ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಬವಣೆ: ತತ್ತರಿಸಿದ ಮಾಸಗೊಂಡನಹಟ್ಟಿ ಗ್ರಾಮದ ಮಹಿಳೆಯರು

Published 20 ಮಾರ್ಚ್ 2024, 6:40 IST
Last Updated 20 ಮಾರ್ಚ್ 2024, 6:40 IST
ಅಕ್ಷರ ಗಾತ್ರ

ಮಾಸಗೊಂಡನಹಟ್ಟಿ (ಬೆಳಗಾವಿ ತಾ): ನಮಗ್‌ ಟ್ಯಾಂಕರ್‌ ಮೂಲಕ ದಿನಕ್ಕ ಎಂಟು ಕೊಡ ನೀರು ಕೊಡಾತಾರಿ. ಆದ್ರ, ನಮ್ಮನ್ಯಾಗ ಮಕ್ಳು ಹೆಚ್ಚು ಅದಾವ್‌. ದನಗೋಳು ಅದಾವು. ಹಿಂಗಿರುವಾಗ, ಇಷ್ಟ ನೀರು ಪೂರ್ತಿ ಮನೀಗೆ ಸಾಲತೈತಿ ಏನ್‌ ನೀವ ಹೇಳ್ರಿ...

ಗ್ರಾಮಕ್ಕೆ ಮಂಗಳವಾರ ಮಧ್ಯಾಹ್ನ ಆಗಮಿಸಿದ ಟ್ಯಾಂಕರ್‌ ನೀರನ್ನು ಗಡಿಬಿಡಿಯಲ್ಲೇ ತುಂಬಿಕೊಳ್ಳುತ್ತಿದ್ದ ವೃದ್ಧೆ ಬಾಳವ್ವ ಪಾಟೀಲ ‘ಪ್ರಜಾವಾಣಿ’ ಮುಂದೆ ಹೀಗೆ ಸಮಸ್ಯೆ ತೋಡಿಕೊಂಡರು.

ಪಕ್ಕದಲ್ಲಿದ್ದ ಮತ್ತೊಬ್ಬ ಮಹಿಳೆ ತುಳಸಾಬಾಯಿ ಕುಂಡೇಕರ್‌, ‘ಒಂದು ಕುಟುಂಬಕ್ಕೆ ಲೆಕ್ಕ ಹಾಕಿ ಎಂಟು ಕೊಡ ನೀರು ಕೊಡುತ್ತಿದ್ದಾರೆ. ಕೆಲವರ ಮನೆಯಲ್ಲಿ ಎಂಟಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಅಂಥ ಕುಟುಂಬಗಳಲ್ಲಿ ಒಬ್ಬೊಬ್ಬರಿಗೆ ಒಂದ ಕೊಡ ನೀರೂ ಸಿಗಲ್ಲ. ಅವರೆಲ್ಲ ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

‘ಗ್ರಾಮ ಪಂಚಾಯಿತಿಯವರು ಟ್ಯಾಂಕರ್‌ ಮೂಲಕ ಪೂರೈಸುತ್ತಿರುವ ನೀರು ಏತಕ್ಕೂ ಸಾಕಾಗುವುದಿಲ್ಲ. ಖಾಸಗಿಯಾಗಿ ನಾವೇ ಟ್ಯಾಂಕರ್‌ ಮೂಲಕ ನೀರು ಖರೀದಿಸುತ್ತಿದ್ದೇವೆ. ಒಂದು ಟ್ಯಾಂಕರ್‌ಗೆ ₹600 ದರವಿದೆ. ಶ್ರಮವಹಿಸಿ ದುಡಿದ ಹಣವನ್ನೆಲ್ಲ ನೀರಿಗೆ ವ್ಯಯಿಸುವಂತಾಗಿದೆ’ ಎಂದು ಇತರೆ ಮಹಿಳೆಯರು ದೂರಿದರು.

‘ನಾವು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಗ್ರಾಮ ಪಂಚಾಯಿತಿಗೆ ಹೇಳಿ ಹೇಳಿ ಸಾಕಾಗಿದೆ. ಆದರೆ, ಯಾರೂ ಗಮನ ಹರಿಸುತ್ತಿಲ್ಲ’ ಎಂದು ಆಕ್ರೋಶದಿಂದ ನುಡಿದರು.

ಧಾಮಣೆ ಗ್ರಾಮ ಪಂಚಾಯಿತಿಗೆ ಸೇರಿದ ಈ ಊರು 1,200 ಜನಸಂಖ್ಯೆ ಹೊಂದಿದೆ. ಇಲ್ಲಿ ಪ್ರಮುಖ ಜಲಮೂಲಗಳಿಲ್ಲ. ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿಯಿಂದ ಕೊರೆಯಿಸಿದ ಕೊಳವೆಬಾವಿಗಳೂ ವಿಫಲವಾಗಿದೆ. ಹಾಗಾಗಿ ಗ್ರಾಮಸ್ಥರು ಜಲಬವಣೆಯಿಂದ ತತ್ತರಿಸಿದ್ದಾರೆ. ದಿನೇದಿನೆ ಸಮಸ್ಯೆ ಬಿಗಡಾಯಿಸುತ್ತಿರುವ ಕಾರಣ, ನೀರಿಗೆ ಹಾಹಾಕಾರ ಪಡುತ್ತಿದ್ದಾರೆ. ಜಲಜೀವನ ಮಿಷನ್‌ ಯೋಜನೆಯಡಿ ಪ್ರತಿ ಮನೆ ಮುಂದೆ ನಲ್ಲಿ ಅಳವಡಿಸಲಾಗಿದೆ. ಅವುಗಳಲ್ಲಿ ನೀರು ಬರುವುದೇ ಅಪರೂಪ.

‘ಹಲವು ವರ್ಷಗಳಿಂದಲೂ ಜಲಸಂಕಟ ನಮ್ಮನ್ನು ಕಾಡುತ್ತಲೇ ಇದೆ. ಈ ವರ್ಷವಂತೂ ಪರಿಸ್ಥಿತಿ ಹೇಳತೀರದಾಗಿದೆ’ ಎಂದರು ಗ್ರಾಮಸ್ಥ ಭೀಮಸೇನ ಪಾಟೀಲ.

ಬೆಳಗಾವಿ ತಾಲ್ಲೂಕಿನ ಮಾಸಗೊಂಡನಹಟ್ಟಿಯಲ್ಲಿ ಗ್ರಾಮ ಪಂಚಾಯ್ತಿಯವರು ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವುದು
ಬೆಳಗಾವಿ ತಾಲ್ಲೂಕಿನ ಮಾಸಗೊಂಡನಹಟ್ಟಿಯಲ್ಲಿ ಗ್ರಾಮ ಪಂಚಾಯ್ತಿಯವರು ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವುದು
ಬಾಳವ್ವ ಪಾಟೀಲ
ಬಾಳವ್ವ ಪಾಟೀಲ
ಪುಷ್ಪಾ
ಪುಷ್ಪಾ

ನೀರಿನ ಸಮಸ್ಯೆಯಿಂದ ನಾವು ಒದ್ದಾಡುತ್ತಿದ್ದೇವೆ. ಬಿಸಿಲಲ್ಲಿ ಬೆವರು ಹರಿಸಿ ದುಡಿದ ತಂದ ಹಣವನ್ನೆಲ್ಲ ಟ್ಯಾಂಕರ್‌ ನೀರು ಖರೀದಿಸಲು ಕೊಡುವಂತಾಗಿದೆ

-ಬಾಳವ್ವ ಪಾಟೀಲ ಗ್ರಾಮಸ್ಥರು

ನಾವು ಜನರಿಗೆ ಎಲ್ಲ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ನಮಗೆ ಕುಡಿಯಲು ನೀರು ಸಿಗುತ್ತಿಲ್ಲ. ಸೌಲಭ್ಯ ಕಾಗದದಲ್ಲಿ ಮಾತ್ರ ಆಗಿದೆ

-ಪುಷ್ಪಾ ಪಾಟೀಲ ಗ್ರಾಮಸ್ಥರು

ಈ ಹಿಂದೆ ಕೊರೆಯಿಸಿದ್ದ ಕೊಳವೆಬಾವಿಗಳೆಲ್ಲ ವಿಫಲವಾಗಿವೆ. ತುರ್ತಾಗಿ ಗ್ರಾಮಸ್ಥರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದೇವೆ

-ಎಸ್‌.ಉಷಾ ಪಿಡಿಒ ಧಾಮಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT