ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಲ್ಲಿ ಸಲ್ಲದವರು, ಇಲ್ಲಿ ಹೇಗೆ ಸಲ್ಲುತ್ತಾರೆ?’

ಜಗದೀಶ ಶೆಟ್ಟರ್‌ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳಕರ ವಾಗ್ದಾಳಿ
Published 30 ಮಾರ್ಚ್ 2024, 16:13 IST
Last Updated 30 ಮಾರ್ಚ್ 2024, 16:13 IST
ಅಕ್ಷರ ಗಾತ್ರ

ಬೆಳಗಾವಿ: ‘ಹುಬ್ಬಳ್ಳಿ –ಧಾರವಾಡ ಜನರಿಂದ ತಿರಸ್ಕರಿಸಲ್ಪಟ್ಟ ವ್ಯಕ್ತಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬೆಳಗಾವಿಯಲ್ಲಿ ಸಲ್ಲಲು ಹೇಗೆ ಸಾಧ್ಯ?. ಸ್ವತಃ ಬೀಗರಿಗೆ ಟಿಕೆಟ್ ತಪ್ಪಿಸಿ ತಾವೇ ಅಭ್ಯರ್ಥಿ ಆಗುವ ಮೂಲಕ ಸ್ವಾರ್ಥ ರಾಜಕಾರಣಿ ಎಂದು ನಿರೂಪಿಸಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.

ಲೋಕಸಭೆ ಚುನಾವಣೆಯ ಪ್ರಚಾರಾರ್ಥ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸತತವಾಗಿ ಆರು ಬಾರಿ ಆಯ್ಕೆ ಮಾಡಿದ ಹುಬ್ಬಳ್ಳಿ– ಧಾರವಾಡ ಜನತೆಯನ್ನು ಮರೆತ ಶೆಟ್ಟರ್ ಅವರಿಂದ ಬೆಳಗಾವಿ ಜ‌ನತೆ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಬೆಳವಾಡಿ ಮಲ್ಲಮ್ಮನಂತಹ ಮಹನೀಯರು ಹುಟ್ಟಿ ಬೆಳೆದ ಜಿಲ್ಲೆಗೆ ಇಂಥ ನಾಯಕರು ಬೇಡ’ ಎಂದು ಹೇಳಿದರು.

‘ಕಳೆದ 11 ‌ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ನನ್ನ ಮಗ ಉತ್ತಮ ಒಡನಾಟ ಹೊಂದಿದ್ದಾನೆ. ಈ ಕ್ಷೇತ್ರದ ನಾಡಿ ಮಿಡಿತದ ಅರಿವು ಅವನಿಗಿದೆ. ನನಗೆ ಆಶೀರ್ವದಿಸಿದಂತೆ ನನ್ನ ಮಗನಿಗೂ ಜನ ಸೇವೆ ಮಾಡಲು ಅವಕಾಶ ನೀಡಬೇಕು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ, ವಿನೋದ್ ಚವ್ಹಾನ್, ಆಸೀಫ್ ಮುಲ್ಲಾ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ರಾಮಚಂದ್ರ ಚವ್ಹಾನ್, ಸಂಜಯ್ ಚಾಟೆ, ಬಾಗಣ್ಣ ನರೋಟಿ, ಸಮೀರ್, ಬಸವರಾಜ ಮ್ಯಾಗೋಟಿ, ಗೋರೆಸಾಬ್ ಜಮಾದಾರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ಸುಳೇಬಾವಿ ವರದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಹಾಗೂ ಯದ್ದಲಭಾವಿಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಲಕ್ಷ್ಮಿ ಹೆಬ್ಬಾಳಕರ ಶನಿವಾರ ಪ್ರಚಾರ ನಡೆಸಿದರು.

‘ನಾನು 24 ವರ್ಷಗಳ ಹಿಂದೆ ಖಾನಾಪುರದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಆರಂಭಿಸಿದೆ. ಇಂದು ಏಳು ಕೋಟಿ ಜನಸಂಖ್ಯೆಯ ಕರ್ನಾಟಕ ರಾಜ್ಯದಲ್ಲಿ ಏಕೈಕ ಮಹಿಳಾ ಮಂತ್ರಿಯಾಗಿರುವೆ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಗೂ ದೇವರ ಆಶೀರ್ವಾದ ಕಾರಣ. ನನ್ನ ಮಗನಿಗೂ ನಿಮ್ಮ ಆಶೀರ್ವಾದ ಇರಲಿ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ, ಶಂಕರಗೌಡ ಪಾಟೀಲ, ಮಹೇಶ ಸುಗಣೆನ್ನವರ, ನಾಗೇಶ ದೇಸಾಯಿ, ದತ್ತಾ ಬಂಡಿಗೆನಿ, ಫಕೀರವ್ವ ಅಮ್ಮಪೂರ್, ಲಕ್ಷ್ಮಿನಾರಾಯಣ, ರುದ್ರಪ್ಪ, ಉದಯ ಕೆಸರೂರ್, ಮಂಜು ಪೂಜೇರಿ, ಬಸವರಾಜ ನೇಸರಗಿ ಇದ್ದರು.

‘ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿ’

ಬೆಳಗಾವಿ: ‘ನಿಮ್ಮ ಮನೆ ಮಗ ಮೃಣಾಲ್‌ ಹೆಬ್ಬಾಳಕರ ಅವರನ್ನು ಬೆಂಬಲಿಸುವ ಮೂಲಕ ಬೆಳಗಾವಿ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ತಾಲ್ಲೂಕಿನ ಮೊದಗಾ ಹಾಗೂ ಹೊನ್ನಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು ‘ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಕಳೆದ ವರ್ಷ ಶೆಟ್ಟರ್ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡರು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಅವರ ಹಿರಿತನಕ್ಕೆ ಗೌರವ ನೀಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ಇದೀಗ ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಬೇಕೆಂದು ಬಿಜೆಪಿಗೆ‌ ಜಾರಿಕೊಂಡರು’ ಎಂದರು. ‘ಎಷ್ಟು ದಿನ ಅಂತ ಮೋದಿ ನೋಡಿ ಬಿಜೆಪಿಗೆ ಮತ ಹಾಕುವುದು. ಬಿಜೆಪಿಯ ಸ್ಥಳೀಯ ಅಭ್ಯರ್ಥಿಗಳು ಕೇವಲ ಮೋದಿ ಅವರನ್ನು ಅವಲಂಬಿಸಿದ್ದಾರೆ. ಮತದಾರರು ಜಾಗರೂಕತೆಯಿಂದ ಮತ ಚಲಾಯಿಸಿಬೇಕು’ ಎಂದರು. ಗಂಗಣ್ಣ ಕಲ್ಲೂರ್ ಶಂಕರಗೌಡ ಪಾಟೀಲ ಬಸವರಾಜ ಮ್ಯಾಗೋಟಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಗ್ರಾಮದ ಯುವಕರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT