ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಣಧೋಳಿ ಕಾಲೇಜಿನಲ್ಲಿ ಹಳ್ಳಿ ಹಬ್ಬ: ಸೀರೆಯುಟ್ಟು, ಬುತ್ತಿ ಹೊತ್ತು ತಂದ ಯುವತಿಯರು

Published 20 ಜನವರಿ 2024, 5:38 IST
Last Updated 20 ಜನವರಿ 2024, 5:38 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಸುಣಧೋಳಿಯ ಜಡಿಸಿದ್ಧೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ವಿದ್ಯಾರ್ಥಿಗಳು, ವಿಶಿಷ್ಟವಾಗಿ ‘ಹಳ್ಳಿ ಹಬ್ಬ’ ಆಚರಿಸಿದರು.

ಯುವತಿಯರು ರಂಗು–ರಂಗಿನ ಇಳಕಲ್‌ ಸೀರೆ ತೊಟ್ಟು ಬಂದಿದ್ದರು. ಮೂಗಿಗೆ ನತ್ತು, ಜುಮುಕಿ, ವಂಕಿ, ಬುಗುಡಿ, ಡಾಬು, ಬೋರ್‌ಮಾಳ, ಕಂಠಿಹಾರ, ಕಾಸಿನ ಸರ, ಕಿವಿಯೋಲೆ ಧರಿಸಿದ್ದ ಅವರು, ಮರೆಯಾಗುತ್ತಿರುವ ಹಳೆಯ ಕಾಲದ ಆಭರಣಗಳ ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಯುವಕರು ಧೋತಿ, ರುಮಾಲು, ಪಂಚೆ, ಟೋಪಿ, ಹೀಗೆ... ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚಿದರು. ‘ನಾವೇನೂ ಕಮ್ಮಿ ಇಲ್ಲ’ ಎನ್ನುವಂತೆ ಶಿಕ್ಷಕರೂ ದೇಸಿ ಉಡುಪಿನಲ್ಲಿ ಗಮನಸೆಳೆದರು.

ಪೇರಿಸಿಟ್ಟ ಜೋಳದ ರಾಶಿ, ಕಬ್ಬು, ಮಾವಿನ ತೊಳಲು, ಬಾಳೆ ದಿಂಡು, ಚೆಂಡು ಹೂವು ಮತ್ತು ವಿವಿಧ ಹೂವುಗಳಿಂದ ವೇದಿಕೆ ಅಲಂಕರಿಸಿದ್ದರು. ವಿದ್ಯಾರ್ಥಿಗಳು ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು. ಲಾವಣಿ, ಕೋಲಾಟ, ಭಜನೆ, ಗೀಗೀಪದ, ಸುಗ್ಗಿ ಹಾಡು, ಡೊಳ್ಳಿನ ಹಾಡುಗಳಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು. ಕೊರವಂಜಿಯ ಏಕಪಾತ್ರಭಿನಯ, ಬೀಸುವ ಕಲ್ಲಿನ ಹಾಡು, ಸೋಬಾನೆ ಹಾಡುಗಳಿಗೆ ‘ಸೋ..’ ಎಂದು ಧ್ವನಿಗೂಡಿಸುವ ಮೂಲಕ ಹಳ್ಳಿಯ ಚಿತ್ರಣ ಅನಾವರಣಗೊಳಿಸಿದರು.

ದೇಸಿ ಊಟದ ಘಮಲು: ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಬುತ್ತಿಯ ಗಂಟು ತಲೆ ಮೇಲೆ ಹೊತ್ತುಕೊಂಡು ಬಂದಿದ್ದರು. ಒಂದೊಂದು ಗಂಟಿನಲ್ಲೂ ಒಂದೊಂದು ದೇಸಿ ಖಾದ್ಯ. ಸಜ್ಜಿ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ, ಖಾರದ ಚಟ್ನಿ, ಗುರೆಳ್ಳ ಚಟ್ನಿ, ಪುಂಡಿಪಲ್ಯೆ, ಬಾನ, ಮೆಕ್ಕಿಕಾಯಿ ಉಪ್ಪಿನಕಾಯಿ, ಶೇಂಗಾ ಹೋಳಿಗೆ, ಮಾದಲಿ ಹೀಗೆ... ಬಾಯಲ್ಲಿ ನೀರೂರಿಸುವ ಖಾದ್ಯಗಳ ಘಮಲು ಕಾಲೇಜು ಕ್ಯಾಂಪಸ್‌ದಲ್ಲಿ ಹರಡಿತ್ತು.

‘ಹಳ್ಳಿ ಹಬ್ಬ’ ಉದ್ಘಾಟಿಸಿದ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ‘ನಮ್ಮ ನಾಡು, ದೇಸಿ ಸಂಸ್ಕೃತಿ ಉಳಿಯಬೇಕು. ಅವುಗಳು ಮರೆಯಾಗದಂತೆ ನೋಡಿಕೊಳ್ಳುವುದು ಯುವಪೀಳಿಗೆ ಜವಾಬ್ದಾರಿ’ ಎಂದರು.

ಪ್ರಾಚಾರ್ಯ ಸುರೇಶ ಲಂಕೆಪ್ಪನ್ನವರ, ಎಚ್.ಎಂ.ಹತ್ತರಕಿ, ಎಸ್.ಡಿ.ವಾಲಿ, ವೆಂಕಪ್ಪ ಉದ್ದನ್ನವರ, ಎ.ಕೆ.ಬಡಿಗೇರ ಇದ್ದರು.

ಮೂಡಲಗಿ ಸಮೀಪದ ಸುಣಧೋಳಿಯ ಜಡಿಸಿದ್ಧೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ‘ಹಳ್ಳಿ ಹಬ್ಬ’ ಆಚರಿಸಲಾಯಿತು
ಮೂಡಲಗಿ ಸಮೀಪದ ಸುಣಧೋಳಿಯ ಜಡಿಸಿದ್ಧೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ‘ಹಳ್ಳಿ ಹಬ್ಬ’ ಆಚರಿಸಲಾಯಿತು
ಜಾನಪದ ಹಾಡು ದೇಸಿ ಊಟದಿಂದ ಭಾಳ್‌ ಖುಷಿ ಆತ್ರಿ. ಇಂಥ ಕಾರ್ಯಕ್ರಮಗೋಳ ಕಾಲೇಜಿನ್ಯಾಗ ಮೇಲಿಂದ ಮೇಲೆ ಆಗಬೇಕ್ರಿ
ಲಕ್ಷ್ಮಿ ಖಿಲಾರಿ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT