಪದವಿ ಪೂರ್ವ ಸರ್ಕಾರಿ ಕಾಲೇಜು ಸ್ಥಾಪನೆಯಾಗಿ ಅನೇಕ ವರ್ಷಗಳು ಉರುಳಿವೆ. ಅಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಸುಮಾರು ಅರ್ಧದಷ್ಟು ವಿದ್ಯಾರ್ಥಿನಿಯರು ಇದ್ದಾರೆ. ಅವರೂ ಇದೇ ಶೌಚಾಲಯ ಅವಲಂಬಿಸಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ’ ಎನ್ನುತ್ತಾರೆ ಅವರು.

‘ಎಸ್. ಆರ್. ಕಂಠಿ ಅವರು ಶಿಕ್ಷಣ ಸಚಿವರಾಗಿದ್ದ 1966ರ ಅವಧಿಯಲ್ಲಿ ಬಾಲಕಿಯರಿಗಾಗಿಯೇ ಪ್ರೌಢಶಾಲೆ ಸ್ಥಾಪನೆಯಾಯಿತು. ವಿದ್ಯಾರ್ಥಿನಿಯರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಬಂದಿದೆ. ಕಳೆದ ವರ್ಷ ಈ ಶಾಲೆಯಲ್ಲಿ 434 ವಿದ್ಯಾರ್ಥಿನಿಯರು ಓದುತ್ತಿದ್ದರು’ ಎಂದು ಶಾಲೆಯ ಮೂಲಗಳು ತಿಳಿಸುತ್ತವೆ.

‘8ನೇ ತರಗತಿಯಲ್ಲಿ ಎರಡು, 9 ಮತ್ತು 10ನೇ ತರಗತಿಯಲ್ಲಿ ಮೂರು ವಿಭಾಗ (ಡಿವಿಜನ್) ಗಳನ್ನಾಗಿ ಮಾಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಟು ಕೊಠಡಿಗಳಲ್ಲಿ ಸಮಾರು 450 ವಿದ್ಯಾರ್ಥಿನಿಯರು ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ. 25 ಜನ ಸಿಬ್ಬಂದಿಯೂ ಇದ್ದಾರೆ. ಇವರಲ್ಲಿ 15ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. 10 ನಿಮಿಷದ ಲಘು ವಿರಾಮ ಇದ್ದಾಗ ಈಗ ಲಭ್ಯವಿರುವ 8 ಮೂತ್ರಾಲಯ ಮುಂದೆ ವಿದ್ಯಾರ್ಥಿನಿಯರು ಸರತಿಯಲ್ಲಿ ನಿಲ್ಲಬೇಕು. ಮಳೆಗಾಲದಲ್ಲಂತೂ ಪರಿಸ್ಥಿತಿ ಹೇಳತೀರದು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿನಿಯರು.

‘ಈ ಸಮಸ್ಯೆ ಬಗ್ಗೆ ಕೆಲ ಶಾಲಾ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. 25 ಮೂತ್ರಾಲಯವಾದರೂ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ‘ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT