ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ಗಡಿಯಾಚೆ ಕೃಷ್ಣೆಗೆ ‘ಮಹಾ’ ದಿಗ್ಭಂಧನ

ರಾಜಾಪೂರ ಬ್ಯಾರೇಜ್ ನೀರು ನಿರ್ವಹಣೆ ನೆಪ: ಐದು ಗೇಟ್‌ ಮಾತ್ರ ಓಪನ್
Published 28 ಮೇ 2024, 6:32 IST
Last Updated 28 ಮೇ 2024, 6:32 IST
ಅಕ್ಷರ ಗಾತ್ರ

ಚಿಕ್ಕೋಡಿ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಪಾತ್ರದಲ್ಲಿ ನೀರಿಲ್ಲದೇ ಬತ್ತಿ ಬರಿದಾಗಿದೆ. ನದಿ ತೀರದ ಗ್ರಾಮಗಳಲ್ಲಿಯೇ ಜಲಕ್ಷಾಮ ಉಂಟಾಗಿದೆ. ನೀರಿಲ್ಲದೇ ಮೀನುಗಳು ಸಾಯುತ್ತಿವೆ. ಮೊಸಳೆಗಳು ಆಹಾರ ಹುಡುಕಿಕೊಂಡು ದಾಳಿ ಮಾಡುತ್ತಿವೆ. ಯಾವಾಗ ಮಳೆಯಾಗುತ್ತೋ ? ಹೊಳೆಯಲ್ಲಿ ನೀರು ಹರಿಯುತ್ತೋ ? ಅಂತಾ ಕಾದು ಕುಳಿತ ಕನ್ನಡ ನಾಡಿನ ಜನತೆಯ ಕನಸಿಗೆ ಮಹಾರಾಷ್ಟ್ರ ಸರ್ಕಾರ ರಾಜಾಪೂರ ಬಳಿಯಲ್ಲಿ ಕೃಷ್ಣೆಯನ್ನು ತಡೆಯುವ ಮೂಲಕ ತಣ್ಣೀರೆರಚಿದೆ.

ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರ ಬ್ಯಾರೇಜಿನ ಎಲ್ಲಾ 26 ಗೇಟ್ ಗಳನ್ನು ರವಿವಾರ ಮೇ 26ರಂದು ಬಂದ್ ಮಾಡಿ ಕರ್ನಾಟಕಕ್ಕೆ ನೀರು ಹರಿದು ಹೋಗದಂತೆ ಮಹಾರಾಷ್ಟ್ರ ಕುತಂತ್ರ ಮಾಡಿದೆ. ಮಹಾ ನಡೆಯಿಂದ ಕೃಷ್ಣಾ ನದಿ ತೀರದ ಗ್ರಾಮಗಳ ಜನರಿಗೆ ತೀವ್ರ ನಿರಾಶೆಯಾಗಿದೆ. ಉಪ ವಿಭಾಗದ ಜುಗೂಳ, ಮಂಗಾವತಿ, ಯಡೂರ, ಯಡೂರವಾಡಿ, ಶಹಾಪೂರ, ಚಂದೂರ, ಚಂದೂರ ಟೇಕ್, ಮಾಂಜರಿ, ಅಂಕಲಿ, ಕಲ್ಲೋಳ ಗ್ರಾಮಗಳ ಜನರು ಮಳೆಯಾಗಿಯೂ ನೀರಿಲ್ಲದೇ ಪರಿತಪಿಸಬೇಕಿದೆ.

ರಾಜಾಪೂರ ಬ್ಯಾರೇಜ್, ಮಹಾರಾಷ್ಟ್ರ ರಾಜ್ಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಕೊನೆಯ ಬ್ಯಾರೇಜ್ ಆಗಿದ್ದು, ಕೆಳಭಾಗದಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಖಿದ್ರಾಪೂರ, ಸೈನಿಕ ಟಾಕಳಿ, ದತ್ತವಾಡ, ದಾನವಾಡ ಗ್ರಾಮಗಳಿವೆ. ಹೀಗಿದ್ದರೂ ಮಹಾರಾಷ್ಟ್ರ ಅಮಾನವೀಯವಾಗಿ ವರ್ತಿಸಿ ನೈಸರ್ಗಿಕವಾಗಿರುವ ನೀರನ್ನು ಕರ್ನಾಟಕಕ್ಕೆ ಹರಿಯಲು ಬಿಡದೇ ತಡೆದಿದ್ದು ಮಹಾರಾಷ್ಟ್ರದ ಷಡ್ಯಂತ್ರಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಗಡಿಯಲ್ಲಿ ಭಾಷಾ ತಂಟೆಯನ್ನು ಮಾಡುತ್ತಿದ್ದ ಮಹಾರಾಷ್ಟ್ರ ಇದೀಗ "ಜಲತಂಟೆ" ಗೂ ಈ ಮೂಲಕ ಮುಂದಾಗಿದ್ದು, ಗಡಿ ಭಾಗದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಎರಡು ದಿನಗಳಿಂದ ರಾಜಾಪೂರ ಬ್ಯಾರೇಜಿನ ಎಲ್ಲಾ ಗೇಟುಗಳನ್ನು ಮುಚ್ಚಿದ್ದರಿಂದ ನೀರು ಹೊರಸೂಸಿ ಕರ್ನಾಟಕ-ಮಹಾರಾಷ್ಟ್ರ ನಡುವಿನ ಸಂಪರ್ಕ ಕಡಿತವಾಗಿದೆ. ಮತ್ತೇ ಮಳೆಯಾದಲ್ಲಿ ನೀರು ನಿರ್ವಹಣೆಗಾಗಿ ಸೋಮವಾರ ಬೆಳಿಗ್ಗೆ ಬ್ಯಾರೇಜಿನ 5 ಗೇಟ್ ಗಳನ್ನು 1 ಅಡಿಯಷ್ಟು ಇಳಿಸಿದ್ದರಿಂದ 500 ಕ್ಯೂಸೆಕ್ ನಷ್ಟು ನೀರು ಹೊರ ಹರಿವು ಇದೆ. ಇದು ಬ್ಯಾರೇಜ್ ಕೆಳ ಭಾಗದಲ್ಲಿರುವ ಮಹಾರಾಷ್ಟ್ರದ ನಾಲ್ಕು ಗ್ರಾಮಗಳ ಬಾಯಾರಿಕೆಯನ್ನು ನೀಗಿಸಬಹುದಾಗಿದೆ. ಕರ್ನಾಟಕಕ್ಕೆ ಇದರಿಂದ ಯಾವುದೇ ಪ್ರಯೋಜನವಿಲ್ಲ.

ಕಳೆದ ವರ್ಷ ಮಳೆ ಇಲ್ಲದೇ ಅದಾಗಲೇ ಕೃಷ್ಣಾ ನದಿಯು ಸಂಪೂರ್ಣ ಬತ್ತಿ ಬರಿದಾಗಿತ್ತು. ಇದೀಗ ಮಹಾರಾಷ್ಟ್ರದಿಂದ ಬಿಡುಗಡೆ ಮಾಡಿದ ಅಲ್ಪ ಪ್ರಮಾಣದ ನೀರಿನಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಮಳೆ ಸುರಿಯುವರೆಗಾದರೂ ಅನುಕೂಲವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಬ್ಯಾರೇಜ್ ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡಿದ್ದರಿಂದ ನೀರಿಲ್ಲದೇ ಕರ್ನಾಟಕದ ಗ್ರಾಮಗಳು ಮಳೆಯಾಗಿ ನದಿ ತುಂಬಿ ಹರಿಯುವವರಿಗೆ ಪರಿತಪಿಸಬೇಕಾಗುತ್ತಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ಬತ್ತಿ ಬರಿದಾಗಿರುವ ಕೃಷ್ಣಾ ನದಿಯಲ್ಲಿ ನೀರಿಲ್ಲದೇ ಜನ ಜಾನುವಾರು ಪರಿತಪಿಸುವಂತಾಗಿದೆ. ಮಳೆರಾಯ ಕೃಪೆ ತೋರಿದರೂ ಮಹಾರಾಷ್ಟ್ರ ಕೃಪೆ ತೋರದ್ದರಿಂದ ನದಿಗೆ ನೀರು ಬರುತ್ತಿಲ್ಲ. ಈಗಲಾದರೂ ಕಪಟ ನಾಟಕ ಬಿಡಬೇಕು
ಮಲ್ಲಪ್ಪ ಶೇಡಬಾಳೆ ಕೃಷ್ಣಾ ತೀರದ ನಿವಾಸಿ ಕಲ್ಲೋಳ
ರಾಜ್ಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್ ಹಿನ್ನೀರೇ ಮಳೆಗಾಲ ಇಲ್ಲದಾಗ ರಾಜಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗುತ್ತದೆ. ಬ್ಯಾರೇಜ್ ಗೇಟ್ ಬಂದ್ ಮಾಡಿ ನೀರು ತಡೆದಿದ್ದು ಮಹಾರಾಷ್ಟ್ರದ ಅಮಾನವೀಯ ನಡೆ
ಅರುಣ ಯಲಗುದ್ರಿ ನಿವೃತ್ತ ಎಂಜಿನಿಯರ್ ಅಥಣಿ
500 ಕ್ಯೂಸೆಕ್‌ ನೀರು ಮಾತ್ರ ಹೊರಕ್ಕೆ
ಚಿಕ್ಕೋಡಿ: ಇತ್ತೀಚೆಗೆ ಸುರಿದ ಮಳೆಯಿಂದ ನೈಸರ್ಗಿಕವಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಕೃಷ್ಣಾ ನದಿಯ ಮೂಲಕ ಹರಿದು ಬರಬೇಕಿದ್ದ ನೀರನ್ನು ರಾಜಾಪೂರ ಬ್ಯಾರೇಜ್ ಗೇಟ್ ಹಾಕುವ ಮೂಲಕ ತಡೆದಿದ್ದ ಮಹಾರಾಷ್ಟ್ರ ಸೋಮವಾರ ಏಕಾಏಕಿ 5 ಗೇಟ್ ಗಳನ್ನು 1 ಅಡಿಯಷ್ಟು ತೆರೆಯುವ ಮೂಲಕ 500 ಕ್ಯೂಸೆಕ್ ನಷ್ಟು ನೀರು ಕರ್ನಾಟಕದತ್ತ ಹರಿದು ಬರುತ್ತಿದೆ. ಭಾನುವಾರ ಬ್ಯಾರೇಜಿನ ಎಲ್ಲ 26 ಗೇಟುಗಳನ್ನು ಮಹಾರಾಷ್ಟ್ರ ಮುಚ್ಚಿದ್ದರಿಂದ ಬ್ಯಾರೇಜ್ ಪೂರ್ಣ ತುಂಬಿ ಹೊರ ಸೂಸುತ್ತಿತ್ತು. ಹೀಗಾಗಿ ಬ್ಯಾರೇಜ್ ಮೇಲಿನಿಂದ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಂಚಾರ ಬಂದ್ ಆಗಿತ್ತು. ಐದು ಗೇಟುಗಳನ್ನು 1 ಅಡಿಯಷ್ಟು ತೆರೆದಿದ್ದರಿಂದ ಸಂಚಾರ ಎಂದಿನಂತೆ ಪ್ರಾರಂಭವಾಗಿದೆ. ಹೀಗೆ 5 ಗೇಟುಗಳನ್ನು 1 ಅಡಿಯಷ್ಟು ತೆರೆದಿದ್ದರಿಂದಾಗಿ ಬ್ಯಾರೇಜ್ ಕೆಳಭಾಗದಲ್ಲಿರುವ ಮಹಾರಾಷ್ಟ್ರದ ಖಿದ್ರಾಪೂರ ದತ್ತವಾಡ ದಾನವಾಡ ಟಾಕಳಿ ಗ್ರಾಮಗಳಿಗೆ ಅನುಕೂಲವಾಗಲಿದೆ. ಅಲ್ಲದೇ ಮತ್ತೇ ಮಹಾರಾಷ್ಟ್ರದಲ್ಲಿ ಮಳೆ ಸುರಿದಲ್ಲಿ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಬ್ಯಾರೇಜಿನ ಗೇಟ್‌ಗಳನ್ನು ಮಹಾರಾಷ್ಟ್ರದ ಅಧಿಕಾರಿಗಳು ತೆರೆದಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಕರ್ನಾಟಕದಲ್ಲಿರುವ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT