ಪಕ್ಷದ ಅಭ್ಯರ್ಥಿಗಳಿಗಿಂತ ಎರಡು ಪಟ್ಟು ಹೆಚ್ಚು ಪಕ್ಷೇತರರು!

7
ಸ್ಥಳೀಯ ಸಂಸ್ಥೆಗಳ ಚುನಾವಣೆ:

ಪಕ್ಷದ ಅಭ್ಯರ್ಥಿಗಳಿಗಿಂತ ಎರಡು ಪಟ್ಟು ಹೆಚ್ಚು ಪಕ್ಷೇತರರು!

Published:
Updated:

ಬೆಳಗಾವಿ: ಜಿಲ್ಲೆಯ 14 ಸ್ಥಳೀಯ ಸಂಸ್ಥೆಗಳ 343 ಸ್ಥಾನಗಳಿಗೆ ಇದೇ ತಿಂಗಳ 31ರಂದು ನಡೆಯಲಿರುವ ಚುನಾವಣೆಗೆ 1,531 ಅಭ್ಯರ್ಥಿಗಳು 1,597 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ರಾಜಕೀಯ ಪಕ್ಷಕ್ಕಿಂತ ಎರಡು ಪಟ್ಟು ಪಕ್ಷೇತರರಾಗಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 880 ಪಕ್ಷೇತರರಾಗಿ ಕಣಕ್ಕಿಳಿದಿದ್ದರೆ, ಇನ್ನುಳಿದ ಅಭ್ಯರ್ಥಿಗಳು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಸಿಪಿಎಂ, ಬಿಎಸ್ಪಿಯಿಂದ ಸ್ಪರ್ಧಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿದ್ದರೂ ಬಿಜೆಪಿಯಿಂದಲೇ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ವಿಶೇಷವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಸ್ವಕ್ಷೇತ್ರವಾದ ಗೋಕಾಕ ನಗರಸಭೆಯಲ್ಲಿ ಯಾರೊಬ್ಬರೂ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿಲ್ಲ. ಬಿಜೆಪಿಯಿಂದ 11 ಜನ ಕಣಕ್ಕಿಳಿದಿದ್ದು, ಇನ್ನುಳಿದ 104 ಜನರೆಲ್ಲರೂ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

ಇದೇ ರೀತಿ ಸಂಸದ ಪ್ರಕಾಶ ಹುಕ್ಕೇರಿ ಪ್ರಾಬಲ್ಯ ಇರುವ ಚಿಕ್ಕೋಡಿ ಪುರಸಭೆ, ಸದಲಗಾ ಪುರಸಭೆ ಹಾಗೂ ನಿಪ್ಪಾಣಿ ನಗರಸಭೆಯಲ್ಲೂ ಕಾಂಗ್ರೆಸ್ ಜೊತೆ ಯಾರೂ ಗುರುತಿಸಿಕೊಂಡಿಲ್ಲ. ಖಾನಾಪುರ ಪಟ್ಟಣ ಪಂಚಾಯ್ತಿಯಲ್ಲೂ ಇದೇ ಸ್ಥಿತಿಯಿದೆ.

ಬಿಜೆಪಿ ಸ್ಥಿತಿ:  ರಾಯಬಾಗ ಪಟ್ಟಣ ಪಂಚಾಯ್ತಿ ಹಾಗೂ ಚಿಕ್ಕೋಡಿ ಪುರಸಭೆಗೆ ಬಿಜೆಪಿಯಿಂದ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಖಾನಾಪುರ ಪಟ್ಟಣ ಪಂಚಾಯ್ತಿಯಲ್ಲಿ ಕೇವಲ ಮೂರು ಜನರು ಮಾತ್ರದ ಪಕ್ಷದ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನುಳಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಚಿಕ್ಕೋಡಿ ಪುರಸಭೆಯಲ್ಲಿ 23 ಸ್ಥಾನಗಳಿದ್ದು, 166 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ವಿಶೇಷವೆಂದರೆ, ಇವರೆಲ್ಲರೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿಲ್ಲ.

ಪಕ್ಷವಾರು ಸಲ್ಲಿಕೆ:

ಬಿಜೆಪಿ ವತಿಯಿಂದ ಅತಿ ಹೆಚ್ಚು 368 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ 259, ಜೆಡಿಎಸ್‌ನಿಂದ 83, ಸಿಪಿಎಂ–2 ಹಾಗೂ ಬಿಎಸ್ಪಿಯಿಂದ 5 ಜನರು ನಾಮಪತ್ರ ಸಲ್ಲಿಸಿದ್ದಾರೆ. ಇನ್ನುಳಿದಂತೆ 880 ಜನರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಗರಿಷ್ಠ– ಕನಿಷ್ಠ:

ಚಿಕ್ಕೋಡಿಯ ಪುರಸಭೆಯಲ್ಲಿಯೇ ಅತಿ ಹೆಚ್ಚು 166 ಜನರು ನಾಮಪತ್ರ ಸಲ್ಲಿಸಿದ್ದಾರೆ. ಸವದತ್ತಿಯ ಪುರಸಭೆಗೆ ಅತಿ ಕಡಿಮೆ 61 ಜನರು ನಾಮಪತ್ರ ಸಲ್ಲಿಸಿದ್ದಾರೆ.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !