ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಪ್ಪಾಣಿ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಚೇತರಿಕೆ

ಆರೋಗ್ಯ ವಿಚಾರಿಸಿದಾಗ ರೈತರ ಮಾಹಿತಿ ವಿಚಾರಿಸಿದ ಶ್ರೀ
Last Updated 8 ಫೆಬ್ರುವರಿ 2022, 13:50 IST
ಅಕ್ಷರ ಗಾತ್ರ

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ತಾಲ್ಲೂಕಿನ ಬಸವನಾಳಗಡ್ಡೆಯ ಭಕ್ತರ ತೋಟದ ಮನೆಯಲ್ಲಿ ಈಚೆಗೆ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿಯಲ್ಲಿರುವ ಸಿದ್ಧಗಿರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಚೇತರಿಸಿಕೊಳ್ಳುತ್ತಿರುವ ಅವರು ಅಲ್ಲಿ ಭಾನುವಾರ ಇಂಗ್ಲಿಷ್ ಭಾಷೆಯಲ್ಲಿ ಒಂದು ತಾಸು ಪ್ರವಚನವನ್ನೂ ನೀಡಿದ್ದಾರೆ.

ಮಠದಲ್ಲಿ ಮಂಗಳವಾರ ವಿಶ್ರಾಂತಿಯಲ್ಲಿದ್ದ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀಗಳು, ‘ನನ್ನ ಪ್ರಕೃತಿ ಹಾಗಿರಲಿ, ರಾಜ್ಯದಲ್ಲಿ ರೈತರು ಹೇಗಿದ್ದಾರೆ, ಬೆಳೆ ಹೇಗಿದೆ’ ಎಂದು ಕೇಳಿ ಮಾಹಿತಿ ಪಡೆದುಕೊಂಡರು.

‘ರೈತರು ಸದೃಢವಾದಲ್ಲಿ ದೇಶ ಆರ್ಥಿಕವಾಗಿ ಸದೃಢವಾಗುತ್ತದೆ. ಅವರು ಸ್ವಾವಲಂಬಿಗಳಾಗಬೇಕು. ಒಂದೇ ಬೆಳೆಯ ಬದಲಿಗೆ ಬಹು ಬೆಳೆಗಳನ್ನು ಬೆಳೆಯಬೇಕು’ ಎಂದು ಸಲಹೆ ನೀಡಿದರು.

‘ಹಿಂದೆಯೂ ರೈತರಿಗೆ ಕಷ್ಟಗಳು ಇರುತ್ತಿದ್ದವು. ಆದರೆ ಅವರು ಹೆದರದೆ ಮುನ್ನಗ್ಗುತ್ತಿದ್ದರು. ಸಂಕಷ್ಟ ಯಾರಿಗಿಲ್ಲ? ಸಂಕಷ್ಟ ಬಂದಾಗ ಅದನ್ನು ಬದಿಗಿಟ್ಟು ಮುಂದುವರಿಯಬೇಕು. ಹಿಂದೆ ಯಾವುದೇ ನೀರಾವರಿ ಯೋಜನೆಗಳು ಇರುತ್ತಿರಲಿಲ್ಲ. ಹಿತ್ತಲಿನಲ್ಲೂ ಬೆಳೆಗಳನ್ನು ಬೆಳೆಯುತ್ತಿದ್ದರು. ಅಲ್ಲೇ ಮಾವು, ತೆಂಗು, ಬೇವು, ಪಪ್ಪಾಯಿ, ನುಗ್ಗೆಕಾಯಿ ಮೊದಲಾದವುಗಳನ್ನು ಬೆಳೆದು ಅವುಗಳಿಂದ ಫಲ ಪಡೆಯುತ್ತಿದ್ದರು. ಆದರೆ, ಈಗಿನ ಆಧುನಿಕ ಯುಗದಲ್ಲಿ ಹಲವು ನೀರಾವರಿ ಯೋಜನೆಗಳಿದ್ದರೂ ರೈತರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಾವಯವ ಕೃಷಿ ಪದ್ಧತಿಗೆ ಆದ್ಯತೆ ಕೊಡಬೇಕು. ವಿದೇಶಿ ತಳಿಯ ಆಕಳುಗಳಿಗೆ ಮಾರು ಹೋಗದೆ ದೇಶಿ ತಳಿಯ ಆಕಳುಗಳನ್ನು ಸಾಕಬೇಕು. ರಾಸಾಯನಿಕ ಬಳಕೆ ನಿಲ್ಲಿಸಬೇಕು. ಜೀವಾಮೃತ ಗೊಬ್ಬರ ತಯಾರಿಸಿ ಕೃಷಿ ಮಾಡಬೇಕು. ಎಲ್ಲರನ್ನೂ ರೋಗಮುಕ್ತರಾಗಿಸಬೇಕು’ ಎಂದು ಸಲಹೆ ನೀಡಿದರು.

‘ರೈತರು ಹಳೆಯ ಕೃಷಿ ಪದ್ಧತಿಗಳನ್ನು ಅವಲಂಬಿಸಬೇಕು. ಮಣ್ಣು ಮತ್ತು ನೀರಿನ ಕೊರತೆ ಇರುವ ಇಸ್ರೇಲ್‌ ದೇಶದ ರೈತರು ಸಮೃದ್ಧಿ ಪಡೆದಿದ್ದಾರೆ. ಅವರ ಪದ್ಧತಿ ಅಧ್ಯಯನ ಮಾಡಿ ಅನುಸರಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಸಿದ್ಧೇಶ್ವರ ಸ್ವಾಮೀಜಿ 26 ದಿನಗಳಿಂದ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಗ ಗುಣಮುಖರಾಗುತ್ತಿದ್ದು ನಡೆದಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ನಡೆದಾಡಲಿದ್ದಾರೆ; ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ. ಭಕ್ತರು ಆತಂಕಕ್ಕೆ ಒಳಗಾಗುವ ಅಥವಾ ಚಿಂತಿಸುವ ಅಗತ್ಯವಿಲ್ಲ’ ಎಂದು ಕೋರಿದರು.

‘ಶ್ರೀಗಳು ಭಾನುವಾರ ಒಂದು ತಾಸು ಪ್ರವಚನ ನೀಡಿರುವುದು ಅವರ ಲವಲವಿಕೆಗೆ ಸಾಕ್ಷಿಯಾಗಿದೆ. ಕೆಲವೇ ವಾರಗಳಲ್ಲಿ ಅವರು ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT