ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ‘ಆದರ್ಶ’ ಪಥದಲ್ಲಿ 3 ಪಿಯು ಕಾಲೇಜು

ಶೈಕ್ಷಣಿಕ ವರ್ಷದಿಂದ ಖಾನಾಪುರ, ಬೈಲಹೊಂಗಲ, ಸವದತ್ತಿಯ ಸರ್ಕಾರಿ ಪಿಯು ಕಾಲೇಜು ಉನ್ನತೀಕರಣ
Published 1 ಜೂನ್ 2024, 5:28 IST
Last Updated 1 ಜೂನ್ 2024, 5:28 IST
ಅಕ್ಷರ ಗಾತ್ರ

ಬೆಳಗಾವಿ: ವಿಜ್ಞಾನ ಸಂಯೋಜನೆ ಹೊಂದಿರುವ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಇದೇ ಶೈಕ್ಷಣಿಕ ವರ್ಷದಿಂದ ‘ಆದರ್ಶ ಪದವಿ ಪೂರ್ವ ಕಾಲೇಜು’ಗಳಾಗಿ ರಾಜ್ಯ ಸರ್ಕಾರ ಉನ್ನತೀಕರಿಸಿದೆ. ಅತ್ಯಾಧುನಿಕ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಆಧಾರಿತ ಬೋಧನಾ ಪರಿಕರ ಮತ್ತಿತರ ಸೌಲಭ್ಯಕ್ಕಾಗಿ ಅವುಗಳಿಗೆ ವಿಶೇಷ ಅನುದಾನ ನೀಡಲಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 30 ಸರ್ಕಾರಿ ಪಿಯು ಕಾಲೇಜುಗಳಿವೆ. ಅದರಲ್ಲಿ 18 ಕಾಲೇಜುಗಳಲ್ಲಿ ವಿಜ್ಞಾನ ವಿಭಾಗವಿದೆ. ಈ ಪೈಕಿ ಬೈಲಹೊಂಗಲ, ಸವದತ್ತಿ ಮತ್ತು ಖಾನಾಪುರದ ಕಾಲೇಜುಗಳು ‘ಆದರ್ಶ ಪಿಯು ಕಾಲೇಜು’ಗಳಾಗಿ ಉನ್ನತೀಕರಣಗೊಂಡಿವೆ. ಇವು ವಿವಿಧ ವೃತ್ತಿಪರ ಕೋರ್ಸ್‌ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಿವೆ.

ಡಿಜಿಟಲ್‌ ಲೈಬ್ರರಿಗೆ ಬಳಸಲಿದ್ದೇವೆ: ‘ನಮ್ಮಲ್ಲಿ ಕಳೆದ ವರ್ಷ ಪಿಯು ವಿಜ್ಞಾನದಲ್ಲಿ 1,042 ವಿದ್ಯಾರ್ಥಿಗಳಿದ್ದರು. ಈ ಬಾರಿ ಆ ಸಂಖ್ಯೆ 1,140ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಈಗ ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ ವಿಷಯದ ತಲಾ ಎರಡು ಪ್ರಯೋಗಾಲಯ, ಕಂಪ್ಯೂಟರ್‌ ಸೈನ್ಸ್‌ನ ಒಂದು ಪ್ರಯೋಗಾಲಯವಿದೆ. ಈಗ ಬರಲಿರುವ ವಿಶೇಷ ಅನುದಾನವನ್ನು ಡಿಜಿಟಲ್‌ ಲೈಬ್ರರಿ ನಿರ್ಮಾಣಕ್ಕೆ ಬಳಸಿ ಕೊಳ್ಳಲು ಯೋಜಿಸಿದ್ದೇವೆ’ ಎಂದು ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಚಾರ್ಯ ಬಿ.ಎಂ.ಕೊಳವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಕಳೆದ ವರ್ಷ 106 ವಿದ್ಯಾರ್ಥಿಗಳು ಓದುತ್ತಿದ್ದರು. ಈಗ ಹೆಚ್ಚಿನ ಸೌಕರ್ಯ ಸಿಗುವ ಕಾರಣ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡಲಿದ್ದೇವೆ. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ವಾಗಿ ಹೆಚ್ಚಲಿದೆ’ ಎನ್ನುತ್ತಾರೆ ಸವದತ್ತಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ವಿ.ಬಿ.ಕೋಳೇಕರ.

‘ಖಾನಾಪುರದ ಸರ್ಕಾರಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 120 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಾಲೇಜಿಗೆ ಸೇರಿದ ನಾಲ್ಕು ಕೊಠಡಿಗಳಿವೆ. ಈ ಪೈಕಿ ಮೂರು ಕೊಠಡಿ ಗಳಿಗೆ ಬಣ್ಣ ಬಳಿದು, ಸುಸಜ್ಜಿತವಾದ ಪ್ರಯೋಗಾಲಯ ನಿರ್ಮಿಸಿದ್ದೇವೆ. ಪ್ರೌಢಶಾಲೆ ವಿಭಾಗದ ಕಟ್ಟಡದಲ್ಲಿ ಕಂಪ್ಯೂಟರ್‌ ಸೈನ್ಸ್‌ ಪ್ರಯೋಗಾಲಯ ಮಾಡಲು ಯೋಜಿಸಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುತ್ತೇವೆ’ ಎಂದು ಪ್ರಾಚಾರ್ಯ ಸಿಕಂದರ್‌ ಅಕ್ಕಿವಾಟ ಹೇಳಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ನಿರಾಸೆ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 31 ಸರ್ಕಾರಿ ಪಿಯು ಕಾಲೇಜುಗಳಿವೆ. ಈ ಪೈಕಿ 17 ಕಡೆ ವಿಜ್ಞಾನ ವಿಭಾಗಗಳಿವೆ. ಆದರೆ, ಇಲ್ಲಿ ಒಂದು ಕಾಲೇಜನ್ನು ಸಹ ಆದರ್ಶ ಪಿಯು ಕಾಲೇಜಾಗಿ ಉನ್ನತೀಕರಿಸದಿರುವುದು ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT