ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿಯಲ್ಲಿ ಅಪಘಾತ: 9 ಮಂದಿ ಸಾವು, ಮೂವರಿಗೆ ಗಾಯ

ಎರಡೇ ದಿನದಲ್ಲಿ ಮೂರು ಅಪಘಾತ; 16 ಮಂದಿ ಸಾವು
Published 23 ಫೆಬ್ರುವರಿ 2024, 15:46 IST
Last Updated 23 ಫೆಬ್ರುವರಿ 2024, 15:46 IST
ಅಕ್ಷರ ಗಾತ್ರ

ಮುಗಳಖೋಡ (ಬೆಳಗಾವಿ ಜಿಲ್ಲೆ): ಜಿಲ್ಲೆಯ ಮುಗಳಖೋಡ ಹಾಗೂ ಯರಗಟ್ಟಿ ಬಳಿ ಶುಕ್ರವಾರ ಸಂಭವಿಸಿದ ಎರಡು ಕಾರ್‌ ಅಪಘಾತಗಳಲ್ಲಿ ಒಂಬತ್ತು ಜನ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಮುಗಳಖೋಡ ಪಟ್ಟಣ ಹೊರವಲಯದ ಜತ್ತ– ಜಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಒಂದು ಕಾರ್‌, ಎರಡು ಬೈಕುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಗುರ್ಲಾಪುರ ಗ್ರಾಮದ ಲಕ್ಷ್ಮಿ ರಾಮಪ್ಪ ಮರಾಠೆ (19) ಮಲ್ಲಿಕಾರ್ಜುನ ರಾಮಪ್ಪ ಮರಾಠೆ (16) ಆಕಾಶ ರಾಮಪ್ಪ ಮರಾಠೆ (14), ವಾಹನ ಚಾಲಕ ಏಕನಾಥ ಭೀಮಪ್ಪ ಪಡತರೆ (22), ಮುಗಳಖೋಡದ ಬೈಕ್ ಸವಾರ ನಾಗಪ್ಪ ಲಕ್ಷ್ಮಣ ಯಡವಣ್ಣವರ (48), ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಶಿಕ್ಷಕ ಹಣಮಂತ ಮಾಳಪ್ಪ ಮಳ್ಯಾಗೋಳ (42) ಮೃತಪಟ್ಟವರು.

ಗೋಕಾಕದ ಪಟ್ಟಣದ ನಿವಾಸಿ ಬೈಕ್ ಸವಾರ ಬಾಲಾನಂದ ಪರಪ್ಪ ಮಾಳಗೆ (37) ಗಾಯಗೊಂಡಿದ್ದು ಹಾರೂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್‌ ಮೂಡಲಗಿಯಿಂದ ಹಾರೂಗೇರಿಗೆ ಹೊರಟಿತ್ತು. ಎದುರಿನಿಂದ ಎರಡು ಬೈಕುಗಳು ಬರುತ್ತಿದ್ದವು. ಮೂರೂ ವಾಹನಗಳು ಏಕಕಾಲಕ್ಕೆ ಡಿಕ್ಕಿ ಹೊಡೆದಿವೆ. ಅಪಘಾತ ತಪ್ಪಿಸಲು ಕಾರ್‌ ರಸ್ತೆ ಪಕ್ಕಕ್ಕೆ ಸರಿದು ಮರಕ್ಕೆ ಗುದ್ದಿ ಪಲ್ಟಿಯಾಯಿತು. ಅಪಘಾತದ ರಭಸ ಎಷ್ಟಿತ್ತೆಂದರೆ ಕಾರ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರಲ್ಲಿದ್ದ ನಾಲ್ವರೂ ಹಾಗೂ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರು.

ಬೆಳಗಾವಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಹಾರೋಗೇರಿ ಸಿಪಿಐ ರವಿಚಂದ್ರನ್ ಬಡಪಕೀರಪ್ಪನವರ, ಅಥಣಿ ಸಿಪಿಐ ರವೀಂದ್ರ ನಾಯಕವಾಡಿ, ಹಾರೂಗೇರಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಎಎಸ್ಐ ಎಸ್.ಎಲ್.ಬಾಡಕರ, ಅಶೋಕ ಶಾಂಡಗೆ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವೇ ಕ್ಷಣಗಳಲ್ಲಿ ಸಹಾಯಕ್ಕೆ ಧಾವಿಸಿದ ಜನ ಕಾರಿನ ಗಾಜು, ಬಾಗಿಲು ಒಡೆದು ಜನರನ್ನು ಹೊರತೆಗೆದರು. ಆದರೆ ಅಷ್ಟರೊಳಗೆ ಎಲ್ಲರೂ ಜೀವ ಬಿಟ್ಟಿದ್ದರು. ಬೈಕ್‌ ಸವಾರರ ಶವಗಳು ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದವು. ಆರೂ ಶವಗಳನ್ನು ರಸ್ತೆ ಪಕ್ಕದಲ್ಲಿ ಇರಿಸಿದ ದೃಶ್ಯ ಮನ ಕಲಕುವಂತಿತ್ತು. ಸ್ಥಳಕ್ಕೆ ಬಂದ ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.

ಎರಡೇ ದಿನದಲ್ಲಿ 16 ಸಾವು
ಖಾನಾಪುರ ತಾಲ್ಲೂಕಿನ ಮಂಗೇನಕೊಪ್ಪ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾರೂಗೇರಿಯ ನಿವಾಸಿ ಸುಫಿಯಾ ಜಮಾದಾರ ಶುಕ್ರವಾರ ಬೆಳಗಾವಿಯ ಆಸ್ಪತ್ರೆಯಲ್ಲಿ ಮೃತಪಟ್ಟರು. ಇದರೊಂದಿಗೆ ಮೃತರ ಸಂಖ್ಯೆ ಏಳಕ್ಕೆ ಏರಿದೆ. ಗುರುವಾರ ಹಾಗೂ ಶುಕ್ರವಾರ ನಡೆದ ಮೂರು ಕಾರುಗಳ ಅಪಘಾತದಲ್ಲಿ ಒಟ್ಟು 16 ಮಂದಿ ಸಾವನ್ನಪ್ಪಿದ್ದು, ಆರು ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ.

ಕಾರುಗಳ ಡಿಕ್ಕಿ: ಮೂವರ ಸಾವು, ಇಬ್ಬರಿಗೆ ಗಾಯ

ಯರಗಟ್ಟಿ: ಸಮೀಪದ ಕುರಬಗಟ್ಟಿ ಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಧಾರವಾಡ ಕಡೆಯಿಂದ ಗೋಕಾಕ ಮಾರ್ಗವಾಗಿ ಹೊರಟಿದ್ದ ಕಾರಿಗೆ ಗೋಕಾಕ ಕಡೆಯಿಂದ ಎದುರಿಗೆ ಬರುತ್ತಿರುವ ಕಾರು ಡಿಕ್ಕಿಯಾಗಿದೆ.

ಧಾರವಾಡದ ಅನ್ನಪೂರ್ಣಾ ಬಾಳೇಶ್ಶಿರೋಳ (51), ಚಾಲಕ, ಪಟಗುಂದಿ ಗ್ರಾಮದ ಗೋಪಾಲ ಸತ್ಯಪ್ಪ ನಾಯ್ಕರ್ (45) ಹಾಗೂ ಇ‌ವರ ಮಗ ಕುಮಾರ ಮುತ್ತು ನಾಯ್ಕರ್ (8) ಮೃತರು.

ಸುಮಿತ್ರಾ ಶಂಕರ ಸಂಗನಾಳ (65), ರವಿ ಹಣಮಂತಪ್ಪ ಸಾರಂಗಿ (45) ಗಾಯಗೊಂಡಿದ್ದು, ಗೋಕಾಕದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT