ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕಾಂಗ್ರೆಸ್‌– ಅರಸು ಕಾಂಗ್ರೆಸ್‌ ವಿಲೀನ

Last Updated 11 ಮೇ 2018, 19:30 IST
ಅಕ್ಷರ ಗಾತ್ರ

– ಎ.ಎಸ್‌. ಜಯಸಿಂಹ

ಕರ್ನಾಟಕದಲ್ಲಿ ಕೆ.ಪಿ.ಸಿ.ಸಿ. (ಯು) ಅಧ್ಯಕ್ಷರಾಗಿ ಕೆ.ಎಚ್‌. ಪಾಟೀಲರು ಮುಂದುವರಿದರು. ಇದರ ಜೊತೆಗೆ, ಅರಸು ಸ್ಥಾಪಿಸಿದ್ದ ಸಿದ್ದರಾಮರೆಡ್ಡಿ ಅಧ್ಯಕ್ಷತೆಯ ಕರ್ನಾಟಕ ಕಾಂಗ್ರೆಸ್‌ ಒಂದಿತ್ತು. ಲೋಕಸಭಾ ಚುನಾವಣೆಗಳ ದೃಷ್ಟಿಯಿಂದ ಇವೆರಡರ ವಿಲೀನ ಅಗತ್ಯವಾಗಿತ್ತು. ರಾಜ್ಯದಲ್ಲಿ ಎರಡೂ ಕಾಂಗ್ರೆಸ್‌ಗಳು ವಿಲೀನವಾದ ಪಕ್ಷದಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು ಯಾರಾಗಬೇಕು, ಈಗಿನ ಜಿಲ್ಲಾ ಹಾಗೂ ತಾಲ್ಲೂಕು (ಯು) ಘಟಕಗಳ ಪದಾಧಿಕಾರಿಗಳ ಸ್ಥಾನಮಾನ ಏನು, ಕರ್ನಾಟಕ ಕಾಂಗ್ರೆಸ್‌ ಪದಾಧಿಕಾರಿಗಳ ಹಾಗೂ ಸರ್ಕಾರದ ಸ್ಥಾನಮಾನ ಏನು ಎಂಬ ಪ್ರಶ್ನೆ ಎದುರಾಯಿತು. ಕಾಂಗ್ರೆಸ್‌ (ಯು) ಸೇರಲು ಕರ್ನಾಟಕ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ತೀರ್ಮಾನಿಸಿತು. 1979ರ ಸೆಪ್ಟೆಂಬರ್‌ 12, 13ರಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ, ಕರ್ನಾಟಕ ಕಾಂಗ್ರೆಸ್‌ನಲ್ಲಿ (ಯು) ವಿಲೀನವಾಗಬೇಕು ಎಂಬ ಆಹ್ವಾನಕ್ಕೆ ಕರ್ನಾಟಕ ಕಾಂಗ್ರೆಸ್‌ ಪುರಸ್ಕಾರ ನೀಡಿತು. ಕರ್ನಾಟಕ ಕಾಂಗ್ರೆಸ್‌ನ ಈಗಿನ ಘಟಕಗಳನ್ನು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ (ಯು) ಘಟಕಗಳೆಂದು ಪರಿಗಣಿಸಬೇಕು ಎಂಬ ಮನವಿಯನ್ನು ಕಾಂಗ್ರೆಸ್‌ (ಯು) ಅಧ್ಯಕ್ಷ ದೇವರಾಜ ಅರಸರ ಮುಂದಿಡಲಾಯಿತು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಒಗ್ಗಟ್ಟಿನಿಂದ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರವನ್ನು ದೇವರಾಜ ಅರಸರಿಗೆ ನೀಡುವ ನಿರ್ಣಯವನ್ನು ಕರ್ನಾಟಕ ಕಾಂಗ್ರೆಸ್‌ ಸಮಿತಿ ಅಂಗೀಕರಿಸಿ, 1973ರ ವಿಭಜನಾಪೂರ್ವ ಕಾಂಗ್ರೆಸ್‌ ಅಧಿವೇಶನ ಕರೆಯಬೇಕು. ಮುಂದಿನ ಅಧ್ಯಕ್ಷರನ್ನೂ ಈ ಸಭೆ ಆರಿಸಬೇಕು. ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಅಲ್ಲಿನ ಘಟಕಗಳೇ ಸಭೆ ಸೇರಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಒಂದಾಗಬೇಕೆಂಬ ಅಭಿಪ್ರಾಯಗಳು ಮೂಡಿ ಬಂದವು.

ದಿನಾಂಕ 8.11.79ರಂದು ಕರ್ನಾಟಕ ಕಾಂಗ್ರೆಸ್‌ ಸರ್ವ ಸದಸ್ಯರ ಸಭೆ ನಡೆಯಿತು. ಕಾಂಗ್ರೆಸ್‌ (ಯು) ಜೊತೆ ವಿಲೀನಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು. ಕೆ.ಎಚ್‌. ಪಾಟೀಲರ ಜೊತೆ ಸಾಮರಸ್ಯ ಸಾಧಿಸಲು ಮೂರು ಜನರ ಸಮಿತಿ ನೇಮಿಸಲಾಯಿತು. ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬಾರದ ರೀತಿಯಲ್ಲಿ, ಸರ್ಕಾರ ಉಳಿಸಿಕೊಂಡು ಹೋಗಲು ಸಾಧ್ಯವಾಗುವ ರೀತಿಯಲ್ಲಿ ವಿಲೀನವಾಗಲು ತೀರ್ಮಾನಿಸಲಾಯಿತು. ಜಿ.ಕೆ. ಟಕ್ಕೇದ್‌, ಕರ್ನಾಟಕ ಕಾಂಗ್ರೆಸ್‌ ಪದಾಧಿಕಾರಿಗಳ ಸ್ಥಾನಮಾನದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಎನ್‌.ಜಿ. ಗೋವಿಂದಗೌಡ ಎಂಬುವವರು ‘ಈ ನಿರ್ಣಯಕ್ಕೆ ನನ್ನ ವಿರೋಧವಿದೆ’ ಎಂದರು. ಉಳಿದವರು ನಿರ್ಣಯ ಸಮರ್ಥಿಸಿ ಮಾತನಾಡಿದರು. ಈ ವಿಲೀನದ ನಿರ್ಧಾರವನ್ನು ಕೆ.ಎಚ್. ಪಾಟೀಲರು ಸ್ವಾಗತಿಸಿದರು. ‘ನಾವೆಲ್ಲಾ ಒಂದಾಗಿದ್ದೇವೆ. ಪರಸ್ಪರ ಭೀತಿ, ಅನುಮಾನ ಇಟ್ಟುಕೊಳ್ಳುವುದು ಬೇಡ’ ಎಂದರು. ದೇವರಾಜ ಅರಸು ಮತ್ತು ಕೆ.ಎಚ್‌. ಪಾಟೀಲರು ಭೇಟಿ ಮಾಡಿ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷತೆ ಬಗ್ಗೆ ಚರ್ಚಿಸಿದರು. ಆದರೆ, ಯಾವುದೇ ಪರಿಹಾರ ಸಿಗಲಿಲ್ಲ. ಅರಸು ಬೆಂಬಲಿಗರು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷತೆ ಬಗ್ಗೆ ಪಟ್ಟು ಹಿಡಿದಿದ್ದರು. ಅರಸು ಇಕ್ಕಟ್ಟಿನಲ್ಲಿ ಸಿಲುಕಿದ್ದರು. ವಿಲೀನ ಕೆಳಮಟ್ಟದಿಂದ ಆರಂಭವಾಗಿ ಮೇಲ್ಮಟ್ಟಕ್ಕೆ ಬರಬೇಕು ಎಂದು ಪಾಟೀಲರು ಹೇಳಿದರು. ಪ್ರತ್ಯೇಕ ಸಭೆ ಕರೆಯುವಂತೆ ಪಾಟೀಲರ ಬೆಂಬಲಿಗರು ಒತ್ತಾಯಿಸುತ್ತಿದ್ದರು.

ಏಕೀಕೃತ ಪ್ರದೇಶ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕ ಮಾಡುವ ಬಗ್ಗೆ ಪ್ರಯತ್ನಗಳು ನಡೆಯುತ್ತಿದ್ದವು. ಹಾರನಹಳ್ಳಿ ರಾಮಸ್ವಾಮಿಯವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಕೆ.ಎಚ್. ಪಾಟೀಲರು ತಮ್ಮ ಸ್ಥಾನ ತೆರವು ಮಾಡಲು ಒಪ್ಪಿದರು. 26ನೇ ತಾರೀಖು ಎರಡೂ ಘಟಕಗಳ ಕಾರ್ಯಕಾರಿ ಸಮಿತಿಗಳು ಪ್ರತ್ಯೇಕವಾಗಿ ಸಭೆ ಸೇರಿ ಈ ಬಗ್ಗೆ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು. ಕೆ.ಎಚ್‌. ಪಾಟೀಲರು ನೂತನ ಪಕ್ಷದಲ್ಲಿ ತಾವು ಯಾವುದೇ ಸ್ಥಾನವನ್ನು ಕೇಳುವುದಿಲ್ಲ ಎಂದರು. 16.11.79ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಅರಸು) ಅಧ್ಯಕ್ಷರಾಗಿ ಗಂಡಸಿ ಕ್ಷೇತ್ರದ ಶಾಸಕ ಹಾರನಹಳ್ಳಿ ರಾಮಸ್ವಾಮಿ ಆಯ್ಕೆ ಆದರು. ಏಕೀಕೃತ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಕೆ.ಎಚ್. ಪಾಟೀಲರೇ ವಹಿಸಿದ್ದರು. ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷ ಸಿದ್ಧರಾಮರೆಡ್ಡಿ, ಉಭಯ ಘಟಕಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪಾಟೀಲರ ಬೆಂಬಲಿಗರಿಗೆ ಅಸಮಾಧಾನವಾಗಿತ್ತು. ಅಷ್ಟರಲ್ಲಿ, ಸಚಿವ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ (ಯು) ಪಕ್ಷಕ್ಕೆ ಬ್ರಹ್ಮಾನಂದ ರೆಡ್ಡಿ ರಾಜೀನಾಮೆ ನೀಡಿ, ಇಂದಿರಾ ಕಾಂಗ್ರೆಸ್‌ ಸೇರಿದರು. ಅದರ ಬೆನ್ನ ಹಿಂದೆಯೇ ಕೆ.ಎಚ್‌. ಪಾಟೀಲರು ಕಾಂಗ್ರೆಸ್‌ (ಯು) ಪಕ್ಷದಿಂದ ನಿರ್ಗಮಿಸಿದರು. ಪಾಟೀಲರು ತಮ್ಮ ಬೆಂಬಲಿಗರ ಸಭೆ ನಡೆಸಿದರು. 21 ಜಿಲ್ಲಾ ಕಾಂಗ್ರೆಸ್‌ (ಯು) ಸಮಿತಿಗಳ ಪೈಕಿ 17 ಜಿಲ್ಲೆಗಳ ಕಾಂಗ್ರೆಸ್‌ ಸಮಿತಿಗಳ ಪದಾಧಿಕಾರಿಗಳು ಇಂದಿರಾ ಕಾಂಗ್ರೆಸ್‌ ಸೇರಿದರು. ಅನಂತಕೃಷ್ಣ ಕೂಡ ಇಂದಿರಾ ಕಾಂಗ್ರೆಸ್‌ ಸೇರಿದರು. 1978ರ ಜನವರಿ ತಿಂಗಳಿನಲ್ಲೇ ರೆಡ್ಡಿ ಕಾಂಗ್ರೆಸ್‌ನ ನಾಯಕರಾಗಿದ್ದ ಎಸ್‌.ಎಂ.ಕೃಷ್ಣ ಅವರ ತಂಡ ಕಾಂಗ್ರೆಸ್‌ ಏಕತಾ ವೇದಿಕೆ ಎಂದು ಒಂದು ಗುಂಪನ್ನು ನಿರ್ಮಿಸಿಕೊಂಡು ತದನಂತರ ಇಂದಿರಾ ಕಾಂಗ್ರೆಸ್‌ ಸೇರಿತು. ದೇವರಾಜ ಅರಸು ಕಾಂಗ್ರೆಸ್‌ (ಯು) ಅಧ್ಯಕ್ಷರಾದ ನಂತರ ಎಚ್.ಎನ್. ನಂಜೇಗೌಡ, ರಘುಪತಿ ಮತ್ತಿತರರು ಇಂದಿರಾ ಕಾಂಗ್ರೆಸ್‌ ಸೇರಿದರು. ನಂತರ ಕೆ.ಎಸ್‌. ನಾಗರತ್ನಮ್ಮ, ಬೆಳ್ಳಿಯಪ್ಪ, ಅಬ್ದುಲ್‌ ನಜೀರ್‌, ಎಂ.ಎಂ. ಸೂರ್ಯನಾರಾಯಣಗೌಡ ಅವರೂ ಇಂದಿರಾ ಕಾಂಗ್ರೆಸ್‌ ಸೇರಿದರು. ಚುನಾವಣೆ ಪೂರ್ವದಲ್ಲಿ ಸಚಿವ ಎ.ಬಿ. ಜಕನೂರ್‌ ಕಾಂಗ್ರೆಸ್‌ (ಯು) ತ್ಯಜಿಸಿ ಇಂದಿರಾ ಕಾಂಗ್ರೆಸ್‌ ಸೇರಿದರು. ಈ ರೀತಿ ಆರಂಭದಿಂದಲೇ ಪ್ರದೇಶ ಕಾಂಗ್ರೆಸ್‌ (ಯು) ಪಕ್ಷಾಂತರದ ಪಿಡುಗಿಗೆ ಒಳಗಾಯಿತು. ಅದರ ಬಲ ಕ್ಷೀಣಿಸತೊಡಗಿತು.

(ಇಂದಿರಾ ಕಾಂಗ್ರೆಸ್‌ (ಕಾಂಗೈ) ಲೇಖನದಲ್ಲಿ ಕರ್ನಾಟಕ ರಾಜಕೀಯ ಚಿಂತನೆ ‍ಪುಸ್ತಕದಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT