ಸೋಮವಾರ, ಜುಲೈ 4, 2022
24 °C

ಬೆಳಗಾವಿ: ಆಯುಷ್ಮಾನ್ ಫಲಾನುಭವಿಗಳೊಂದಿಗೆ ರಾಜ್ಯಪಾಲರ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೌಲಭ್ಯ ಪಡೆದಿರುವ ಜಿಲ್ಲೆಯ ಫಲಾನುಭವಿಗಳೊಂದಿಗೆ ಬುಧವಾರ ಮಾತುಕತೆ ನಡೆಸಿದರು.

‘ಎಲ್ಲ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವ ಮಹತ್ವಾಕಾಂಕ್ಷಿಯಿಂದ ಯೋಜನೆ ಜಾರಿಗೊಳಿಸಲಾಗಿದೆ. ದೇಶದ ಪ್ರತಿಯೊಬ್ಬರೂ ಇದರ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು. ಎಲ್ಲ ವರ್ಗದವರಿಗೂ ಉತ್ತಮ ಚಿಕಿತ್ಸೆ ನೀಡಲು ಈ ಯೋಜನೆ ಸಹಕಾರಿಯಾಗಲಿದೆ’ ಎಂದು ಹೇಳಿದರು.

‘ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಫಲಾನುಭವಿಗಳು ಸಹ ಇದರಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಇತರರೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು. ಅರ್ಹರಾರೂ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಎಬಿಆರ್‌ಕೆ ನೋಡಲ್ ಅಧಿಕಾರಿ ಡಾ.ಚಾಂದನಿ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನದ ಮಾಹಿತಿ  ನೀಡಿದರು. ನಂತರ ಅಲ್ಲಿದ್ದವರಿಗೆ ಯೋಜನೆಯ ಭಿತ್ತಿಪತ್ರವನ್ನು ರಾಜ್ಯಪಾಲರು ವಿತರಿಸಿದರು. ಫಲಾನುಭವಿಗಳೊಂದಿಗೆ ಚಹಾ ಸೇವಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಡಿಎಚ್‌ಒ ಡಾ.ಶಶಿಕಾಂತ ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.

ಬಾಲಕಲ್ಯಾಣ ಕೇಂದ್ರಕ್ಕೆ ಭೇಟಿ

ಇದಕ್ಕೂ ಮುನ್ನ ರಾಜ್ಯಪಾಲರು ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳೊಂದಿಗೆ ಕೆಲವು ಕ್ಷಣ ಕಳೆದರು. ಸಂಸ್ಥೆಯಲ್ಲಿರುವ ಮೂಲ ಕಾರ್ಯಗಳನ್ನು ವೀಕ್ಷಿಸಿದರು.

‘ಸಂಸ್ಥೆಯು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸೇವಾ ಚಟುವಟಿಕೆಗಳು ಮುಂದುವರಿಯಬೇಕು’ ಎಂದು ಹೇಳಿದರು.

ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ‘ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬನ್ನಿ. ಉನ್ನತ ಸ್ಥಾನ ಅಲಂಕರಿಸಿ ದೇಶದ ಉತ್ತಮ ಪ್ರಜೆಯಾಗಿ‘ ಎಂದು ಹಾರೈಸಿದರು.

ಸಂಸದೆ ಮಂಗಲಾ ಅಂಗಡಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಸಂಸ್ಥೆಯ ಅಧ್ಯಕ್ಷ ಮನೀಶ್ ಬಂಡ್ಮಕರ್, ಕಾರ್ಯದರ್ಶಿ ಗಿರೀಶ್ ಇನಾಮದಾರ ಇದ್ದರು.


ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬೆಳಗಾವಿಯಲ್ಲಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳೊಂದಿಗೆ ಬುಧವಾರ ಮಾತುಕತೆ ನಡೆಸಿ, ಮಾಹಿತಿ ಸಾಮಗ್ರಿ ವಿತರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು