ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | 3 ತಿಂಗಳಲ್ಲಿ ₹4 ಕೋಟಿ ಮದ್ಯ ವಶ: ಅಕ್ರಮ ಸಾಗಣೆಗೆ ಬೇಕಿದೆ ಬಿಗಿ ಅಂಕುಶ

Published 29 ಜನವರಿ 2024, 7:37 IST
Last Updated 29 ಜನವರಿ 2024, 7:37 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ಮೂರು ತಿಂಗಳ ಅವಧಿಯಲ್ಲಿ ಬೆಳಗಾವಿಯ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ಸಾರಾಯಿ ಪ್ರಮಾಣ ಎಷ್ಟು?

ಬರೋಬ್ಬರಿ ₹4 ಕೋಟಿಗೂ ಅಧಿಕ!

ಹೌದು. ಗೋವಾದಲ್ಲಿ ಕಡಿಮೆ ದರದಲ್ಲಿ ಖರೀದಿಸಿದ ಮದ್ಯವನ್ನು ಬೆಳಗಾವಿ ಮಾರ್ಗವಾಗಿ ಅಕ್ರಮವಾಗಿ ಸಾಗಣೆ ಮಾಡುವುದು ಇಂದು ನಿನ್ನೆಯ ಕತೆಯಲ್ಲ. ದಶಕಗಳಿಂದಲೂ ಮುಂದುವರಿದೇ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಬಕಾರಿ ಅಧಿಕಾರಿಗಳು ನಿರಂತರ ದಾಳಿ ಮಾಡುತ್ತಿರುವ ಕಾರಣ ಕೆಲವು ಪ್ರಕರಣಗಳಲ್ಲಿ ಮದ್ಯ ಸೀಜ್‌ ಆಗುತ್ತದೆ. ಪೊಲೀಸರ ಕಣ್ಣು ತಪ್ಪಿಸಿ ಅದೆಷ್ಟು ಮದ್ಯ ಸಾಗಣೆ ಆಗುತ್ತಿದೆ ಎಂಬುದನ್ನು ಊಹಿಸಬೇಕಷ್ಟೇ.

ಸದ್ಯ ಬೆಳಗಾವಿ ಮಾರ್ಗದಲ್ಲಿ ಸಾಗಿಸಲು ಯತ್ನಿಸಿದ ಮದ್ಯದ ಲೆಕ್ಕ ಮಾತ್ರ ಇಲ್ಲಿದೆ. ಬೇರೆಬೇರೆ ರಾಜ್ಯಗಳಿಗೆ ಬೇರೆಬೇರೆ ಮಾರ್ಗಗಲ್ಲಿ ಕಳ್ಳತನದಿಂದ ಸಾಗಣೆ ಆಗಿರಬಹುದಾದ ಮದ್ಯದ ಲೆಕ್ಕ ಊಹಿಸಲೂ ಆಗದು.

ಕಿಲಾಡಿ ತಂತ್ರಗಳು: ಮದ್ಯ ಸಾಗಣೆಯನ್ನು ಸಿನಿಮೀಯ ರೀತಿಯಲ್ಲಿ ಸಾಗಣೆ ಮಾಡುತ್ತಿರುವ ಹಲವು ಪ್ರಕರಣಗಳು ಸಿಗುತ್ತವೆ. ಯಾವುದೋ ಸಿನಿಮಾದಲ್ಲಿ ನೋಡಿದ ಉಪಾಯವನ್ನು ಮದ್ಯ ಮಾರಾಟಗಾರರು ಚಾಚೂತಪ್ಪದೇ ಪಾಲಿಸುತ್ತಿದ್ದಾರೆ. ಕೆಲವು ಉದಹಾರಣೆಗಳನ್ನು ಇಲ್ಲಿ ಗಮನಿಸಬಹುದು.

ಪ್ರಕರಣ–1: ಲಾರಿಯಲ್ಲಿ ಫ್ಲೈವುಡ್‌ಗಳನ್ನು ಹೇರಿ ಅದರ ಕೆಳಗೆ ಬಾಕ್ಸ್‌ಗಳನ್ನು ಮಾಡಿ ಮದ್ಯದ ಬಾಕ್ಸ್‌ಗಳನ್ನು ಇಟ್ಟು ಸಾಗಿಸಲಾಗುತ್ತಿತ್ತು. ಅದರ ಸಣ್ಣ ಸುಳಿವು ಹಿಡಿದ ಅಬಕಾರಿ ಅಧಿಕಾರಿಗಳು ಅತ್ಯಂತ ಚಾಣಾಕ್ಷತೆಯಿಂದ ಅದನ್ನು ಬಯಲಿಗೆಳೆದರು. ಮೇಲಿನಿಂದ ನೋಡಿದರೆ ಫ್ಲೈವುಡ್‌ ಕಟ್ಟಿಗೆಗಳನ್ನೇ ಸಾಗಿಸುವಂತೆ ಕಾಣುತ್ತದೆ. ಕಿಂಚಿತ್ತೂ ಅನುಮಾನ ಬರದಂತೆ ಆರೋಪಿಗಳು ಈ ಉಪಾಯ ಹೂಡಿದ್ದಕ್ಕೆ ಪೊಲೀಸರೇ ಬೆಚ್ಚಿ ಬಿದ್ದಿದ್ದರು.

ಪ್ರಕರಣ–2: ಟ್ರಾನ್ಸ್‌ಫಾರ್ಮರ್‌ ಮಾದರಿಯಲ್ಲಿ ಸಿದ್ಧಪಡಿಸಿದ ಬಾಕ್ಸ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 30 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಕೆಲವೇ ದಿನಗಳ ಹಿಂದೆ ವಶಕ್ಕೆ ಪಡೆದರು. ತುಸು ಯಾಮಾರಿದರೂ ಟಿಸಿಗಳನ್ನೇ ಸಾಗಿಸಲಾಗುತ್ತಿದೆ ಎಂದು ವಾಹನವನ್ನು ಬಿಟ್ಟು ಬಿಡುತ್ತಿದ್ದರು. ಅಷ್ಟರಮಟ್ಟಿಗೆ ಕಳ್ಳರು ಮದ್ಯ ಸಾಗಣೆಗೆ ಉಪಾಯ ಹೂಡಿದ್ದರು.

ಪ್ರಕರಣ–3: ದೊಡ್ಡ ಲಾರಿಯೊಂದರಲ್ಲಿ ಮಶ್ರೂಮ್‌ನ ಬೀಜ ಸಾಗಣೆ ನೆಪದಲ್ಲಿ ಸಾಗಿಸುತ್ತಿದ್ದ ಸುಮಾರು ₹67 ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಂತೂ ನಿಬ್ಬೆರಗು ಮಾಡಿದ ಪ್ರಕರಣ. ಸಣ್ಣಸಣ್ಣ ಚೀಲಗಳನ್ನು ಮಶ್ರೂಮ್‌ ಬೀಜಗಳನ್ನು ಹಾಕಿ, ಮಣ್ಣನ್ನೂ ಸೇರಿಸಿ ಸಾಗಣೆ ಮಾಡುವುದು ಸಹಜ. ಅದೇ ಮಾದರಿಯ ಉಪಾಯ ಮಾಡಿದ ಕಳ್ಳರು ಕೆಲವು ಬೀಜದ ಚೀಲಗಳನ್ನು ಇಟ್ಟು ಅದರಡಿಯಲ್ಲಿ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದರು. ಎಷ್ಟೇ ತಪಾಸಣೆ ಮಾಡಿದರೂ ಮಶ್ರೂಮ್‌ ಬೀಜಗಳೇ ಸಿಗುತ್ತಿದ್ದವು. ಆದರೆ, ಈ ಮಾರ್ಗದಲ್ಲಿ ಯಾರು, ಎಲ್ಲಿಗೆ, ಏಕೆ ಮಶ್ರೂಮ್‌ ಬೀಜ ಸಾಗಿಸುತ್ತಾರೆ ಎಂಬ ಒಂದೇ ಪ್ರಶ್ನೆ ಇಡೀ ಪ್ರಕರಣವನ್ನು ಬಯಲಿಗೆಳೆಯುವಂತೆ ಮಾಡಿತು.

ಹೀಗೆ, ತಮ್ಮ ಕೃತ್ಯದ ಯಶಸ್ಸಿಗೆ ಕಳ್ಳರು ಹುಡುಕಿಕೊಂಡ ಮಾರ್ಗಗಳು ಅನೇಕ, ಹಾಕಿದ ವೇಷಗಳು ಹಲವು.

ಅಕ್ರಮಕ್ಕೆ ಕಾರಣವೇನು?: ಮದ್ಯದ ದರ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಿದೆ. ರಾಜ್ಯದಲ್ಲಿ ನೆರೆರಾಜ್ಯಗಳಿಗಳಿಗಿಂತಲೂ ದುಬಾರಿ ಇದೆ. ಆದರೆ, ಗೋವಾದಲ್ಲಿ ಶೇ 40ರಷ್ಟು ದರ ಕಡಿಮೆ ಇದ್ದು, ಬಹುವಿಧದ ಮದ್ಯಗಳೂ ಸಿಗುತ್ತವೆ. ವ್ಯಾಪಾರಿಗಳು ಗೋವಾದಲ್ಲಿ ಕಡಿಮೆ ದರಕ್ಕೆ ಖರೀದಿಸಿ ಅದನ್ನು ತಮ್ಮ ರಾಜ್ಯಗಳಲ್ಲಿ ಹೆಚ್ಚಿನ ದರಕ್ಕೆ ಮಾರುತ್ತಾರೆ. ಇದೇ ಉದ್ದೇಶದಿಂದ ಇನ್ನಿಲ್ಲದ ಅಕ್ರಮ ಮಾರ್ಗಗಳನ್ನು ಹಿಡಿಯುತ್ತಾರೆ.

ಸದ್ಯ ಗೋವಾದಿಂದ ಸಾಗಣೆ ಆಗುವ ಮದ್ಯ ಆಂಧ್ರ, ಗೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಉತ್ತರ ಪ್ರದೇಶದ ವಿವಿಧ ರಾಜ್ಯಗಳಿಗೂ ಸರಬರಾಜು ಆಗುತ್ತದೆ. ಎರಡು– ಮೂರು ರಾಜ್ಯಗಳ ಇಷ್ಟೆಲ್ಲ ಚೆಕ್‌ಪೋಸ್ಟ್‌ಗಳನ್ನು ಕಣ್ತಪ್ಪಿಸಿಯೂ ಹೇಗೆ ಸಾಗಣೆ ಮಾಡುತ್ತಾರೆ ಎಂಬುದೇ ನಿಬ್ಬೆರಗು ಮಾಡುತ್ತದೆ.

ಅಕ್ರಮವಾಗಿ ಲಾರಿಯಲ್ಲಿ  ಸಾಗಿಸುತ್ತಿದ್ದ ಮದ್ಯವನ್ನು ಬೆಳಗಾವಿಯಲ್ಲಿ ಅಬಕಾರಿ ಅಧಿಕಾರಿಗಳು ಭಾನುವಾರ ಪರಿಶೀಲಿಸಿದರು
ಅಕ್ರಮವಾಗಿ ಲಾರಿಯಲ್ಲಿ  ಸಾಗಿಸುತ್ತಿದ್ದ ಮದ್ಯವನ್ನು ಬೆಳಗಾವಿಯಲ್ಲಿ ಅಬಕಾರಿ ಅಧಿಕಾರಿಗಳು ಭಾನುವಾರ ಪರಿಶೀಲಿಸಿದರು
ಬೆಳಗಾವಿ ತಾಲ್ಲೂಕಿನ ಕಾಕತಿ ಬಳಿ ಗುರುವಾರ ರಾತ್ರಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದರು
ಬೆಳಗಾವಿ ತಾಲ್ಲೂಕಿನ ಕಾಕತಿ ಬಳಿ ಗುರುವಾರ ರಾತ್ರಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದರು
ಶೇ 30ರಷ್ಟು ಸಿಬ್ಬಂದಿ ಕೊರತೆ
ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಣೆ ನಿರಂತರ ನಡೆದೇ ಇದೆ. ಇದನ್ನು ತಡೆಯಲು ವ್ಯವಸ್ಥಿತ ಸಿದ್ಧತೆ ಅಗತ್ಯ. ಆದರೆ ಅಬಕಾರಿ ಇಲಾಖೆಯಲ್ಲಿ ಶೇ 30ರಷ್ಟು ಸಿಬ್ಬಂದಿ ಕೊರತೆ ಇದೆ. ಅಧಿಕಾರಿ ಹಂತದ ಹುದ್ದೆಗಳಲ್ಲಿ ಎಲ್ಲರೂ ಇದ್ದಾರೆ. ಆದರೆ ದಾಳಿಗೆ ಕಾವಲಿಗೆ ಮುಖ್ಯವಾಗಿ ಬೇಕಾಗಿರುವುದು ಕಾನ್‌ಸ್ಟೆಬಲ್‌ ಹಂತದ ಸಿಬ್ಬಂದಿ. ಸಿಬ್ಬಂದಿ ಕೊರತೆಯ ಕಾರಣ ಈಗ ಅಧಿಕಾರಿಗಳೇ ದಾಳಿ ಮಾಡಲು ತೆರಳುತ್ತಿದ್ದಾರೆ. ಸದ್ಯದ ಪ್ರಕರಣಗಳ ಸಂಖ್ಯೆ ವಶಪಡಿಸಿಕೊಂಡ ಮಾಲುಗಳ ಪ್ರಮಾಣ ಮೊತ್ತ ಹಾಗೂ ಅಕ್ರಮ ನಡೆಯುವ ಸ್ಥಳ– ರೀತಿಗಳ ಲೆಕ್ಕಾಚಾರ ಹಾಕಿದರೆ ಇನ್ನೂ ಹಲವು ಸಿಬ್ಬಂದಿಯ ಅವಶ್ಯಕತೆ ಹೆಚ್ಚಿದೆ. ಸರ್ಕಾರ ಎಷ್ಟು ಬೇಗ ಸಿಬ್ಬಂದಿ ನೇಮಕ ಮಾಡುವುದೋ ಅಷ್ಟು ವೇಗದಲ್ಲಿ ಅಕ್ರಮ ತಡೆಯಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.
ಶಿಕ್ಷೆ ಪ್ರಮಾಣ ಏನು?
ಮದ್ಯ ಅಕ್ರಮ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದವರಿಗೆ ಅಪರಾಧ ಸಾಬೀತಾದರೆ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ. ಬಹಳಷ್ಟು ಪ್ರಕರಣಗಳಲ್ಲಿ ಮಾಲು ಸೀಜ್‌ ಮಾಡಿ ದಂಡ ಹಾಕಿ ಬಿಟ್ಟ ಉದಾಹರಣೆಗಳೇ ಇವೆ. ಸುಪ್ರೀಂಕೋರ್ಟ್‌ನ ಹೊಸ ನಿಮಯ ‘41ಸಿ’ ಪ್ರಕಾರ ಐದು ವರ್ಷಗಳವರೆಗೆ ಶಿಕ್ಷೆ ಪ್ರಕಟವಾದರೆ ಮಾತ್ರ ಜೈಲುವಾಸವಾಗುತ್ತದೆ. ಅದಕ್ಕಿಂತ ಕಡಿಮೆ ಶಿಕ್ಷೆ ಆಗುವಂಥ ಪ್ರಕರಣವಿದ್ದರೆ ಆರೋಪಿಗಳಿಗೆ ಬೇಲ್‌ ಕೂಡ ನೀಡಲಾಗುತ್ತದೆ. ಕಾನೂನು ಸಡಿಲತೆ ಕಾರಣ ಅಕ್ರಮ ಸಾಗಣೆ ಮಾಡುವವರಿಗೆ ಭಯ ಮಾಯವಾಗಿದೆ. ಹೀಗಾಗಿ ದಾಳಿಯ ವ್ವವಸ್ಥೆ ಹಾಗೂ ನಂತರ ಹಾಕಬೇಕಾದ ಕಲಂಗಳ ಬಗ್ಗೆ ಅಧಿಕಾರಿಗಳು ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ ಎನ್ನುವುದು ನಿವೃತ್ತ ಅಧಿಕಾರಿಯೊಬ್ಬರ ಅನುಭವ.
ವೃದ್ಧಿಸಬೇಕಿದೆ ತಾಂತ್ರಿಕ ಶಕ್ತಿ
ಅಕ್ರಮ ಸಾಗಣೆ ಪತ್ತೆ ಮಾಡಲು ಹಾಗೂ ಮದ್ಯದ ಪರಿಶೀಲನೆಗೆ ಸದ್ಯ ಸುಲಭ ಮಾರ್ಗಗಳು ಇಲ್ಲ. ವೇಗವಾಗಿ ಚಲಿಸುವ ವಾಹನಗಳನ್ನು ಬೆನ್ನತ್ತಿ ನಿಲ್ಲಿಸಿ ಸಿಬ್ಬಂದಿಯೇ ವಾಹನ ಜಾಲಾಡಿ ಅಕ್ರಮ ತಡೆಯಬೇಕಾದ ಅನಿವಾರ್ಯ ಇದೆ. ಮೆಟಲ್‌ ಡಿಟೆಕ್ಟರ್‌ ಮಾದರಿಯಲ್ಲಿ ‘ಅಲ್ಕೋಹಾಲ್‌ ಸ್ಕ್ಯಾನರ್‌’ಗಳನ್ನು ವಾಹನಗಳ ತಪಾಸಣೆಗೆ ಅಳವಡಿಸಬೇಕು. ಇದರಿಂದ ಸಮಯದ ಉಳಿತಾಯದ ಜತೆಗೆ ಸಿಬ್ಬಂದಿ ಶ್ರಮ– ಸಮಯ ಉಳಿಯುತ್ತದೆ. ಅಲ್ಲದೇ ದಾಳಿಯಿಂದ ಯಾವುದೇ ವಾಹನ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಅನುಕೂಲವಾಗಿತ್ತದೆ ಎಂಬುದು ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT