ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಸ್ಥಳದ ಅಭಾವ: ದಾಖಲೆಗಳ ನಿರ್ವಹಣೆಗೂ ತೊಡಕು

Published 23 ನವೆಂಬರ್ 2023, 3:42 IST
Last Updated 23 ನವೆಂಬರ್ 2023, 3:42 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಯಲ್ಲಿ ಎರಡು ಪೀಠ ಕಾರ್ಯನಿರ್ವಹಿಸುತ್ತಿವೆ. ಆದರೆ, ಇಡೀ ಕಚೇರಿ ಇಕ್ಕಟ್ಟಿನಿಂದ ಕೂಡಿದ್ದು, ನ್ಯಾಯಾಲಯದ ಸಭಾಂಗಣಗಳು, ಸದಸ್ಯರ ಕಚೇರಿಗಳು ಮತ್ತು ದಾಖಲೆಗಳ ನಿರ್ವಹಣೆಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಕೊಠಡಿ ಸೇರಿದಂತೆ ಲಭ್ಯವಿರುವ ಸ್ಥಳಗಳಲ್ಲೆಲ್ಲ ವಿವಿಧ ದಾಖಲೆಗಳನ್ನು ಕಟ್ಟಿ ಇರಿಸಲಾಗಿದೆ.

2023ರ ಅಕ್ಟೋಬರ್ ಅಂತ್ಯದ ವೇಳೆಗೆ, ಈ ಆಯೋಗದಲ್ಲಿ 4,875 ಪ್ರಕರಣ ವಿಲೇವಾರಿಗೆ ಬಾಕಿ ಉಳಿದಿವೆ. ನಿಯಮದ ಪ್ರಕಾರ, ಪ್ರತಿ 500 ಪ್ರಕರಣಗಳ ವಿಚಾರಣೆಗೆ ಒಂದು ಪೀಠ ಅಗತ್ಯ. ಇಲ್ಲಿ ಹೆಚ್ಚಿನ ಪ್ರಕರಣ ಬಾಕಿ ಉಳಿದಿದ್ದರೂ, ಪ್ರಸ್ತುತ ಎರಡು ಪೀಠಗಳಷ್ಟೇ ಕೆಲಸ ಮಾಡುತ್ತಿವೆ. ಈ ಕಟ್ಟಡದಲ್ಲಿ ದಾಖಲೆಗಳನ್ನು ಇರಿಸಲು ನಿಗದಿಗೊಳಿಸಿದ್ದ ಕೊಠಡಿಯನ್ನು ಹೆಚ್ಚುವರಿ ಪೀಠಕ್ಕೆ ಬಳಸುತ್ತಿರುವುದರಿಂದ, ಎಲ್ಲೆಂದರಲ್ಲಿ ದಾಖಲೆಗಳನ್ನು ಇಡುವ ಪ್ರಸಂಗ ಬಂದೊದಗಿದೆ.

‘ಆಯೋಗದ ಪೀಠಗಳ ಕಾರ್ಯಚಟುವಟಿಕೆ ಸುಗಮವಾಗಿ ಕೈಗೊಳ್ಳಲು ನಮಗೆ ಹೆಚ್ಚಿನ ಸ್ಥಳಾವಕಾಶ ಬೇಕಿದೆ. ಇದಕ್ಕಾಗಿ ನಗರದಲ್ಲಿ ಒಂದು ಸ್ಥಳವನ್ನೂ ಪರಿಶೀಲಿಸಿದ್ದೇವೆ. ಆದರೆ, ಲೋಕೋಪಯೋಗಿ ಇಲಾಖೆ ವಿವಿಧ ದಾಖಲೆ ಕೇಳಿ, ಮರು ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದರಿಂದ ಈ ಪ್ರಕ್ರಿಯೆ ವಿಳಂಬವಾಗಿದೆ. ಹಾಗಾಗಿ ಈಗ ಕಚೇರಿಯಲ್ಲಿ ಲಭ್ಯವಿರುವ ಸ್ಥಳಗಳಲ್ಲೆಲ್ಲ ದಾಖಲೆಗಳನ್ನು ಇರಿಸಿದ್ದೇವೆ’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್‌ ಮತ್ತು ಆಡಳಿತಾಧಿಕಾರಿ ಗೀತಾ ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಗಾವಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಹೆಚ್ಚುವರಿ ಪೀಠಕ್ಕೆ ಪ್ರತ್ಯೇಕ ಕಟ್ಟಡ ನೀಡಬೇಕೆಂದು ಎರಡು ವರ್ಷಗಳಿಂದ ಹೋರಾಡುತ್ತಿದ್ದೇವೆ. ಆದರೆ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ.
ಎನ್‌.ಆರ್‌.ಲಾತೂರ, ಅಧ್ಯಕ್ಷ, ಜಿಲ್ಲಾ ಗ್ರಾಹಕರ ಸಂಘ ಬೆಳಗಾವಿ

‘ಠೇವಣಿ ಇರಿಸಿದ ಗ್ರಾಹಕರಿಗೆ ಸಹಕಾರಿ ಸೊಸೈಟಿಗಳಿಂದ ವಂಚನೆ, ವಿಮಾ ಕಂಪನಿಗಳು ಕ್ಲೇಮ್‌ ಮೊತ್ತ ಪಾವತಿಸದಿರುವುದು ಸೇರಿದಂತೆ ವಿವಿಧ ಕಾರಣಕ್ಕೆ ತಿಂಗಳಿಗೆ ಸರಾಸರಿ 50ಕ್ಕೂ ಅಧಿಕ ಪ್ರಕರಣ ಇಲ್ಲಿ ದಾಖಲಾಗುತ್ತಿವೆ. ಸುಮಾರು 200 ಪ್ರಕರಣ ಪ್ರತಿ ತಿಂಗಳು ಇತ್ಯರ್ಥವಾಗುತ್ತಿವೆ. ವಿಲೇವಾರಿಯಾಗಬೇಕಿರುವ ಪ್ರಕರಣಗಳ ಪ್ರಮಾಣ ಬಹಳಷ್ಟಿದೆ. ಸ್ಥಳಾವಕಾಶದ ಕೊರತೆಯಿಂದ ಕಚೇರಿ ಕಾರ್ಯನಿರ್ವಹಣೆಗೆ ತೊಡಕಾಗುತ್ತಿರುವುದು ನಿಜ’ ಎಂದು ಹೇಳಿದರು.

ರಾಜ್ಯ ಪೀಠಕ್ಕೂ ಸಿಗದ ಕಟ್ಟಡ

ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಗ್ರಾಹಕರ ವ್ಯಾಜ್ಯಗಳ ಸಂಖ್ಯೆ ಹೆಚ್ಚಿದೆ. ಒಂದುವೇಳೆ ಜಿಲ್ಲಾ ಆಯೋಗದ ತೀರ್ಪು ತೃಪ್ತಿದಾಯಕವಾಗದಿದ್ದರೆ, ಕಕ್ಷಿದಾರರು ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಅದರ ವಿಚಾರಣೆಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲು 2022ರಲ್ಲಿ ಬೆಳಗಾವಿಗೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠವನ್ನು ಸರ್ಕಾರ ಮಂಜೂರುಗೊಳಿಸಿದೆ. ಆದರೆ, ಸೂಕ್ತ ಕಟ್ಟಡ ಲಭಿಸದ್ದರಿಂದ ಈವರೆಗೂ ಅದು ಕಾರ್ಯಾರಂಭ ಮಾಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಹೆಜ್ಜೆ ಹೆಜ್ಜೆಗೂ ಸಮಸ್ಯೆ

‘ನ್ಯಾಯಾಲಯ ಆವರಣದಲ್ಲಿರುವ ಕಟ್ಟಡವೊಂದರಲ್ಲಿ ಆಯೋಗದ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಪೀಠಕ್ಕೆ ತಲಾ ಒಬ್ಬರು ನ್ಯಾಯಾಧೀಶರು ತಲಾ ಒಬ್ಬರು ಸದಸ್ಯರಿದ್ದಾರೆ. ಆದರೆ ಇಕ್ಕಟ್ಟಿನಿಂದ ಕೂಡಿದ ಸ್ಥಳದಲ್ಲಿ ಅವರಿಗೆ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ. ಸದಸ್ಯರಿಗೂ ಸೂಕ್ತ ಕೊಠಡಿಗಳಿಲ್ಲ. ವಕೀಲರಿಗೆ ವಾದ ಮಂಡಿಸಲಾಗುತ್ತಿಲ್ಲ. ಸೂಕ್ತ ಆಸನ ವ್ಯವಸ್ಥೆ ಇಲ್ಲದ್ದರಿಂದ ವಿಚಾರಣೆಗೆ ಬಂದ ಕಕ್ಷಿದಾರರೂ ಪರದಾಡುವಂತಾಗಿದೆ. ನ್ಯಾಯಾಧೀಶರು ವಕೀಲರು ಸಿಬ್ಬಂದಿ ಮತ್ತು ಕಕ್ಷಿದಾರರು ಒಂದೇ ಶೌಚಗೃಹವನ್ನು ಬಳಸುವ ಅನಿವಾರ್ಯತೆಯಿದೆ. ಸ್ಥಳಾವಕಾಶದ ಅಭಾವದ ಹಿನ್ನೆಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆ ತಲೆದೋರಿವೆ’ ಎಂದು ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷ ಎನ್‌.ಆರ್‌.ಲಾತೂರ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಯ ಕೊಠಡಿ‌ಯೊಂದರಲ್ಲಿ ದಾಖಲೆಗಳನ್ನು ಕಟ್ಟಿ ಇಟ್ಟಿರುವುದು–ಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಯ ಕೊಠಡಿ‌ಯೊಂದರಲ್ಲಿ ದಾಖಲೆಗಳನ್ನು ಕಟ್ಟಿ ಇಟ್ಟಿರುವುದು–ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT