ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | 2023: ಸಿಹಿ ಸಂಭ್ರಮದ ಜತೆ ಕಹಿ ಅನುಭವ

ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪರಿವರ್ತನೆ, ನೆನಪಿನ ಬುತ್ತಿಯೊಂದಿಗೆ ಹೊಸ ವರ್ಷಕ್ಕೆ
Published 30 ಡಿಸೆಂಬರ್ 2023, 7:36 IST
Last Updated 30 ಡಿಸೆಂಬರ್ 2023, 7:36 IST
ಅಕ್ಷರ ಗಾತ್ರ

ಬೆಳಗಾವಿ: 2023ನೇ ಸಾಲು ಜಿಲ್ಲೆಯ ಜನರಿಗೆ ಸಿಹಿ–ಸಂಭ್ರಮ ಹಾಗೂ ಕಹಿ–ಅನುಭವಗಳನ್ನು ಸಮನಾಗಿ ಹಂಚಿದೆ. ರಾಜ್ಯೋತ್ಸವ, ಕಿತ್ತೂರು ಉತ್ಸವಗಳು ಐತಿಹಾಸಿಕ ದಾಖಲೆಗಳಾಗಿ ಉಳಿದವು. ನಾಡಿಗೆ ಭೂಷಣರಾದ ಜೈನ ಮುನಿ ಕೊಲೆ, ಚಿಂಚಣಿ ಶ್ರೀಗಳ ಅಕಾಲಿಕ ಸಾವು, ವಿದ್ಯುತ್‌ ಅವಘಡ, ಬರ ಮುಂತಾದವು ಕಹಿ ಅನುಭವಗಳಾಗಿ ಉಳಿದಿವೆ.

ಜುಲೈ 8ರಂದು ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಜೈನ ಆಶ್ರಮದ ಮುನಿ ಕಾಮಕುಮಾರ ನಂದಿ ಮಹಾರಾಜ ಅವರನ್ನು ದುರುಳರು ಬರ್ಬರವಾಗಿ ಕೊಲೆ ಮಾಡಿದರು. ಇದರಿಂದ ಇಡೀ ದೇಶದ ಜೈನ ಸಮುದಾಯದ ದೃಷ್ಟಿ ಬೆಳಗಾವಿ ಕಡೆಗೆ ಹರಿಯಿತು. ಭಕ್ತಿ ಪ್ರಧಾನ ಜನರ ಮನಸ್ಸಿನಲ್ಲಿ ಇದು ಕಹಿ ನೆನಪಾಗಿ ಉಳಿಯಿತು.

ಆ.12ರಂದು ಬೆಳಗಾವಿಯ ಶಾಹೂನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟರು. ದುಡಿದು ಉನ್ನಲು ಬಂದಿದ್ದ ಈ ಜೀವಗಳು ಯಾರದೋ ತಪ್ಪಿಗೆ ಬೆಲೆತೆತ್ತವು. ಈ ಘಟನೆ ಇಡೀ ರಾಜ್ಯವನ್ನು ಮಮ್ಮಲ ಮರಗುವಂತೆ ಮಾಡಿತ್ತು. ಈ ಬಾರಿಯ ಮಳೆಗಾಲದಲ್ಲಿ ಜಿಲ್ಲೆಯ ವಿವಿಧೆಡೆ ನಡೆದ ವಿದ್ಯುತ್‌ ಅವಘಟಗಳಲ್ಲಿ 17 ಜನ ಪ್ರಾಣ ಕಳೆದುಕೊಂಡರು.

ಅ.23ರಿಂದ 25ರ ವರೆಗೆ ಚನ್ನಮ್ಮನ ಕಿತ್ತೂರು ಉತ್ಸವ ಸಂಭ್ರಮದಿಂದ ನಡೆಯಿತು. ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆ ನಡೆದವು. ಸಾವಿರಾರು ಜನರು ಭಾಗವಹಿಸಿ, ನಾಡಾಭಿಮಾನ ಮೆರೆದರು.

ನ.1ರಂದು ನಡೆದ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ದಸರೆಯನ್ನೂ ಮೀರಿಸಿತು. ದಸರೆಯಲ್ಲಿ ಭದ್ರತೆ ನೋಡಿಕೊಂಡಿದ್ದ ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ರಾಮಪ್ಪ ಅವರೇ ಬೆಳಗಾವಿ ರಾಜ್ಯೋತ್ಸವದ ಭದ್ರತೆ ಮಾಡಿದರು. ‘ನನ್ನ ಬದುಕಿನಲ್ಲಿ ಇಂಥ ಉತ್ಸವ ಕಂಡಿರಲಿಲ್ಲ’ ಎನ್ನುವ ಮೂಲಕ ಅವರು ಗಡಿ ಕನ್ನಡಿಗರ ನಾಡಪ್ರೀತಿಗೆ ಮಾರುಹೋದರು. ಈ ಬಾರಿ 5 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಬರೋಬ್ಬರಿ 12 ತಾಸು ನಿರಂತರ ಮೆರವಣಿಗೆ ನಡೆಯಿತು. ಎಲ್ಲಿಯೂ ಸಣ್ಣ ಅವಘಡ, ಅಪಘಾತ, ತಂಟೆಗಳು ಆಗದಂತೆ ಜನರು ನಾಡ ಹಬ್ಬ ಆಚರಿಸಿ ಹಿರಿಮೆಗೆ ಪಾತ್ರವಾದರು. ಈ ಉತ್ಸವ ದಾಖಲೆಯಾಗಿ ಉಳಿಯಿತು.

ನ.12ರಂದು ಚಿಕ್ಕೋಡಿ ತಾಲ್ಲೂಕಿನ ಚಿಂಚಣಿಯ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ (63) ಅನಾರೋಗ್ಯದಿಂದ ಲಿಂಗೈಕ್ಯರಾದರು. ಗಡಿನಾಡಿನಲ್ಲಿ ಧರ್ಮ ಪ್ರಸಾರ ದೊಂದಿಗೆ, ಕನ್ನಡದ ಅಸ್ಮಿತೆ ಉಳಿಸಿ ಬೆಳೆಸಿಕೊಂಡು ಬಂದಿದ್ದ ‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತರಾಗಿದ್ದರು. ಕನ್ನಡದ ತೇರು ಎಳೆಯುವ ಮೂಲಕ ಅವರು ಹೊಸ ಇತಿಹಾಸ ಬರೆದಿದ್ದರು.

ಡಿ.10ರಂದು ಹೊಸ ವಂಟಮೂರಿಯಲ್ಲಿ ಪ್ರೇಮ ಪ್ರಕರಣದ ಕಾರಣ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ, ಹಲ್ಲೆ ಮಾಡಿದ ಘಟನೆ ಇಡೀ ಮನುಕುಲವೇ ತಲೆ ತಗ್ಗಿಸುವಂತೆ ಮಾಡಿತು. ಸ್ವತಃ ಹೈಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಮೂಲಕ ಈ ಪ್ರಕರಣದ ಗಂಭೀರತೆ ಅರುಹಿತು. ಮಣಿಪುರದಲ್ಲಿ ನಡೆದಿದ್ದ ಮಹಿಳೆಯರ ಬೆತ್ತಲೆ ಪ್ರಕರಣದಷ್ಟೇ ದೊಡ್ಡ ಸುದ್ದಿ ಬೆಳಗಾವಿಯಿಂದ ಬಂತು. ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಕ‍ಪ್ಪು ಚುಕ್ಕೆ ಆಗಿ ಉಳಿಯಿತು.

ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಇಮ್ಮಡಿ ‍ಪುಲಿಕೇಶಿಯ ಬೃಹತ್‌ ಪ್ರತಿಮೆ ಕಣ್ಮನ ಸೆಳೆಯಿತು
ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಇಮ್ಮಡಿ ‍ಪುಲಿಕೇಶಿಯ ಬೃಹತ್‌ ಪ್ರತಿಮೆ ಕಣ್ಮನ ಸೆಳೆಯಿತು

ರಾಜಕೀಯ ಸ್ಥಿತ್ಯಂತರದ ವರ್ಷ ಮಾರ್ಚ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ‘ಕೈ’ ಪಡೆಯು ಬಿಜೆಪಿ ಭದ್ರಕೋಟೆ ಭೇದಿಸಿತು. 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಗೆದ್ದು ಬೀಗಿತು. ಬಿಜೆಪಿ 7 ಕ್ಷೇತ್ರಗಳಿಗಷ್ಟೇ ಸೀಮಿತಗೊಂಡಿತು. ಆಪರೇಷನ್‌ ಕಮಲಕ್ಕೆ ಹೆಸರಾದ ಜಿಲ್ಲೆಯಲ್ಲಿ ಮತ್ತೆ ಕೈ ಮೇಲುಗೈ ಸಾಧಿಸಿ ಇತಿಹಾಸ ಮೆರೆಯಿತು. ರಾಜ್ಯ ರಾಜಕಾರಣದ ‘ಶಕ್ತಿ ಕೇಂದ್ರ’ ಎಂದೇ ಹೇಳುವ ಬೆಳಗಾವಿ ಜಿಲ್ಲೆ ಈ ಬಾರಿಯೂ ಪ್ರಭಾವಿ ಸ್ಥಾನ ಪಡೆಯಿತು. ಬೆಳಗಾವಿ ಉತ್ತರ ಕ್ಷೇತ್ರ ಮತ್ತು ರಾಮದುರ್ಗ ಕ್ಷೇತ್ರಗಳಲ್ಲಿ ಹಾಲಿ ಶಾಸಕರಾದ ಅನಿಲ ಬೆನಕೆ ಮಹಾದೇವಪ್ಪ ಯಾದವಾಡ ಅವರಿಗೆ ಟಿಕೆಟ್‌ ಕೊಡದ ಬಿಜೆಪಿ ಆ ಎರಡೂ ಸ್ಥಾನಗಳನ್ನೂ ಕಳೆದುಕೊಂಡಿತು. ಜಾರಕಿಹೊಳಿ ಹುಕ್ಕೇರಿ ಕತ್ತಿ ಜೊಲ್ಲೆ ಕುಟುಂಬ ರಾಜಕಾರಣ ಮತ್ತೆ ಮುಂದುವರಿಯಿತು. ಹುಕ್ಕೇರಿಯಿಂದ ಬಿಜೆಪಿ ಹುರಿಯಾಳು ನಿಖಿಲ್‌ ಕತ್ತಿ ಗೆಲ್ಲುವ ಮೂಲಕ ತಮ್ಮ ಕುಟುಂಬದ ಮೂರನೇ ತಲೆಮಾರು ವಿಧಾನಸೌಧ ಪ್ರವೇಶಿಸುವಂತೆ ಮಾಡಿದರು. ಬಿಜೆಪಿಯ ದೊಡ್ಡ ನಾಯಕ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ಸೇರುವ ಮೂಲಕ ಜಿಲ್ಲೆಯ ರಾಜಕೀಯ ಸ್ಥಿತ್ಯಂತರಕ್ಕೆ ಸಾಕ್ಷಿ ಆದರು.

ನಾಲ್ಕು ವರ್ಷಗಳ ಬಳಿಕ ಮೇಯರ್ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸಂಪೂರ್ಣ ತೆಕ್ಕೆಗೆ ತೆಗೆದುಕೊಂಡು ಬಿಜೆಪಿ ಹೊಸ ಇತಿಹಾಸ ಬರೆಯಿತು. ಗಡಿ ತಂಟೆ–ಭಾಷಾ ವಿವಾದಗಳಿಂದಾಗಿ ಸದಾ ಸುದ್ದಿಯಲ್ಲಿರುವ ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಿತು. ಮೇಯರ್‌ ಆಗಿ ಶೋಭಾ ಸೋಮನಾಚೆ ಅವಿರೋಧವಾಗಿ ಆಯ್ಕೆಯಾದರು. ನಾಲ್ಕು ವರ್ಷಗಳಿಂದ ವಿವಿಧ ಕಾರಣಗಳಿಂದ ಖಾಲಿ ಇದ್ದ ಮೇಯರ್‌ ಕುರ್ಚಿಗೆ ಈ ವರ್ಷ ಶುಕ್ರದೆಸೆ ಬಂತು.

ನಿರಾಸೆ ಮೂಡಿಸಿದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.4ರಿಂದ 15ರ ವರೆಗೆ 10 ದಿನಗಳ ಕಾಲ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಿತು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಅಧಿವೇಶನವಿದು. ಹೀಗಾಗಿ ಉತ್ತರದ ಸಮಸ್ಯೆಗಳಿಗೆ ಸ್ಪಂದನೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಯಿತು. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಕಾಟಾಚಾರಕ್ಕೆ ಎಂಬಂತೆ ಚರ್ಚೆ ನಡೆದಿದ್ದು ಬಿಟ್ಟರೆ ಯಾವುದಕ್ಕೂ ನಿರ್ದಿಷ್ಟ ಪರಿಹಾರ ಸಿಗಲಿಲ್ಲ. ಇನ್ನೂ ಸುವರ್ಣ ವಿಧಾನಸೌಧ ಬಳಿಯ ಎರಡೂ ವೇದಿಕೆಗಳಲ್ಲಿ ಪ್ರತಿಭಟನೆ ನಡೆಸಿದವರದ್ದೂ ಅದೇ ಹಾಡು–ಅದೇ ಪಾಡು. ವರ್ಷದಂತೆ ಸರಣಿ ಪ್ರತಿಭಟನೆ ನಡೆದವು. ಆದರೆ ಸಿಕ್ಕಿದ್ದು ಭರವಸೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT