ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಖಾನಟ್ಟಿಯ ಶಿವಲಿಂಗೇಶ್ವರ ರಥೋತ್ಸವ ಇಂದು 

Published 20 ಮೇ 2024, 5:52 IST
Last Updated 20 ಮೇ 2024, 5:52 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಸಿದ್ಧಿ ಪುರುಷ ಜಗದ್ಗುರು ಶಿವಲಿಂಗೇಶ್ವರರ ಜಾತ್ರೆ ಮತ್ತು ರಥೋತ್ಸವವು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಅವರ ಸನ್ನಿಧಿಯಲ್ಲಿ ಮೇ 20ರಂದು ಸಂಜೆ 5ಕ್ಕೆ ನಡೆಯಲಿದೆ.

ವರ್ಷದಲ್ಲಿ ಮೂರು ಬಾರಿ ಜಾತ್ರೆ ನಡೆಯುವ ವಿಶಿಷ್ಟ ಸಂಪ್ರದಾಯವನ್ನು ಖಾನಟ್ಟಿ ಶಿವಲಿಂಗೇಶ್ವರ ದೇವಸ್ಥಾನ ಹೊಂದಿದೆ. ಶ್ರಾವಣ ಮಾಸ, ಶಿವರಾತ್ರಿ ದಿನಗಳಂದು ಜಾತ್ರೆ ನಡೆಯುತ್ತದೆ. ಬಸವ ಜಯಂತಿ ನಂತರ ಬರುವ ಸೋಮವಾರದಂದು ನಡೆಯುವ ಜಾತ್ರೆಯು ಅವಿಗಳಲ್ಲಿ ಪ್ರಮುಖವೆನಿಸಿದೆ.

ಹಿನ್ನೆಲೆ: ಕ್ರಿ.ಶ. 1645ರಲ್ಲಿ ಕಲಬುರ್ಗಿ ಬಳಿಯ ಕೊಳ್ಳುರು ಗ್ರಾಮದಲ್ಲಿ ಜನಿಸಿದ ಶಿವಲಿಂಗರರು ಲೋಕ ಸಂಚಾರ ಮಾಡುತ್ತಾ ಗೋಕಾಕ ಬಳಿಯ ಸಾವಳಗಿ ಘಟಪ್ರಭಾ ನದಿ ತಟ್ಟದಲ್ಲಿ ತಪಸ್ಸು ಮಾಡಿ ಅಲ್ಲಿಯೇ ನೆಲೆಸಿದರು. ಅನೇಕ ಪವಾಡಗಳ ಮೂಲಕ ಶಿವಲಿಂಗೇಶ್ವರರು ದೈವಾಂಶ ಮಹಿಮಾ ಪುರುಷರಾಗಿ ಭಕ್ತರ ಹೃದಯದಲ್ಲಿ ನೆಲೆಸಿದರು. ಶಿವಲಿಂಗೇಶ್ವರರು ತಮ್ಮ ಲೋಕ ಸಂಚಾರದ ಮಧ್ಯದಲ್ಲಿ ವಾಸ್ತವ್ಯ ಮಾಡಿದ್ದ ಸ್ಥಳವೇ ಈಗಿನ ಖಾನಟ್ಟಿಯ ಕ್ಷೇತ್ರವಾಗಿದೆ.

ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಶಿವಲಿಂಗೇಶ್ವರರ 360 ಮಠಗಳು, 1100 ಗದ್ಗುಗೆಗಳು ಇರುವ ಬಗ್ಗೆ ಡಾ. ಚಂದ್ರಶೇಖರ ಕಂಬಾರ ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಅಂಥ ಗದ್ಗುಗೆ ಹೊಂದಿರುವ ಸ್ಥಳಗಳಲ್ಲಿ ಖಾನಟ್ಟಿಯೂ ಒಂದಾಗಿದೆ. ಕಲಬುರ್ಗಿಯ ಖ್ವಾಜಾ ಬಂದೇನವಾಜ ವಲಿ ಹಾಗೂ ಶಿವಲಿಂಗೇಶ್ವರರ ಅಂದಿನ ನಿಕಟ ಬಾಂಧವ್ಯ ಇಂದಿಗೂ ಭಾವೈಕ್ಯತೆಯನ್ನು ಬಿಂಬಿಸುತ್ತದೆ. ಹೀಗಾಗಿ ಶಿವಲಿಂಗೇಶ್ವರರು ನೆಲೆಸಿರುವ ಎಲ್ಲ ಕ್ಷೇತ್ರಗಳು ಸರ್ವಧರ್ಮಗಳ ಸಾಮರಸ್ಯಕ್ಕೆ ಹೆಸರಾಗಿವೆ.

ಖಾನಟ್ಟಿ ಗ್ರಾಮವೂ ಅಂಥ ಸಾಮರಸ್ಯದ ತಾಣವಾಗಿದ್ದು, ಎಲ್ಲ ಧರ್ಮದ ಭಕ್ತರು ಸೇರಿ ಈಚೆಗೆ ಖಾನಟ್ಟಿ ಶಿವಲಿಂಗೇಶ್ವರ ದೇವಸ್ಥಾನಕ್ಕೆ ₹1.20 ಕೋಟಿ ವೆಚ್ಚದಲ್ಲಿ ದ್ವಾರಬಾಗಿಲನ್ನು ನಿರ್ಮಿಸಿದ್ದು ಸ್ಮರಣೀಯವಾಗಿದೆ. ‘ನಂಬಿದ ಭಕ್ತರನ್ನು ಎಂದಿಗೂ ಶಿವಲಿಂಗೇಶ್ವರ ಕೈಬಿಡಲಾರ’ ಎನ್ನುವ ಪ್ರತೀತಿ ಇದ್ದು, ಭಕ್ತರ ಸಂಖ್ಯೆ ಅಪಾರವಾಗಿದೆ.

ರಥೋತ್ಸವ ಅಂಗವಾಗಿ ಸೋಮವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಶಿವಲಿಂಗೇಶ್ವರರ ಮೂಲ ಗದ್ಗುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆಗಳು ನಡೆಯುವವು. ವಿವಿಧ ವಾದ್ಯಗಳೊಂದಿಗೆ ಕಳಸಾರೋಹಣ ನಡೆಯಲಿದೆ. ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಪಾಲಕಿಗಳ ಆಗಮನದ ನಂತರ ರಥೋತ್ಸವ ನಡೆಯಲಿದೆ.

ಜಾತ್ರೆಯ ಅಂಗವಾಗಿ ಚಿಕ್ಕಾಲಗುಡ್ಡದ ‘ತಾಯಿಯ ಋಣ ಮಣ್ಣಿನ ಗುಣ’ ನಾಟಕ ಪ್ರದರ್ಶನ ನಡೆಯಲಿದೆ. ಮೇ 24ರಂದು ರಾತ್ರಿ ಕಳಸವನ್ನು ಇಳಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT