ಮಂಗಳವಾರ, ನವೆಂಬರ್ 24, 2020
27 °C
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ

ಅನುದಾನ ವಾಪಸ್: ಕ್ರಮಕ್ಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘2019-20ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಬಳಸದೆ ವಾಪಸ್ ಆಗಲು ಕಾರಣರಾದ ಅಧಿಕಾರಿಗಳ ಕುರಿತು ತನಿಖಾ ಸಮಿತಿಯು ವರದಿ ನೀಡಿದೆ. ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ. ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಮೇಶ ದೇಶಪಾಂಡೆ, ‘ನಿಗದಿತ ದಿನಕ್ಕಿಂತ ತಡವಾಗಿ ಬಿಲ್ ಸಲ್ಲಿಸಲಾಗಿದೆ. ಜೊತೆಗೆ ತಾಂತ್ರಿಕ ನೆಪವೊಡ್ಡಿ ಬಿಲ್ ಪಾಸ್ ಮಾಡದೆ ಅನುದಾನ ಲ್ಯಾಪ್ಸ್ ಆಗಲು ಕಾರಣರಾದ ಖಜಾನೆ ಇಲಾಖೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರು ದನಿಗೂಡಿಸಿದರು.

‘ಪ್ರತಿ ಸಭೆಯಲ್ಲೂ ಈ ವಿಷಯ ಚರ್ಚೆಯಾದರೂ, ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮವಾಗುತ್ತಿಲ್ಲವೇಕೆ’ ಎಂದು ಕೇಳಿದರು.

‘ಅಂದಾಜು ₹ 7 ಕೋಟಿ ಬಿಲ್‌ಗಳಿಗೆ ಮಾರ್ಚ್ 29ಕ್ಕೆ ಟೋಕನ್ ನೀಡಿದ ಖಜಾನೆ ಅಧಿಕಾರಿಗಳು ಅದರಲ್ಲಿ ₹ 1.80 ಕೋಟಿ ಬಿಲ್ ಮಾತ್ರ ಪಾಸ್ ಮಾಡಿದ್ದಾರೆ. ಉಳಿದ ಅನುದಾನ ವಾಪಸಾಗಲು ಕಾರಣರಾಗಿದ್ದಾರೆ’ ಎಂದು ಸದಸ್ಯ ಶಂಕರ ಮಾಡಲಗಿ ದೂರಿದರು.

‘ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಸಿಇಒ, ‘ಹಿಂದಿನ ಸಭೆಗಳಲ್ಲಿ ಸದಸ್ಯರು ಆಗ್ರಹಿಸಿದಂತೆ ತನಿಖೆಗೆ ಸಮಿತಿ ರಚಿಸಲಾಗಿತ್ತು. ಸಮಿತಿಯ ವರದಿ ಪ್ರಕಾರ 28 ಇಲಾಖೆಗಳ ಅನುದಾನ ಲ್ಯಾಪ್ಸ್ ಆಗಿರುವುದು ಕಂಡುಬಂದಿದೆ. ಎಲ್ಲ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವ ಬದಲು‌ ಹೆಚ್ಚು ಅನುದಾನ ಲ್ಯಾಪ್ಸ್ ಮಾಡಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಕಳುಹಿಸಬಹುದು’ ಎಂದರು.

ಸರಕಾರಿ ನೌಕರರ ವೈದ್ಯಕೀಯ ವೆಚ್ಚದ ಬಿಲ್‌ಗಳನ್ನು ಬಾಕಿ ಇಟ್ಟುಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ರಮೇಶ, ‘ಇದರಿಂದ ಅನಾರೋಗ್ಯಕ್ಕೆ ಒಳಗಾದವರಿಗೆ ವಿನಾಕಾರಣ ತೊಂದರೆಯಾಗುತ್ತಿದೆ’ ಎಂದರು.

‘ಬಾಕಿ ಉಳಿದಿರುವ 450 ವೈದ್ಯಕೀಯ ವೆಚ್ಚದ ಬಿಲ್‌ಗಳನ್ನು ತಿಂಗಳಿನಲ್ಲಿ ಪಾಸ್ ಮಾಡಬೇಕು. ಮುಂಬರುವ ದಿನಗಳಲ್ಲಿ ಬಿಲ್ ಪಾವತಿ ತಡವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಿಇಒ ಸೂಚಿಸಿದರು.

‘15ನೇ ಹಣಕಾಸು ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಇರುವ ಅನುದಾನವನ್ನು ಕುಡಿಯುವ ನೀರು ಯೋಜನೆಗೆ ಒದಗಿಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು. ‘ಮಾರ್ಗಸೂಚಿಯಲ್ಲಿ ಇದಕ್ಕೆ ಅವಕಾಶವಿಲ್ಲ’ ಎಂದು ಸಿಇಒ ಸ್ಪಷ್ಟಪಡಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅರುಣ ಕಟಾಂಬಳೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು