ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸುವರ್ಣ ವಿಧಾನಸೌಧದ ಬಳಿ ಸರಣಿ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
Published 5 ಡಿಸೆಂಬರ್ 2023, 13:39 IST
Last Updated 5 ಡಿಸೆಂಬರ್ 2023, 13:39 IST
ಅಕ್ಷರ ಗಾತ್ರ

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ ಹಲಗಾದ ಸುವರ್ಣ ಗಾರ್ಡನ್‌ ಬಳಿ ಇರುವ ವೇದಿಕೆಯಲ್ಲಿ ಮಂಗಳವಾರ ಸರಣಿ ಪ್ರತಿಭಟನೆ ನಡೆದವು. ನಾಡಿನ ವಿವಿಧ ಮಠಾಧೀಶರು, ಹೋರಾಟಗಾರರು, ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವವರು, ಜಾಡಮಾಲಿ ನೌಕರರು, ಪ್ರಥಮ ಚಿಕಿತ್ಸಾ ಪರಿಣಿತರು ಸೇರಿದಂತೆ ವಿವಿಧ ಸಂಘಟನೆಯವರು ತಮ್ಮ ಹಕ್ಕೊತ್ತಾಯ ಮಂಡಿಸಿದರು.

ಕನಿಷ್ಠ ವೇತನ ನೀಡಲು ಆಗ್ರಹ

‘ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಬಿಸಿಯೂಟ ತಯಾರಿಸುತ್ತಿರುವ ಮುಖ್ಯ ಅಡುಗೆಯವರು, ಅಡುಗೆ ಸಹಾಯಕರನ್ನು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ಅನ್ವಯ, ಶೆಡ್ಯೂಲ್‌ನಲ್ಲಿ ಸೇರಿಸಬೇಕು. ನಿಯಮಾನುಸಾರ ಕನಿಷ್ಠ ವೇತನ, ಇಎಸ್‌ಐ, ಪಿಎಫ್‌ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ರಾಜ್ಯ ಸಮಿತಿಯವರು ತಾಲ್ಲೂಕಿನ ಕೊಂಡಸಕೊಪ್ಪ ಗುಡ್ಡದಲ್ಲಿ ಮಂಗಳವಾರ ಪ್ರತಿಭಟಿಸಿದರು.

‘ಶಾಸನಬದ್ಧವಾಗಿ ನಮಗೆ ವಾರದ ರಜೆ ಮತ್ತು ಹೆರಿಗೆ ರಜೆ ನೀಡಬೇಕು. ರಜಾ ದಿನಗಳಲ್ಲಿ ಕೆಲಸ ಮಾಡಿದವರಿಗೆ ಹೆಚ್ಚುವರಿ ವೇತನ ಕೊಡಬೇಕು. ಮಾಸಿಕ ವೇತನವನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ನೇರವಾಗಿ ಬ್ಯಾಂಕ್‌ ಖಾತೆಗೆ ಪಾವತಿಸಬೇಕು. ನಮಗೆ ಹತ್ತಿ ಬಟ್ಟೆಯ ಸಮವಸ್ತ್ರ, ಕೈವಸು, ತಲೆಗೆ ಸ್ಕಾರ್ಫ್‌, ಎಫ್ರಾನ್‌ಗಳನ್ನು ಕೊಡಬೇಕು. ನಮಗೆ ವರ್ಷದಲ್ಲಿ 10 ತಿಂಗಳು ಮಾತ್ರ ಗೌರವಧನ ಕೊಡಲಾಗುತ್ತಿದೆ. ಅದನ್ನು ವರ್ಷವಿಡೀ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎ.ಶಾಂತಾ, ರಾಜ್ಯ ಘಟಕದ ಕಾರ್ಯದರ್ಶಿ ಸಂಧ್ಯಾ ಪಿ.ಎಸ್‌. ನೇತೃತ್ವ ವಹಿಸಿದ್ದರು. ಸಚಿವ ರಾಮಲಿಂಗಾ ರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಬಂದು, ಸಮಸ್ಯೆ ಆಲಿಸಿದರು. ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಆಶ್ವಾಸನೆ ಕೊಟ್ಟರು.

‘ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿ’

‘ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಸದನದಲ್ಲಿ ಚರ್ಚಿಸಬೇಕು’ ಎಂದು ಆಗ್ರಹಿಸಿ ನಾಡಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದರು.

ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಘೋಷಿಸಬೇಕು. ರಾಜ್ಯಮಟ್ಟದ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಕೆಲ ವರ್ಷಗಳ ಹಿಂದೆ ಸೌಧಕ್ಕೆ ಸ್ಥಳಾಂತರಗೊಂಡ ಜಿಲ್ಲಾಮಟ್ಟದ ಕಚೇರಿಗಳನ್ನು ಮರಳಿ ಬೆಳಗಾವಿ ನಗರಕ್ಕೆ ಸ್ಥಳಾಂತರಿಸಿ, ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಮುಖಂಡರಾದ ಭೀಮಪ್ಪ ಗಡಾದ, ನಾಗೇಶ ಗೋಳಶೆಟ್ಟಿ ಇತರರಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆ ಆಲಿಸಿದ ಸಚಿವ ರಾಮಲಿಂಗಾ ರೆಡ್ಡಿ, ‘ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವೆ’ ಎಂದು ಭರವಸೆ ಕೊಟ್ಟರು.


ಮಾನ್ಯತೆ ನೀಡಲು ಒತ್ತಾಯ

ಆಂಧ್ರಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಪ್ರಥಮ ಚಿಕಿತ್ಸಾ ಪರಿಣಿತರನ್ನು ತರಬೇತಿಗೆ ಒಳಪಡಿಸಿ, ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರ ಸಂಘದವರು ಪ್ರತಿಭಟಿಸಿದರು.

‘ರಾಜ್ಯದ ಬಹುತೇಕ ಹಳ್ಳಿಗಳು ಮತ್ತು ನಗರದ ಕೊಳಚೆ ಪ್ರದೇಶಗಳಲ್ಲಿನ ಜನರಿಗೆ ಕಳೆದ 30 ವರ್ಷಗಳಿಂದ ಪ್ರಥಮ ಚಿಕಿತ್ಸೆ ನೀಡುತ್ತಿದ್ದೇವೆ. ಅದರಲ್ಲಿ ಬರುವ ಆದಾಯದಲ್ಲೇ ಬದುಕಿನಬಂಡಿ ದೂಡುತ್ತಿದ್ದೇವೆ. ಆದರೆ, ನಮ್ಮ ಬಳಿ ಯಾವುದೇ ಪ್ರಮಾಣಪತ್ರವಿಲ್ಲ. ಹಾಗಾಗಿ ಕೆಲವೊಮ್ಮೆ ಅಧಿಕಾರಿಗಳು ನೋಟಿಸ್‌ ಕೊಡುತ್ತಾರೆ. ಈ ಹಿಂದೆ ಯು.ಟಿ.ಖಾದರ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿದ್ದಾಗ, ನಮಗೆ ಮಾನ್ಯತೆ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಅವರು ಸೂಚಿಸಿದಂತೆ ಸದಸ್ಯರ ಪಟ್ಟಿ ಕೊಟ್ಟಿದ್ದೆವು. ನಂತರದಲ್ಲಿ ಕೆಲವು ಪ್ರಕ್ರಿಯೆ ನಡೆದಿವೆ. ಆದರೆ, ಈವರೆಗೂ ನ್ಯಾಯ ಸಿಕ್ಕಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನಮಗೆ ಮಾನ್ಯತೆ ಒದಗಿಸಬೇಕು’ ಎಂದು ಆಗ್ರಹಿಸಿದರು. ಪಿ.ಕೆ.ಕುಮಾರ್‌, ಎಂ.ಜಿ.ಮಡಿಕೇಶ್ವರ, ವಿ.ಕೆ.ಜೋಶಿ, ಎಸ್‌.ಬಿ.ಚಿಕ್ಕಮಠ, ಬಿ.ಬಿ.ಮನಿಯಾರ, ಎ.ಎಚ್‌.ಬೋರ್ಗಿ ಇತರರಿದ್ದರು.

‘ಡಿ’ ದರ್ಜೆ ನೌಕರರೆಂದು ಪರಿಗಣಿಸಿ

‘ರಾಜ್ಯದ ಪೊಲೀಸ್‌ ಠಾಣೆಗಳು ಹಾಗೂ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನಮ್ಮನ್ನು ಮರುನೇಮಕ ಮಾಡಿಕೊಂಡು, ‘ಡಿ’ ದರ್ಜೆ ನೌಕರರೆಂದು ಪರಿಗಣಿಸಬೇಕು’ ಎಂದು ಒತ್ತಾಯಿಸಿ ಜಾಡಮಾಲಿ ನೌಕರರು ಪ್ರತಿಭಟಿಸಿದರು.

‘ಕಳೆದ 20ರಿಂದ 30 ವರ್ಷಗಳಿಂದ ಜಾಡಮಾಲಿ ನೌಕರರೆಂದು ಸೇವೆ ಸಲ್ಲಿಸುತ್ತಿದ್ದೆವು. ಸರ್ಕಾರ ಮಾಸಿಕ ₹3,500 ಗೌರವಧನ ಕೊಡುತ್ತಿತ್ತು. ಕೆಲ ವರ್ಷಗಳ ಹಿಂದೆ ಸರ್ಕಾರ ನಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಆದರೂ, ಕೆಲಸ ಮುಂದುವರಿಸಿದ್ದೇವೆ. ಹಾಗಾಗಿ 2017ಕ್ಕಿಂತ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಮರುನೇಮಕ ಮಾಡಿಕೊಂಡು, ಕನಿಷ್ಠ ವೇತನವನ್ನು ಸರ್ಕಾರದಿಂದ ನೇರವಾಗಿ ಪಾವತಿಸಬೇಕು. ಡಿ ದರ್ಜೆ ನೌಕರರೆಂದು ಪರಿಗಣಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿ’

‘ನಮಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಬೇಕು’ ಎಂದು ಆಗ್ರಹಿಸಿ ರಾಜ್ಯ ಶಿಳ್ಳೇಕ್ಯಾತರ ಅಭಿವೃದ್ಧಿ ಸಂಘದವರು ಪ್ರತಿಭಟನೆ ನಡೆಸಿದರು.

‘ಉತ್ತರ ಕರ್ನಾಟಕದಲ್ಲಿ ನಮ್ಮನ್ನು ಕಿಳ್ಳೇಕ್ಯಾತರು, ದಕ್ಷಿಣ ಕರ್ನಾಟಕದಲ್ಲಿ ಶಿಳ್ಳೇಕ್ಯಾತರೆಂದು ಜನರು ಗುರುತಿಸಿದ್ದಾರೆ. ಹಾಗಾಗಿ ಸರ್ಕಾರವೂ ಶಿಳ್ಳೇಕ್ಯಾತ ಪದವನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮತ್ತು ಕಿಳ್ಳೇಕ್ಯಾತ ಪದವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದೆ. ಆದರೆ, ಕಿಳ್ಳೇಕ್ಯಾತರು ಮತ್ತು ಶಿಳ್ಳೇಕ್ಯಾತರು ಎಂದರೆ ಬೇರೆಯಲ್ಲ. ನಾವೆಲ್ಲರೂ ಒಂದೇ. ಹೀಗಿದ್ದರೂ ಸರ್ಕಾರ ನಮಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡದೆ ಅನ್ಯಾಯವೆಸಗಿದೆ. ಇದನ್ನು ಸರಿಪಡಿಸಿ, ನಮ್ಮನ್ನೂ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು. ನಿಯಮಾನುಸಾರ ಸೌಲಭ್ಯ ಕೊಡಬೇಕು’ ಎಂದು ಒತ್ತಾಯಿಸಿದರು.

ಕೇಂದ್ರಕ್ಕೆ ಶಿಫಾರಸು ಮಾಡಿ

‘ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಸಲುವಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರೊ.ಅನ್ನಪೂರ್ಣ ಅವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಜಾರಿಗೊಳಿಸುವ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿ ಉತ್ತರ ಕರ್ನಾಟಕದ ಮಡಿವಾಳರ ಸಂಘದವರು ಸಮಾಜಕಲ್ಯಾಣ ಇಲಾಖೆ ಉಪಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ಅಧ್ಯಕ್ಷ ಎಂ.ಕೆ.ಹನುಮಂತಪ್ಪ ಇತರರಿದ್ದರು.

ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿಯ ವೇದಿಕೆಯಲ್ಲಿ ರಾಜ್ಯ ಶಿಳ್ಳೇಕ್ಯಾತರ ಅಭಿವೃದ್ಧಿ ಸಂಘದವರು ಮಂಗಳವಾರ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿಯ ವೇದಿಕೆಯಲ್ಲಿ ರಾಜ್ಯ ಶಿಳ್ಳೇಕ್ಯಾತರ ಅಭಿವೃದ್ಧಿ ಸಂಘದವರು ಮಂಗಳವಾರ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿಯ ವೇದಿಕೆಯಲ್ಲಿ ರಾಜ್ಯ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರ ಸಂಘದವರು ಮಂಗಳವಾರ ಪ್ರತಿಭಟಿಸಿದರು
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿಯ ವೇದಿಕೆಯಲ್ಲಿ ರಾಜ್ಯ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರ ಸಂಘದವರು ಮಂಗಳವಾರ ಪ್ರತಿಭಟಿಸಿದರು
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿಯ ವೇದಿಕೆಯಲ್ಲಿ ಜಾಡಮಾಲಿ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿಯ ವೇದಿಕೆಯಲ್ಲಿ ಜಾಡಮಾಲಿ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿಯ ವೇದಿಕೆಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯವರು ಮಂಗಳವಾರ ಪ್ರತಿಭಟನೆ ನಡೆಸಿದರು
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿಯ ವೇದಿಕೆಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯವರು ಮಂಗಳವಾರ ಪ್ರತಿಭಟನೆ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT