ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ| ಮತ್ತೆ ಪ್ರತಿಭಟನೆ: ಸಿಗುವುದೇ ಸ್ಪಂದನೆ?

ಬೇಡಿಕೆ ಈಡೇರಿಕೆಗೆ ಹೋರಾಟಗಾರರ ಒತ್ತಾಯ
Published 28 ನವೆಂಬರ್ 2023, 4:51 IST
Last Updated 28 ನವೆಂಬರ್ 2023, 4:51 IST
ಅಕ್ಷರ ಗಾತ್ರ

ಬೆಳಗಾವಿ: ‍ಪ್ರತಿ ವರ್ಷ ಇಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ಸರಣಿ ಪ್ರತಿಭಟನೆ ಜರುಗುತ್ತವೆ. ಕೆಲ ಸಂದರ್ಭಗಳಲ್ಲಿ ಸುವರ್ಣ ವಿಧಾನಸೌಧದ ಒಳಗಿನ ಕಲಾಪಕ್ಕಿಂತ ಹೊರಗಡೆಯ ಹೋರಾಟ ಹೆಚ್ಚು ‘ಸದ್ದು’ ಮಾಡುತ್ತವೆ. ಆದರೆ,ಬಹುತೇಕ ಹೋರಾಟಗಳಿಗೆ ಸಿಕ್ಕ ಪರಿಹಾರ ಮಾತ್ರ ಶೂನ್ಯ.

ಈ ಸಲವೂ ಡಿಸೆಂಬರ್ 4 ರಿಂದ 15ರವರೆಗೆ ನಡೆಯುವ ಅಧಿವೇಶನದ ಸಂದರ್ಭದಲ್ಲೂ ಪ್ರತಿಭಟನೆಗೆ ರೈತರು, ಕಾರ್ಮಿಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇರಿ ವಿವಿಧ ಸಂಘಟನೆಯವರು ತಯಾರಿ ನಡೆಸಿದ್ದಾರೆ. ‘ಪ್ರತಿ ವರ್ಷದಂತೆ ಬರೀ ಭರವಸೆ ನೀಡುವ ಬದಲು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಪಟ್ಟು ಹಿಡಿಯಲು ನಿರ್ಧರಿಸಿದ್ದಾರೆ.

20 ಸಂಘಟನೆಗಳಿಂದ ಅರ್ಜಿ: ಪ್ರತಿಭಟನೆಗೆಂದೇ ಸುವರ್ಣ ವಿಧಾನಸೌಧದ ಬಳಿ ವೇದಿಕೆ ಕಲ್ಪಿಸಿ, ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಭದ್ರತೆಗಾಗಿ ಪೊಲೀಸರ ನಿಯೋಜನೆಯೂ ಆಗುತ್ತದೆ. ಕಳೆದ ವರ್ಷ 80 ಸಂಘಟನೆಯವರು ಪ್ರತಿಭಟನೆ ನಡೆಸಿದ್ದರೆ, 20 ಸಂಘಟನೆಯವರು ಮನವಿಪತ್ರ ಸಲ್ಲಿಸಿದ್ದರು.

ಈ ಸಲ ಪ್ರತಿಭಟನೆಗೆ ಹಲಗಾದ ಸುವರ್ಣ ಗಾರ್ಡನ್‌ ಮತ್ತು ಕೊಂಡಸಕೊಪ್ಪ ಗುಡ್ಡದ ಮೇಲೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಟನೆಗೆ ಅನುಮತಿ ಕೋರಿ 20 ಸಂಘಟನೆಯವರು ಈಗಾಗಲೇ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ. ಅಧಿವೇಶನ ಆರಂಭವಾಗುವ ಹಿಂದಿನ ದಿನದವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

ಸದನಗೊಳಗೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಆದ್ಯತೆ ಕೊಡುವುದಾಗಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಇತರ ಸಚಿವರಿಗೆ ಪತ್ರ ಬರೆದಿರುವ ಹೊರಟ್ಟಿ ಅವರು ‘ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಿ, ಬೇಡಿಕೆಗಳನ್ನು ಈಡೇರಿಸಿ’ ಎಂದು ಕೋರಿದ್ದಾರೆ.

ಪ್ರತಿಭಟನೆಗೆ ಮುಂದಾಗಿದ್ದೇವೆ: ‘ಬರದಿಂದ ತತ್ತರಿಸಿದ ರೈತರಿಗೆ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಈ ಬಾರಿ ಅಧಿವೇಶನದಲ್ಲಿ ಪ್ರತಿಭಟಿಸಲಿದ್ದೇವೆ. ಇದಕ್ಕಾಗಿ ನಿರಂತರವಾಗಿ ಸಭೆ ನಡೆಸುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ರೈತರು ಅಪಾರ ಸಂಖ್ಯೆಯಲ್ಲಿ ಸೇರುವರು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರಕಾಶ ನಾಯ್ಕ ಹೇಳಿದರು.

ತೀವ್ರ ಸ್ವರೂಪದ ಹೋರಾಟ: ‘ಸೇವಾಭದ್ರತೆಗೆ ಒತ್ತಾಯಿಸಿ ಈ ಸಲವೂ ಪ್ರತಿಭಟನೆ ನಡೆಸುತ್ತೇವೆ. ಅಧಿವೇಶನಕ್ಕೂ ಮುನ್ನವೇ ನಮ್ಮನ್ನು ಕರೆಸಿ, ಸರ್ಕಾರ ಸಮಸ್ಯೆ ಆಲಿಸುವುದು ಎಂದು ಭಾವಿಸಿದ್ದೆವು. ಆದರೆ, ಅದು ಆಗಿಲ್ಲ. ನಾವು ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಕಂಬಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT