ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಕೃಷ್ಣಮಠ ಸ್ಥಾಪಿಸಿದ್ದ ಪೇಜಾವರ ಶ್ರೀ

Last Updated 29 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರು ಬೆಳಗಾವಿಯ ಜೊತೆ ಅವಿನಾಭಾವ ನಂಟು ಹೊಂದಿದ್ದರು. ಹಲವು ಬಾರಿ ನಗರಕ್ಕೆ ಭೇಟಿ ನೀಡಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಲ್ಲಿನ ಟಿಳಕವಾಡಿಯಲ್ಲಿ ಬ್ರಾಹ್ಮಣ ವಿದ್ಯಾರ್ಥಿ ನಿಲಯ ಹಾಗೂ ಕೃಷ್ಣ ಮಠ ಸ್ಥಾಪಿಸಲು ಪ್ರೇರಕರಾದರು. 1964ರಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯವೊಂದರ ಅವಶ್ಯಕತೆ ಬಹಳವಿತ್ತು. ಇದನ್ನು ಮನಗಂಡ ಅವರು ಇದರ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯವಾಯಿತು.

ಇದೇ ಆವರಣದಲ್ಲಿ 2014ರಲ್ಲಿ ಕೃಷ್ಣ ಮಠವನ್ನೂ ನಿರ್ಮಿಸಿದರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಲವು ಧಾರ್ಮಿಕ ಪ್ರವಚನಗಳು ನಡೆಯುತ್ತವೆ. ಇಲ್ಲಿಗೆ ಹಲವು ಬಾರಿ ವಿಶ್ವೇಶತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ, ಹಲವು ದಿನಗಳನ್ನು ಕಳೆದಿದ್ದಾರೆ. ಭಕ್ತರಿಗೆ, ಹಿತೈಷಿಗಳಿಗೆ ಹಿತೋಪದೇಶ ಮಾಡಿದ್ದಾರೆ.

ವಿಎಚ್‌ಪಿ ಸಮಾವೇಶದಲ್ಲಿ ಭಾಗಿ:

1980ರ ದಶಕದಲ್ಲಿ ರಾಮದುರ್ಗದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ ಸಮಾವೇಶದಲ್ಲಿ ಸ್ವಾಮೀಜಿ ಅವರು ಪಾಲ್ಗೊಂಡಿದ್ದರು. ಹಿಂದೂ ಧರ್ಮದ ರಕ್ಷಣೆಯ ಬಗ್ಗೆ ಅವರು ಮಾತುಗಳನ್ನಾಡಿದ್ದರು. 2015ರ ಅಕ್ಟೋಬರ್‌ 20ರಂದು ಸ್ವಾಮೀಜಿ ಅವರ ಶೋಭಾಯಾತ್ರೆ ನಗರದಲ್ಲಿ ನಡೆದಿತ್ತು. ಸಾವಿರಾರು ಜನರು ಭಾಗವಹಿಸಿದ್ದರು. ಬೆಳಗಾವಿಯಲ್ಲಿ ನಿರ್ಮಿಸಲಾಗುತ್ತಿರುವ ಗಾಯತ್ರಿ ಭವನಕ್ಕೆ ಧನ ಸಹಾಯ ಮಾಡಿದ್ದರು.

2019ರ ಏಪ್ರಿಲ್‌ 15ರಂದು ಬೆಳಗಾವಿಯಲ್ಲಿ ನಡೆದಿದ್ದ ಹರಿದಾಸ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಿಂದೂ ಧರ್ಮ, ಸಾಹಿತ್ಯದ ಕುರಿತು ಮಾತನಾಡಿದ್ದರು. ಕಳೆದ ತಿಂಗಳು ನವೆಂಬರ್‌ 13ರಂದು ನಗರಕ್ಕೆ ಭೇಟಿ ನೀಡಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

‘ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಗಾಗ ಬೆಳಗಾವಿಗೆ ಭೇಟಿ ನೀಡುತ್ತಿದ್ದರು. ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದು ಹಾಗೂ ಕೃಷ್ಣಮಠ ಸ್ಥಾಪಿಸಿದ್ದು ಬೆಳಗಾವಿಗೆ ನೀಡಿದ್ದ ಅಪೂರ್ವ ಕೊಡುಗೆಗಳಾಗಿವೆ. ಕೇವಲ ಒಂದು ಜಾತಿಗೆ ಅವರು ಸೀಮಿತವಾಗಿರಲಿಲ್ಲ. ಇಡೀ ಹಿಂದೂ ಧರ್ಮದ ಆಸ್ತಿಯಾಗಿದ್ದರು’ ಎಂದು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್‌.ಎಂ. ಕುಲಕರ್ಣಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT