ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣ ಸವದಿ ಕಾಂಗ್ರೆಸ್‌ ಬಿಡುವುದಿಲ್ಲ: ಸತೀಶ ಜಾರಕಿಹೊಳಿ

Published 5 ಫೆಬ್ರುವರಿ 2024, 9:55 IST
Last Updated 5 ಫೆಬ್ರುವರಿ 2024, 9:55 IST
ಅಕ್ಷರ ಗಾತ್ರ

ಬೆಳಗಾವಿ: ‘ಶಾಸಕರಾದ ಲಕ್ಷ್ಮಣ ಸವದಿ ನಮ್ಮ ಪಕ್ಷದ ಪರವಾಗಿದ್ದಾರೆ. ಅವರು ಕಾಂಗ್ರೆಸ್‌ ಬಿಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಸವದಿ ಬಿಜೆಪಿ ಸೇರುತ್ತಾರೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ಇಲ್ಲಿ ಸೋಮವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಜಗದೀಶ ಶೆಟ್ಟರ್ ಅವರ ಕೇಸ್‌ ಬೇರೆ. ಇವರ ಕೇಸ್‌ ಬೇರೆ. ಒಂದು ಕೇಸ್‌ ಅನ್ನು ಇನ್ನೊಂದಕ್ಕೆ ಹೋಲಿಸಲಾಗದು. ಎಲ್ಲ ಕೇಸ್‌ ಬೇರೆ ಬೇರೆ ಇರುತ್ತವೆ. ಒಬ್ಬ ಡಾಕ್ಟರ್ ಬಳಿ ಒಬ್ಬೊಬ್ಬರದ್ದು ಬೇರೆ ಬೇರೆ ಕೇಸ್ ಪೇಪರ್ ಇರುತ್ತವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನದ ಆಫರ್ ನೀಡಲಾಗುವುದೇ ಎಂಬ ಪ್ರಶ್ನೆಗೆ, ‘ಇನ್ನೂ ಸಮಯವಿದೆ. ಒಳ್ಳೆಯವರಿಗೆ ಅವಕಾಶವಿದೆ. ಅವರಿಗೂ ಸಾಮರ್ಥ್ಯವಿದೆ. ಉತ್ತಮ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಸಿಗುವ ಅವಕಾಶಗಳು ಮುಂದಿನ ದಿನಗಳಲ್ಲಿವೆ. ಇಲ್ಲ ಎಂದು ಹೇಳಲು ಆಗುವುದಿಲ್ಲ’ ಎಂದರು.

ರಾಜ್ಯದಲ್ಲಿ ಧ್ವಜಗಳ ವಿಚಾರವಾಗಿ ವಿವಾದ ಸೃಷ್ಟಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ, ‘ರಾಜ್ಯದಲ್ಲಿ ಧ್ವಜಗಳ ಹಾವಳಿ ಬಂದ್ ಆಗಬೇಕು. ಅಭಿವೃದ್ಧಿಯಾಗಬೇಕು, ಸಮಾನತೆ ಬರಬೇಕು’ ಎಂದು ತಿಳಿಸಿದರು.

‘ಬೆಳಗಾವಿ ಲೋಕಸಭೆ ಕ್ಷೇತ್ರದ ಟಿಕೆಟ್‌ಗೆ ಇಬ್ಬರ ಹೆಸರು ಕೊಟ್ಟಿದ್ದೇವೆ. ಆದರೆ, ಒಬ್ಬರ ಹೆಸರನ್ನು ಪಕ್ಷದ ಹೈಕಮಾಂಡ್ ಅಂತಿಮಗೊಳಿಸಬೇಕಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಜತೆಗೆ, ಇನ್ನೊಂದು ಸುತ್ತಿನ ಚರ್ಚೆ ಆಗಬೇಕಿದೆ’ ಎಂದರು.

‘ಚಿಕ್ಕೋಡಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ. ಪ್ರತಿ ಬಾರಿ ಒದಿಸಿಕೊಳ್ಳಲು ನಾನೇನೂ ಫುಟ್‌ಬಾಲ್‌ ಅಲ್ಲ’ ಎಂಬ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿಕೆಗೆ, ‘ಪ್ರಕಾಶ್ ಹುಕ್ಕೇರಿ ಸ್ಪರ್ಧಿಸುವುದಿಲ್ಲ ಎಂದಾಗ ಸ್ಪರ್ಧಿಸುತ್ತಾರೆ. ಸ್ಪರ್ಧಿಸುತ್ತೇನೆ ಎಂದಾಗ ಸ್ಪರ್ಧಿಸಲ್ಲ. ಆ ಡಿ–ಕೋಡ್ ನಮಗೆ ಗೊತ್ತಿದೆ. ಅವರು ಏನು ಹೇಳುತ್ತಾರೆಯೋ, ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT