ಸೋಮವಾರ, ಜೂನ್ 21, 2021
28 °C
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ

ಕೊರೊನಾ ನಿಯಂತ್ರಣ: ಗ್ರಾ,ಪಂ.ಗಳಿಗೆ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಗ್ರಾಮಗಳಲ್ಲಿ ಕೊರೊನಾ ಸರಪಳಿ ತುಂಡರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇಲ್ಲಿ ಗುರುವಾರ ಅಧಿಕಾರಿಗಳ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ತಲೆದೋರಿರುವ ಆಮ್ಲಜನಕ ಕೊರತೆ ನಿವಾರಣೆಗೆ ಕ್ರಮ ವಹಿಸಲಾಗಿದೆ. 20 ಟನ್ ಆಮ್ಲಜನಕ ಹೊತ್ತ ಟ್ಯಾಂಕರ್ ಶುಕ್ರವಾರದವರೆಗೆ ಬಂದು ತಲುಪಲಿದೆ. 70 ಆಮ್ಲಜನಕ ಸಿಲಿಂಡರ್‌ಗಳು ಕೂಡ ಲಭ್ಯವಾಗಲಿವೆ’ ಎಂದು ಹೇಳಿದರು.

‘ಬಡವರು ₹ 100ಕ್ಕೂ ಪರದಾಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸರ್ಕಾರವು ₹ 2ಸಾವಿರ, ₹ 3ಸಾವಿರ ಹಾಗೂ ₹ 4 ಸಾವಿರವರೆಗೂ ಆರ್ಥಿಕ ಪರಿಹಾರ ನೀಡಿದೆ. ಕೇಂದ್ರದಿಂದ 10 ಕೆ.ಜಿ. ಹಾಗೂ ರಾಜ್ಯದಿಂದ 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ’ ಎಂದರು.

‘ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣ ತಡೆಗೆ 15 ದಿನ ಕಟ್ಟುನಿಟ್ಟಿನ ಲಾಕ್‍ಡೌನ್ ಆಗಬೇಕಿದೆ. ಈ ನಿಟ್ಟಿನಲ್ಲಿ ಪಿಡಿಒಗಳಿಗೆ ಅಧಿಕಾರ ನೀಡಲಾಗಿದೆ. ಸೋಂಕಿತರನ್ನು ವಸತಿ ಶಾಲೆಗಳಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಿಗೆ ಸೇರಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ತಾಲ್ಲೂಕು ಕೇಂದ್ರಗಳಲ್ಲಿ 50 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಗೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಶೇ. 50ರಷ್ಟು ಹಾಸಿಗೆಗಳನ್ನು ನೀಡಬೇಕು. ಸೂಚನೆಯಂತೆ ನಡೆಯದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಕೆಎಲ್‍ಇ ಸಂಸ್ಥೆಯ ಪ್ರಭಾಕರ ಕೋರೆ ಅವರೊಂದಿಗೂ ಮಾತನಾಡಿದ್ದು, ಕೈಜೋಡಿಸಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.

‘ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ವಿರೋಧಪಕ್ಷಗಳು ಆಧಾರವಿಲ್ಲದ ಆರೋಪಗಳಲ್ಲಿ ತೊಡಗಿವೆ’ ಎಂದು ತಿರುಗೇಟು ನೀಡಿದರು. ‘ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಕಾಂಗ್ರೆಸ್‍ನವರು ಉತ್ತಮ ಸಲಹೆ ಕೊಟ್ಟರೆ, ಒಳ್ಳೆಯ ವಿಚಾರ ಹಂಚಿಕೊಂಡರೆ ಸ್ವಾಗತಿಸುತ್ತೇವೆ. ಅದು ಬಿಟ್ಟು ಟೀಕೆಗಿಳಿದರೆ ಬೇಜವಾಬ್ದಾರಿ ಎನ್ನುತ್ತೇವೆ’ ಎಂದು ಪ್ರತ್ಯುತ್ತರ ನೀಡಿದರು.

‘ಕಳೆದ ಬಾರಿಯ ಪ್ಯಾಕೇಜ್ ಹಣ ಯಾರಿಗೂ ಸಿಕ್ಕಿಲ್ಲ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಅದನ್ನು ಸಾಬೀತುಪಡಿಸಿದರೆ ಏನು ಶಿಕ್ಷೆ ಕೊಡುತ್ತಾರೆಯೋ ಅನುಭವಿಸಲು ಸಿದ್ಧನಿದ್ದೇನೆ’ ಎಂದು ಸವಾಲು ಹಾಕಿದರು. ‘ಖಾತೆ ಇಲ್ಲದೆ, ಆಧಾರ್‌ ಜೋಡಣೆಯಾಗದೆ ಶೇ.5ರಷ್ಟು ಜನರಿಗೆ ಸಮಸ್ಯೆ ಆಗಿರಬಹುದು. ಆದರೆ, ಶೇ.95ರಷ್ಟು ಮಂದಿಗೆ ಪ್ಯಾಕೇಜ್ ಲಾಭ ಸಿಕ್ಕಿದೆ. ಬಾಗಲಕೋಟೆ ಜಿಲ್ಲೆಗಿಂತಲೂ ಬೆಳಗಾವಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಒದಗಿಸಲು ಪ್ರಯತ್ನ ಮಾಡಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು