ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ನೇಹಾ ಕೊಲೆ ಖಂಡಿಸಿ ಪ್ರತಿಭಟನೆ, ಲವ್ ಜಿಹಾದ್‌ ನಿಷೇಧ ಕಾನೂನಿಗೆ ಆಗ್ರಹ

Published 22 ಏಪ್ರಿಲ್ 2024, 10:58 IST
Last Updated 22 ಏಪ್ರಿಲ್ 2024, 10:58 IST
ಅಕ್ಷರ ಗಾತ್ರ

ಬೆಳಗಾವಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಇಲ್ಲಿನ ಜಾಗ್ರತ ಮಹಿಳಾ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಯಿತು. ನೇತೃತ್ವ ವಹಿಸಿದ್ದ ಮಹಿಳಾ ಹೋರಾಟಗಾರರು, ಮಠಾಧೀಶರು ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು, ಲವ್‌ ಜಿಹಾದ್‌ ಪ್ರತಿಬಂಧಕ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಇಲ್ಲಿನ ಮಾರುತಿ ಗಲ್ಲಿಯ ಮಾರುತಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ರಾಮದೇವ ಗಲ್ಲಿ, ಶನಿವಾರ ಕೂಟ್‌ನಿಂದ ಕಾಕತಿವೇಸ್‌ನಲ್ಲಿ ಸಾಗಿದ ಪ್ರತಿಭಟನಾಕಾರರು, ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರ‍ಪಳಿ ನಿರ್ಮಿಸಿದರು.

ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಬೆಳಗಾವಿಯಲ್ಲಿ ಸೋಮವಾರ ಜಾಗ್ರತ ಮಹಿಳಾ ವೇದಿಕೆಯಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು

ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಬೆಳಗಾವಿಯಲ್ಲಿ ಸೋಮವಾರ ಜಾಗ್ರತ ಮಹಿಳಾ ವೇದಿಕೆಯಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು

ಅಪಾರ ಸಂಖ್ಯೆಯಲ್ಲಿ ಸೇರಿದ ಮಹಿಳೆಯರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಮಾರ್ಗದುದ್ದಕ್ಕೂ ಆಕ್ರೋಶ ಹೊರಹಾಕಿದರು. ಲವ್ ಜಿಹಾದ್‌ಗೆ ಧಿಕ್ಕಾರ, ಹಿಂದೂ ವಿರೋಧಿ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಕೊಲೆಗಡುಗರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ನೇಹಾಗೆ ನ್ಯಾಯ ಕೊಡಿ ಇಲ್ಲವೇ ಕುರ್ಚಿ ಬಿಡಿ, ಜೈ ಶ್ರೀರಾಮ್‌ ಎಂದು ಘೋಷಣೆ ಮೊಳಗಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾಲೇಜು ವಿದ್ಯಾರ್ಥಿನಿಯರು ಕೂಡ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡಿ ಎಂದು ಒತ್ತಾಯಿಸಿದರು. ಕರ್ನಾಟಕವೂ ‘ಕೇರಳ’ ರೀತಿ ಆಗುವುದಕ್ಕಿಂತ ಮುನ್ನ ಹಿಂದೂಗಳೇ ಎಚ್ಚೆತ್ತುಕೊಳ್ಳಿ ಎಂದು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಹೆಣ್ಣುಮಕ್ಕಳು ಉರಿಬಿಸಿಲನ್ನೂ ಲೆಕ್ಕಿಸದೇ ಮಾರುಕಟ್ಟೆಯಲ್ಲಿ ಕಿಲೋಮೀಟರ್‌ ದೂರ ಕ್ರಮಿಸಿದರು. ಕೇಸರಿ ರುಮಾಲುಗಳನ್ನು ಕೊರಳಿಗೆ ಹಾಕಿಕೊಂಡು ಸಾಗಿದರು.

ಸಂಸದೆ ಮಂಗಲಾ ಅಂಗಡಿ, ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ ಹಾಗೂ ಬಿಜೆಪಿ ಮಹಿಳಾ ಘಟಕದ ನಾಯಕಿಯರು ಕೂಡ ಬೆಂಬಲ ಸೂಚಿಸಿದರು.

‘ಪ್ರೀತಿಸುವವರು ತಾಜ್‌ಮಹಲ್‌ ಕಟ್ಟಿಸುತ್ತಾರೆ; ಕೊಲ್ಲುವುದಿಲ್ಲ’

ಚನ್ನಮ್ಮ ವೃತ್ತದಲ್ಲಿ ಮಾತನಾಡಿದ ಸೇವಾ ಭಾರತಿ ಮುಖ್ಯಸ್ಥೆ ಶಿಲ್ಪಾ ವೇರ್ಣೇಕರ, ‘ಆರೋಪಿ ನಿಜವಾಗಿಯೂ ಪ್ರೀತಿ ಮಾಡುತ್ತಿದ್ದ ಎಂದಾದರೆ ತಾಜ್‌ಮಹಲ್‌ ಕಟ್ಟಿಸುತ್ತಿದ್ದ. ಅವನು ಲವ್ ಜಿಹಾದ್‌ ನಡೆಸಿದ ಕಾರಣಕ್ಕೇ ಕೊಲೆ ಮಾಡಿದ್ದಾನೆ. ಇದು ಗೊತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಪರಮೇಶ್ವರ್‌ ಅವರು ತುಂಬಾ ಹಗುರವಾಗಿ ಮಾತನಾಡಿದ್ದಾರೆ. ನಮ್ಮ ಮನೆ ಮಗಳ ಹತ್ಯೆಯಾದರೆ ಕಾಂಗ್ರೆಸ್ಸಿಗರಿಗೆ ಉಡಾಫೆ ವಿಷಯವೇ’ ಎಂದರು.

‘ಮುನವಳ್ಳಿ ಗ್ರಾಮದ ಮಹಿಳೆಯೊಬ್ಬರನ್ನು ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ, ಬೆಳಗಾವಿ ಕರೆತಂದು ಅತ್ಯಾಚಾರ ಎಸಗಲಾಗಿದೆ. ಮುಸ್ಲಿಂ ಆಗಿ ಮತಾಂತರ ಆಗಲು ಒತ್ತಾಯಿಸಿ ಹಿಂಸೆ ನೀಡಲಾಗಿದೆ. ಇಷ್ಟೆಲ್ಲಾ ಆದರೂ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರ ಮತ ಓಲೈಕೆಯಲ್ಲಿ ತೊಡಗಿದೆ’ ಎಂದು ಆರೋಪಿಸಿದರು.

‘ಹಿಂದೂ ಹೆಣ್ಣುಮಕ್ಕಳು ಲಕ್ಷ್ಮಿಯೂ ಆಗಬೇಕು, ದುರ್ಗೆಯೂ ಆಗಬೇಕು. ನೇಹಾಗೆ ಚುಚ್ಚಿ ಕೊಲೆ ಮಾಡಿದ ಗತಿಯನ್ನೇ ದುಷ್ಟರಿಗೆ ತರಬೇಕು’ ಎಂದರು.

ಡಾ.ಹರ್ಪಿತ್‌ ಕೌರ್‌ ಮಾತನಾಡಿ, ‘ನೀವು ನೇಹಾ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೀರಿ? ಅಥವಾ ನೇಹಾಳ ಪಾಲಕರ ಸ್ಥಾನದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೀರಿ? ಈ ಎರಡು ಪ್ರಶ್ನೆಗಳನ್ನು ಹಿಂದೂ ಸಮಾಜ ಕೇಳಿಕೊಂಡು ಜಾಗೃತವಾಗಬೇಕು’ ಎಂದರು.

ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತಕರ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆಯೇ ಹಿಂದೂಗಳ ಮೇಲೆ ಹಲ್ಲೆ, ಕೊಲೆ, ಅತ್ಯಾಚಾರಗಳು ಹೆಚ್ಚಿವೆ. ಶಾಲೆ– ಕಾಲೇಜಿಗೆ ಹೋಗುವ ನಮ್ಮ ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ನೇಹಾಗೆ ನ್ಯಾಯ ಕೊಡಿಸಲು ಆಗದಿದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ನಾವು ಪ್ರಧಾನಿ ಮೋದಿ ಕರೆತಂದು ನ್ಯಾಯ ಪಡೆಯುತ್ತೇವೆ’ ಎಂದರು.

ಆರ್‌ಎಸ್‌ಎಸ್‌ ಮುಖಂಡ ರಾಮಚಂದ್ರ ಏಡಕೆ ಮಾತನಾಡಿ, ‘ರಾಜ್ಯದಲ್ಲಿ ಮೊಘಲರ ಆಡಳಿತ, ರಜಾಕರ ಆಡಳಿತ ಇದೆ ಎಂಬ ಅನುಭವ ಆಗುತ್ತಿದೆ. ಲವ್‌ ಜಿಹಾದಿಗಳಿಗೆ, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗುವವರಿಗೆ ರಾಜ್ಯ ಸರ್ಕಾರವೇ ಬೆಂಬಲವಾಗಿ ನಿಂತಿದೆ. ಇಂಥ ಕ್ರೂರ ಕೊಲೆಯನ್ನು ಹಗುರವಾಗಿ ಕಾಣುತ್ತಿರುವ ಸಿದ್ದರಾಮಯ್ಯ ಅವರಿಗೆ ಕ್ರೂರ ಮನಸ್ಥಿತಿ ಇದೆ’ ಎಂದು ಕಿಡಿ ಕಾರಿದರು.

ಬಿಜೆಪಿ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ನಯನಾ ಭಸ್ಮೆ ಮಾತನಾಡಿ, ‘ನಮ್ಮ ದುಡ್ಡಿನಲ್ಲಿ ಆರೋಪಿಗೆ ಬಿರಿಯಾನಿ ತಿನ್ನಿಸುವುದನ್ನು ನಿಲ್ಲಿಸಿ ಸಿದ್ದರಾಮಯ್ಯ. ಲವ್‌ ಜಿಹಾದ್‌ ನಿಯಂತ್ರಣಕ್ಕೆ ಕಠಿಣ ಕಾನೂನು ತನ್ನಿ’ ಎಂದು ಆಗ್ರಹಿಸಿದರು.

ವಿದ್ಯಾರ್ಥಿನಿ ಶ್ರೀಗೌರಿ ಮಾತನಾಡಿ, ‘ಪುಕ್ಕಟೆ ಸೌಲಭ್ಯ ಕೊಡುತ್ತಾರೆ ಯಾರನ್ನೋ ಚುನಾಯಿಸಿದರೆ ಇಂಥ ಸ್ಥಿತಿ ಬರುತ್ತದೆ. ಒಂದು ಸೂಜಿ ಚುಚ್ಚಿದರೂ ಎಷ್ಟೊಂದು ನೋವಾಗುತ್ತದೆ. ಅಂಥದ್ದರಲ್ಲಿ 9 ಬಾರಿ ಚೂರಿಯಿಂದ ಚುಚ್ಚಿದ್ದಾನೆ. ನೇಹಾ ಎಷ್ಟು ನೋವು ಪಟ್ಟಿದ್ದಾಳೆಂದ ಊಹಿಸುವುದಕ್ಕೂ ಆಗುತ್ತಿಲ್ಲ’ ಎಂದರು.

ಲೀನಾ ಟೋಪಣ್ಣವರ ಮಾತನಾಡಿ, ‘ಪ್ರೀತಿಗಾಗಿ ಪೀಡಿಸುತ್ತಾರೆ. ಪ್ರೀತಿ ಒಪ್ಪಿಕೊಂಡರೆ ಮತಾಂತರ ಮಾಡುತ್ತಾರೆ. ಒಪ್ಪಿಕೊಳ್ಳದಿದ್ದರೆ ಕೊಲೆ ಮಾಡುತ್ತಾರೆ. ನಾವು ಹೇಗೆ ಬದುಕಬೇಕು ಹೇಳಿ’ ಎಂದು ಪ್ರಶ್ನಿಸಿದರು.

ವೇದಿಕೆ ಅಧ್ಯಕ್ಷೆ ಜಯಶ್ರೀ ಜಾಧವ, ಕಾರ್ಯದರ್ಶಿ ವಿದ್ಯಾ ಜೋಶಿ, ಹಿಂದೂ ಮಹಾಪರಿಷತ್‌ ವಿ.ವಿ.ಘಸ್ತಿ, ಬೆಳಗಾವಿಯ ತೇಜಪ್ರತಿಬಿಂಬ ಪೀಠದ ಹರಿಗುರು ಮಹಾರಾಜ, ಬಾಪಟಗಲ್ಲಿ ನಾಗನಾಥ ಸ್ವಾಮೀಜಿ, ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ, ಸಿದ್ದನಕೊಳ್ಳ ಮಠದ ಗಂಗಾಧರ ಸ್ವಾಮೀಜಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT