ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಜಿಲ್ಲಾ ವಿಭಜನೆಗೆ ಮೊದಲ ಹೆಜ್ಜೆ

ಕೇಂದ್ರ ಸರ್ಕಾರದ ನೋಂದಣಿ ಕಾಯ್ದೆ–1908 ಪ್ರಕಾರ ಅಧಿಸೂಚನೆ ಹೊರಡಿಸಿದ ಸರ್ಕಾರ
Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಾದೇಶಿಕವಾಗಿ ದೊಡ್ಡ ವ್ಯಾಪ್ತಿ ಹೊಂದಿರುವ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳನ್ನು ವಿಭಜಿಸುವ ಸಂಬಂಧ ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ.

ಕೇಂದ್ರ ಸರ್ಕಾರದ ನೋಂದಣಿ ಕಾಯ್ದೆ–1908ರ (ಸೆಕ್ಷನ್‌–5, ಸಬ್‌ಸೆಕ್ಷನ್‌–1) ಪ್ರಕಾರ ಈ ಎರಡೂ ಜಿಲ್ಲೆಗಳ ಗಡಿಗಳನ್ನು ಬದಲಾವಣೆ ಮಾಡುವುದಾಗಿ ಫೆಬ್ರುವರಿ 8ರಂದು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರತಿ ಜಿಲ್ಲೆಯ ಹೋರಾಟಗಾರರ ಕೈಸೇರಿದೆ.

ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಚಿಕ್ಕೋಡಿ ಕೇಂದ್ರಿತವಾಗಿ ಹೊಸ ಜಿಲ್ಲೆ ರಚಿಸಬೇಕು ಎಂಬ ಕೂಗು 50 ವರ್ಷಗಳಿಂದ ಇದೆ. 1975ರಿಂದಲೇ ಮೊದಲ ಹಂತದ ಹೋರಾಟ ಆರಂಭವಾಗಿತ್ತು. 20 ವರ್ಷಗಳ ಬಳಿಕ ಅಂದರೆ 1997ರ ಆಗಸ್ಟ್‌ 22ರಂದು ಅಂದಿನ ಜೆ.ಎಚ್‌.ಪಟೇಲ್‌ ಸರ್ಕಾರ ಜಿಲ್ಲೆಯ ವಿಭಜನೆಗೆ ಸದನದಲ್ಲೇ ಒಪ್ಪಿಗೆ ನೀಡಿತ್ತು.

‘ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ಮಾಡಿ ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಕೇಂದ್ರವಾಗಿ ಮೂರು ಹೊಸ ಜಿಲ್ಲೆ ಮಾಡಲು ಸರ್ಕಾರ ನಿರ್ಧಾರ ಪ್ರಕಟಿಸಿತು. ಆಗ 10 ತಾಲ್ಲೂಕು ಮಾತ್ರ ಇದ್ದವು (ಈಗ 15). ರಾಮದುರ್ಗ, ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕಿನ ಜನ ಆಗಿನ ಗೋಕಾಕ ಜಿಲ್ಲಾ ವ್ಯಾಪ್ತಿಗೆ ಸೇರಲು ವಿರೋಧ ವ್ಯಕ್ತಪಡಿಸಿದರು. ಜತೆಗೆ, ಬೆಳಗಾವಿ, ಖಾನಾಪುರ, ಹುಕ್ಕೇರಿ ತಾಲ್ಲೂಕು ಸೇರಿ ಆರೂ ತಾಲ್ಲೂಕಿನ ಹೋರಾಟಗಾರರು ಸೇರಿ ‘ಬೆಳಗಾವಿ ಜಿಲ್ಲಾ ಹೋರಾಟ ಸಮಿತಿ’ ನಿರ್ಮಿಸಿಕೊಂಡರು’ ಎಂದು ಹೋರಾಟ ಸಮಿತಿಯಲ್ಲಿರುವ ಅಶೋಕ ಚಂದರಗಿ ತಿಳಿಸಿದರು.

‘1997ರ ಆಗಸ್ಟ್‌ 25ರಿಂದ ಬೃಹತ್‌ ಹೋರಾಟ ಶುರು ಮಾಡಿದ್ದರು. ಆಗ ಮುಖ್ಯಮಂತ್ರಿ ಆಗಿದ್ದ ಜೆ.ಎಚ್‌.ಪಟೇಲ್‌ ಅವರಿಗೆ ಆಗಸ್ಟ್‌ 24ರಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮತ್ತು ಜಿಲ್ಲಾ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. 25 ದಿನ ನಿರಂತರ ಹೋರಾಟ ನಡೆಯಿತು. ಆಗಿನ ನಾಯಕರಾಗಿದ್ದ ಪಾಟೀಲ ಪುಟ್ಟಪ್ಪ ಹಾಗೂ ಎಸ್‌.ನಿಜಲಿಂಗಪ್ಪ ಅವರ ನಿರ್ದೇಶನದಂತೆ ಜೆ.ಎಸ್‌.ಪಟೇಲ್‌ ಅವರು ಸೆಪ್ಟೆಂಬರ್ 29ರಂದು ಈ ಆದೇಶ ತಡೆಹಿಡಿದರು. ಅಲ್ಲಿಂದ ಇಲ್ಲಿಯವರೆಗೆ ಜಿಲ್ಲೆಯ ವಿಭಜನೆ ಶುಲ್ಕು ಬಿದ್ದಿದೆ’ ಎಂದು ಅವರು ತಿಳಿಸಿದರು.

‘ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಾಗ ಮಾಡುತ್ತೇವೆ. ಅದರಲ್ಲಿ ಗೋಕಾಕ ಕೂಡ ಒಂದಾಗಿರುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪದೇಪದೇ ಹೇಳುತ್ತಲೇ ಇದ್ದಾರೆ.

ಇದಕ್ಕೆ ಪೂರಕವಾಗಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ‘ಬೈಲಹೊಂಗಲ ಕೇಂದ್ರವಾಗಿಯೇ ಮೂರನೇ ಜಿಲ್ಲೆ ರಚನೆ ಆಗುತ್ತದೆ’ ಎಂದು ಹೇಳುತ್ತಿದ್ದಾರೆ.

****

ಜಿಲ್ಲೆ ವಿಭಜನೆ ಸಂಬಂಧ ಸರ್ಕಾರದ ಹಂತದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಅವರು ನಮ್ಮನ್ನೆಲ್ಲ ವಿಶ್ವಾಕ್ಕೆ ತೆಗೆದುಕೊಂಡೇ ಹೆಜ್ಜೆ ಇಡುತ್ತಾರೆ

-ಲಕ್ಷ್ಮಿ ಹೆಬ್ಬಾಳಕರ, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

****

ನೋಟಿಫಿಕೇಷನ್‌ ಗಮನಿಸಿದ್ದೇನೆ. ಇದು ಜಿಲ್ಲೆಯ ವಿಭಜನೆಗೆ ಸಂಬಂಧಿಸಿದ್ದು ಎಂದು ಗೊತ್ತಾಗಿಲ್ಲ. ಗುರುವಾರ ಬೆಂಗಳೂರಿನಲ್ಲಿ ಸಿ.ಎಂ. ಅವರನ್ನು ಭೇಟಿ ಮಾಡಿ ಪ್ರತಿಕ್ರಿಯಿಸುವೆ

ಮಹಾಂತೇಶ ಕೌಜಲಗಿ, ಶಾಸಕ, ಬೈಲಹೊಂಗಲ

****

ಜಿಲ್ಲೆ ವಿಭಜನೆ ಮಾಡುವ ಮುನ್ನ ಸರ್ಕಾರ ಕರ್ನಾಟಕ– ಮಹಾರಾಷ್ಟ್ರ ಗಡಿ ಸಮಸ್ಯೆಗೆ ಕೊನೆ ಹಾಡಬೇಕು. ಇಲ್ಲದಿದ್ದರೆ ಅಂಕಷ್ಟ ಎದುರಾಗಬಹುದು

-ಅಶೋಕ ಚಂದರಗಿ, ಅಧ್ಯಕ್ಷ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT