ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಚುರುಕು ಪಡೆಯದ ದುರಸ್ತಿ ಪ್ರಕ್ರಿಯೆ; ಈ ಸಲವೂ ಶಿಥಿಲ ಕಟ್ಟಡಗಳಲ್ಲೇ ಓದು

Published 20 ಮೇ 2024, 5:51 IST
Last Updated 20 ಮೇ 2024, 5:51 IST
ಅಕ್ಷರ ಗಾತ್ರ

ಬೆಳಗಾವಿ: ಮಳೆಗಾಲ ಮತ್ತೆ ಬಂದಿದೆ. 2024–25ನೇ ಸಾಲಿನ ತರಗತಿಗಳ ಆರಂಭಕ್ಕೆ ಒಂದೇ ವಾರ ಬಾಕಿ ಇದೆ. ಈ ಮಧ್ಯೆ, ಮುಂಗಾರು ಪೂರ್ವದಲ್ಲಿ ಜೋರಾಗಿ ಸುರಿಯುತ್ತಿರುವ ಮಳೆ– ಗಾಳಿಯಿಂದ ಶಾಲೆಗಳ ಪತ್ರಾಸ್‌ ಹಾರಿಹೋಗುವುದು, ಗೋಡೆ ಕುಸಿಯುವುದು ಸಾಮಾನ್ಯವಾಗಿದೆ.

ಆದರೆ, ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳು ಶಿಥಿಲ ಕೊಠಡಿಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಈ ವರ್ಷವೂ ವಿದ್ಯಾರ್ಥಿಗಳು ಅದೇ ಕೊಠಡಿಗಳಲ್ಲೇ ಆತಂಕದಿಂದ ಓದುವುದು ತಪ್ಪಿಲ್ಲ.

ಇತ್ತೀಚೆಗೆ ಸುರಿದ ಮಳೆ, ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ವಿವಿಧ ಶಾಲೆಗಳಲ್ಲಿ ಅವಾಂತರ ನಡೆಯುತ್ತಲೇ ಇವೆ. ಆದರೆ, ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಹೆಜ್ಜೆಯಿಟ್ಟಿಲ್ಲ.

2019ರಲ್ಲಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಮಲಪ್ರಭಾ, ಘಟಪ್ರಭಾ, ಕೃಷ್ಣಾ ಮತ್ತು ಉಪನದಿಗಳು ಉಕ್ಕಿ ಹರಿದಿದ್ದರಿಂದ ಸರ್ಕಾರಿ ಶಾಲೆಗಳ ಕೊಠಡಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಬಳಿಕ ಮಳೆಯಿಂದಲೂ ಹಲವು ಕೊಠಡಿಗಳು ಹಾಳಾಗಿದ್ದವು. ಆದರೆ, ಈವರೆಗೆ ಹಲವು ಕೊಠಡಿಗಳಿಗೆ ದುರಸ್ತಿ ಕಂಡಿಲ್ಲ. ಮಳೆಗಾಲಕ್ಕೂ ಮುನ್ನ, ಶಿಥಿಲಗೊಂಡ ಶಾಲೆಗಳ ಚಿತ್ರಣ ಬದಲಾಗಬಹುದೆಂಬ ಪಾಲಕರ ನಿರೀಕ್ಷೆಯೂ ಹುಸಿಯಾಗಿದೆ.

ಅರಣ್ಯದಂಚಿನ ಗ್ರಾಮಗಳಲ್ಲಿ ಸಮಸ್ಯೆ:

ಖಾನಾಪುರ: ಬಹುಪಾಲು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಿಂದ ಆವೃತ್ತವಾದ ಖಾನಾಪುರ ತಾಲ್ಲೂಕಿನ 16 ಪ್ರಾಥಮಿಕ ಶಾಲೆಗಳ ಕೊಠಡಿ ಕಳೆದ ವರ್ಷ ಅತಿವೃಷ್ಟಿಯಿಂದ ಶಿಥಿಲಗೊಂಡಿವೆ.

ತಾಲ್ಲೂಕಿನಲ್ಲಿ 328 ಪ್ರಾಥಮಿಕ ಹಾಗೂ 72 ಪ್ರೌಢಶಾಲೆ ಇವೆ. ನರೇಗಾ ಯೋಜನೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನಿಂದ ಹಲವು ಶಾಲೆಗಳು ಅಭಿವೃದ್ಧಿಗೊಂಡಿವೆ. ಆದರೆ, ಶಿಥಿಲಗೊಂಡ ಶಾಲೆಗಳ ಸ್ಥಿತಿ ಸುಧಾರಣೆಯಾಗಿಲ್ಲ.
ಖಾನಾಪುರ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ತಾಲ್ಲೂಕಿನ ಗರ್ಲಗುಂಜಿ, ಮುಡೇವಾಡಿ, ಇಟಗಿ, ಗಂದಿಗವಾಡ, ಬೀಡಿ, ನಂದಗಡ, ಲಿಂಗನಮಠ ಸರ್ಕಾರಿ ಶಾಲೆಗಳ ಕೊಠಡಿ ಶಿಥಿಲವಾಗಿದ್ದು, ಮಕ್ಕಳು ಆತಂಕದಲ್ಲೇ ಓದುವ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿಯಿಂದ ಶಿಥಿಲಗೊಂಡ ವಿವಿಧ ಶಾಲೆಗಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೆಲವು ಶಾಲೆಗಳ ಕೊಠಡಿ ದುರಸ್ತಿ ಮಾಡಲಾಗಿದೆ’ ಎಂದು ಬಿಇಒ ಕಚೇರಿ ಮೂಲಗಳು ತಿಳಿಸಿವೆ.

ಸುರಕ್ಷತೆಯೇ ಇಲ್ಲ

ಸವದತ್ತಿ: ತಾಲ್ಲೂಕಿನಲ್ಲಿ 235 ತರಗತಿ ಕೊಠಡಿಗಳು ಶಿಥಿಲ ಹಂತಕ್ಕೆ ತಲುಪಿವೆ. ಕೆಲವೆಡೆ ಆ ಕೊಠಡಿಗಳನ್ನು ಮುಚ್ಚಿ, ಸುರಕ್ಷಿತವಾದ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಕೆಲವೆಡೆ ಶಿಥಿಲಗೊಂಡ ಕೊಠಡಿಯೇ ಇಂದಿಗೂ ಪಾಠ ಬೋಧನೆಗೂ ಬಳಕೆಯಾಗುತ್ತಿದ್ದು, ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ.

‘192 ಹೊಸ ಕೊಠಡಿಗಳ ನಿರ್ಮಾಣ ಹಾಗೂ ಕೆಲವು ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಪ್ರಸ್ತಾವ ಸಿದ್ಧಪಡಿಸಿ ಕಳುಹಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ತಿಳಿಸಿದರು.

ಕಲಿಕೆಗೆ ಬಳಸದಂತೆ ಸೂಚನೆ

ಮೂಡಲಗಿ: ಇತ್ತೀಚೆಗೆ ಬೀಸಿದ ಬಿರುಗಾಳಿಯಿಂದಾಗಿ ಮೂಡಲಗಿ ವಲಯದ ಪಟಗುಂದಿಯ ಸರ್ಕಾರಿ ಪ್ರಾಥಮಿಕ ಶಾಲೆಯ ತಗಡಿನ ಶೀಟುಗಳಿಗೆ ಹಾನಿಯಾಗಿದೆ.

‘ಮೂಡಲಗಿಯ ಶೈಕ್ಷಣಿಕ ವಲಯದಲ್ಲಿ 30 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ಕಲಿಕೆಗೆ ಬಳಸದಂತೆ ಆಯಾ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ಜೋಕಾನಟ್ಟಿಯ ಗಾಂಧಿ ನಗರದ ಶಾಲೆ, ಹೊನಕುಪ್ಪಿ ಶಾಲೆಯಲ್ಲಿ ಆಲಿಕಲ್ಲು ಮಳೆಗೆ ಹೆಂಚು ಒಡೆದಿವೆ. ಯಾದವಾಡದ ಗಂಡು ಮಕ್ಕಳ ಶಾಲೆ, ಹೊಸಟ್ಟಿ, ಅವರಾದಿಯ ಶಾಲೆ ಕೊಠಡಿಗಳು ಶಿಥಿಲಗೊಂಡಿದ್ದು, ಮರುನಿರ್ಮಾಣ ಆಗಬೇಕಾಗಿದೆ. ಶಿಥಿಲಗೊಂಡಿರುವ ಮತ್ತು ಅಪಾಯದ ಹಂತದಲ್ಲಿರುವ ಕೊಠಡಿಗಳನ್ನು ನೆಲಸಮ ಮಾಡಿ, ಮರು ನಿರ್ಮಾಣ ಮಾಡುವಂತೆ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದರು.

ಬೇಕಿದೆ ಹೆಚ್ಚುವರಿ ಕೊಠಡಿ

ರಾಮದುರ್ಗ: ತಾಲ್ಲೂಕಿನಲ್ಲಿ 213 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಈ ಪೈಕಿ ಹಲವು ಶಾಲೆಗಳ ಕೊಠಡಿ ಶಿಥಿಲವಾಸ್ಥೆ ತಲುಪಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಸಾಲಾಪುರ, ಕೆ.ಚಂದರಗಿ ಮತ್ತು ಲಕನಾಯನಕೊಪ್ಪದಲ್ಲಿ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಅಂತೆಯೇ, 13 ಕೊಠಡಿಗಳು ದುರಸ್ತಿಗೆ ಕಾದಿವೆ.

ಗೋಕಾಕ ಶೈಕ್ಷಣಿಕ ವಲಯದಲ್ಲಿ 288 ಸರ್ಕಾರಿ ಪ್ರಾಥಮಿಕ ಹಾಗೂ 44 ಪ್ರೌಢಶಾಲೆಗಳಿವೆ. 2019ರಲ್ಲಿ ಸುರಿದ ಭಾರಿ ಮಳೆಯಿಂದ ಭಾಗಶಃ ಹಾನಿಗೀಡಾಗಿದ್ದ ಶಾಲೆಗಳನ್ನು ದುರಸ್ತಿ ಮಾಡಲಾಗಿದೆ. ಇದರಿಂದಾಗಿ ಆ ಕಟ್ಟಡಗಳಲ್ಲಿ ಮಕ್ಕಳ ಆತಂಕ ರಹಿತವಾಗಿ ಓದುತ್ತಿದ್ದಾರೆ.
‘ನಮ್ಮಲ್ಲಿ ಮಕ್ಕಳ ಕಲಿಕೆಗೆ ಕೊಠಡಿಗಳ ಕೊರತೆ ಇಲ್ಲ. ಶಿಥಿಲ ಕಟ್ಟಡಗಳಿಂದ ತೊಂದರೆಯಾಗಿಲ್ಲ’ ಎನ್ನುತ್ತಾರೆ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ.

ಬೈಲಹೊಂಗಲ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿರುವ ಬಹುಪಾಲು ಶಾಲೆಗಳು ದಯನೀಯ ಸ್ಥಿತಿಯಲ್ಲಿವೆ. ಬೈಲಹೊಂಗಲ ವಲಯದ 45ಕ್ಕೂ ಅಧಿಕ ಶಾಲೆಗಳ ಕೊಠಡಿ, ಚಾವಣಿ, ಗೋಡೆ ಒಡೆದಿದ್ದು, ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. 30 ಕೊಠಡಿಗಳ ದುರಸ್ತಿ ಕಾರ್ಯ ನಡೆದಿದೆ. ಮತ್ತಷ್ಟು ಶಾಲೆಗಳ ದುರಸ್ತಿಗೆ ಅನುದಾನ ಕೋರಿ, ಶಿಕ್ಷಣ ಇಲಾಖೆಯು ತಾಲ್ಲೂಕು ಪಂಚಾಯ್ತಿ ಕಚೇರಿಗೆ ಕ್ರಿಯಾ ಯೋಜನೆ ಸಲ್ಲಿಸಿದೆ. 

(‍ಪೂರಕ ಮಾಹಿತಿ: ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ರಾಮೇಶ್ವರ ಕಲ್ಯಾಣಶೆಟ್ಟಿ, ಬಾಲಶೇಖರ ಬಂದಿ, ಚಂದ್ರಶೇಖರ ಚಿನಕೇಕರ, ರವಿ ಹುಲಕುಂದ)

ದುರಸ್ತಿಗೆ ಕಾದಿರುವ ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ
ದುರಸ್ತಿಗೆ ಕಾದಿರುವ ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ
ನಿಪ್ಪಾಣಿಯ ಸಿಟಿ ಮುನ್ಸಿಪಲ್‌ ಕೌನ್ಸಿಲ್‌ ಆಂಗ್ಲ ಮಾಧ್ಯಮ ಶಾಲೆಯ ಪತ್ರಾಸ್‌ಗಳು ಹಾರಿಹೋಗಿವೆ
ನಿಪ್ಪಾಣಿಯ ಸಿಟಿ ಮುನ್ಸಿಪಲ್‌ ಕೌನ್ಸಿಲ್‌ ಆಂಗ್ಲ ಮಾಧ್ಯಮ ಶಾಲೆಯ ಪತ್ರಾಸ್‌ಗಳು ಹಾರಿಹೋಗಿವೆ
ದುರಸ್ತಿಗೆ ಕಾದಿರುವ ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ
ದುರಸ್ತಿಗೆ ಕಾದಿರುವ ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ
ಗಾಳಿ–ಮಳೆಯಿಂದ ಹಾನಿ
ಕಳೆದ ವರ್ಷದ ಮಳೆಗಾಲದಲ್ಲಿ ನಿಪ್ಪಾಣಿ ತಾಲ್ಲೂಕಿನಲ್ಲಿ 77 ಶಾಲೆಗಳ 168 ಕೊಠಡಿ ಶಿಥಿಲಗೊಂಡಿದ್ದವು. ಈ ವರ್ಷ ಮುಂಗಾರು ಪೂರ್ವ ಮಳೆ ಮಳೆ ಮತ್ತು ಜೋರಾಗಿ ಬೀಸುತ್ತಿರುವ ಗಾಳಿಯಿಂದ 9 ಶಾಲೆಗಳಿಗೆ ಹಾನಿಯಾಗಿದೆ. ಮೇ 12ರಂದು ಸುರಿದ ಮಳೆ ಗಾಳಿಯಿಂದ ವಿವಿಧ ಶಾಲೆಗಳ ಪತ್ರಾಸ್‌ ಹಾರಿಹೋಗಿವೆ. ಇಲ್ಲಿನ ಬಿರೋಬಾ ಮಾಳನಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಶಿಥಿಲಗೊಂಡಿದೆ. ವಿದ್ಯಾಮಂದಿರ ಶಾಲೆಯ ಪತ್ರಾಸ್‌ ಸಹಿತವಾಗಿ ಶೆಡ್‌ ಹಾರಿ ಹೋಗಿದೆ. ಸಿಟಿ ಮುನ್ಸಿಪಲ್‌ ಕೌನ್ಸಿಲ್‌ ಆಂಗ್ಲ ಮಾಧ್ಯಮ ಶಾಲೆಯ ಪತ್ರಾಸ್‌ಗಳು ಹಾರಿಹೋಗಿದ್ದು ತಾಲ್ಲೂಕಿನ ಗವಾಣದ ಪ್ರಾಥಮಿಕ ಶಾಲೆಯ ಆವರಣ ಗೋಡೆ ಬಿದ್ದಿದೆ. ಹೊಸ ಮರಾಠಿ ವಿದ್ಯಾಲಯದ ಎರಡನೇ ಮಹಡಿಯಲ್ಲಿನ ತರಗತಿ ಕೊಠಡಿಯ ಗೋಡೆ ಬಿದ್ದು ಪೀಠೋಪಕರಣಗಳು ನಾಶಗೊಂಡಿವೆ. ಮಾಣಕಾಪುರದ ಪ್ರಾಥಮಿಕ ಶಾಲೆಯ ಒಂದು ಗೋಡೆ ಕುಸಿದಿದೆ.ಚಿಕ್ಕೋಡಿ ವಲಯಕ್ಕೆ ಒಳಪಡುವ ಪಟ್ಟಣಕುಡಿಯ ಸರ್ಕಾರಿ ಶಾಲೆಯ ಚಾವಣಿ ತಗಡಗಳು ಇತ್ತೀಚೆಗೆ ಸುರಿದ ಮಳೆ ಗಾಳಿಯಿಂದಾಗಿ ಹಾರಿ ಹೋಗಿವೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.
36 ಹೊಸ ಕೊಠಡಿಗಳಿಗೆ ಬೇಡಿಕೆ
‘ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ 91 ಕೊಠಡಿಗಳು ದುರಸ್ತಿಗೆ ಕಾದಿವೆ. ಇಲ್ಲೇನೂ ಸಮಸ್ಯೆ ಅಷ್ಟೊಂದು ದೊಡ್ಡದಾಗಿಲ್ಲ. ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ 36 ಹೊಸ ಕೊಠಡಿಗಳಿಗೆ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ. ‘ಕುಲವಳ್ಳಿಯ ಒಂಬತ್ತು ಹಳ್ಳಿಗಳು ಸೇರಿ 14 ಎಂ.ಕೆ.ಹುಬ್ಬಳ್ಳಿಯ 11 ಅಂಬಡಗಟ್ಟಿ 6 ಹೂಲಿಕಟ್ಟಿ ಚನ್ನಮ್ಮನ ಕಿತ್ತೂರಿನ ತಲಾ 5 ತಿಗಡೊಳ್ಳಿ ದೇವಗಾಂವ ಹೊಸ ಕಾದವರಳ್ಳಿ ದೇವರಶೀಗಿಹಳ್ಳಿಯ ತಲಾ 4 ತುರಮರಿ ಮಲ್ಲಾಪುರ ಕೆ.ಎ. ಮರಿಗೇರಿ ದಾಸ್ತಿಕೊಪ್ಪದ ತಲಾ 3 ದೇಗುಲಹಳ್ಳಿ ಬಸರಖೋಡ ಗಿರಿಯಾಲ ಕೆ.ಎ. ಹುಣಸೀಕಟ್ಟಿ ಕಾದರವಳ್ಳಿ ಅವರಾದಿ ಬಸಾಪುರ ನಿಚ್ಚಣಕಿ ಚನ್ನಾಪುರ ಕೆ.ಎ. ವೀರಾಪುರದ ತಲಾ 2 ಚಿಕ್ಕನಂದಿಹಳ್ಳಿ ಅಮರಾಪುರದ ತಲಾ 1 ಕೊಠಡಿ ಹೆಚ್ಚು ದುರಸ್ತಿಗೆ ಕಾದಿವೆ’ ಎಂದು ಹೇಳಿವೆ.
ಶಿಥಿಲಗೊಂಡ ಕೊಠಡಿಗಳನ್ನು ನೆಲಸಮ ಮಾಡಿ ಹೊಸ ಕಟ್ಟಡಗಳ ಮರುನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿವಿಧ ಅನುದಾನಗಳಡಿ ಕೆಲವೆಡೆ ಅಭಿವೃದ್ಧಿ ಕಾಮಗಾರಿ ನಡೆದಿವೆ. ಈ ಮಳೆಗಾಲದಲ್ಲಿ ಮಕ್ಕಳಿಗೆ ಯಾವ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ.
–ಮೋಹನಕುಮಾರ ಹಂಚಾಟೆ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ
ಚಿಕ್ಕೋಡಿ ವಲಯದಲ್ಲಿ ಶಿಥಿಲಗೊಂಡ ಕೊಠಡಿಗಳಲ್ಲಿ ತರಗತಿ ನಡೆಸುತ್ತಿಲ್ಲ. ಸಣ್ಣ–ಪುಟ್ಟ ದುರಸ್ತಿ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು.
-ಬಿ.ಎ.ಮೇಕನಮರಡಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕೋಡಿ
ಕಳೆದ ಮಳೆಗಾಲದಲ್ಲಿ ಹೆಚ್ಚು ಸೋರುತ್ತಿದ್ದ ಕೊಠಡಿಗಳ ಮೇಲೆ ತಗಡಿನ ಶೀಟುಗಳನ್ನು ಹಾಕಿ ನೀರು ಸೋರದಂತೆ ಕ್ರಮ ತೆಗೆದುಕೊಳ್ಳಲಾಗಿದೆ.
–ಗಾಯತ್ರಿ ಅಜ್ಜನ್ನವರ ಶಿಕ್ಷಣಾಧಿಕಾರಿ ಚನ್ನಮ್ಮನ ಕಿತ್ತೂರು
ಎಷ್ಟು ಕೊಠಡಿಗಳು ಶಿಥಿಲ?
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯ 542 ಪ್ರೌಢ ವಿಭಾಗದ 44 ಸೇರಿದಂತೆ 586 ತರಗತಿ ಕೊಠಡಿಗಳು ಶಿಥಿಲಗೊಂಡಿವೆ. ಈ ಪೈಕಿ ಸವದತ್ತಿ ವಲಯದಲ್ಲೇ ಅತಿಹೆಚ್ಚು(235) ಕೊಠಡಿಗಳಿವೆ.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯ 482 ಪ್ರೌಢ ವಿಭಾಗದ 41 ಸೇರಿದಂತೆ 523 ತರಗತಿ ಕೊಠಡಿಗಳು ಶಿಥಿಲಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT