ಬೇಡಿಕೆಗಳ ಈಡೇರಿಕೆಗೆ ಆಗ್ರಹ: ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

7

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Published:
Updated:

ಬಾಗಲಕೋಟೆ: ಕನಿಷ್ಠ ವೇತನ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘಟನೆ (ಸಿಐಟಿಯು) ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ನವನಗರದ ನಗರ ಉದ್ಯಾನದಿಂದ ಪ್ರತಿಭಟನಾ ರ್‍ಯಾಲಿ ಮೂಲಕ ಜಿಲ್ಲಾಡಳಿತ ಭವನಕ್ಕೆ ಬಂದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಕೆಲಹೊತ್ತು ಧರಣಿ ಕುಳಿತು ನಂತರ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ‌ ಅವರಿಗೆ ಮನವಿ ಸಲ್ಲಿಸಿದರು.

ಕನಿಷ್ಠ ₹18 ಸಾವಿರ ವೇತನವನ್ನು ಜಾರಿಗೊಳಿಸಬೇಕು, ಸರ್ಕಾರದ ಎಲ್ಲ ಸೌಲಭ್ಯಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. 

ಪ್ರತಿಭಟನೆಯ ನೇತೃತ್ವವನ್ನು ಸಂಘದ ಮುಖಂಡರಾದ ಹನುಮಕ್ಕ ದಾಸರ,  ರೇಣುಕಾ ಪೂಜಾರಿ, ಮಂಜುಳಾ ಪಾಟೀಲ ವಹಿಸಿದ್ದರು.

ಕಾರವಾರ: ಕನಿಷ್ಠ ವೇತನ, ನೇರ ನಗದು ವರ್ಗಾವಣೆ, ಅಂಚೆ ಮೂಲಕ ಪ್ಯಾಕೇಜ್ ಆಹಾರ ಪಡೆಯುವ ಪದ್ಧತಿ ಜಾರಿ, ಅನುದಾನ ಕಡಿತ ಹಾಗೂ ಅಂಗನವಾಡಿಗಳ ಖಾಸಗೀಕರಣ ವಿರೋಧಿಸಿ ಅಂಗನವಾಡಿ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಬಳ್ಳಾರಿ: ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ನೂರಾರು ಸದಸ್ಯರು ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ರಾಮನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಿಂಗಳಿಗೆ ಕನಿಷ್ಠ 18 ಸಾವಿರ ರೂಪಾಯಿ‌ ವೇತನ ನೀಡಬೇಕು. ಅಂಗನವಾಡಿಗಳಲ್ಲಿಯೇ ಎಲ್ ಕೆಜಿ ಶಿಕ್ಷಣ ನೀಡಬೇಕು. ಮಿನಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಿಸಬೇಕು ಎಂಬುದು ಸೇರಿದಂತೆ ಒಟ್ಟು ಒಟ್ಟು 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.

ಬೀದರ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆ ನಡೆಸಿದರು.  ಗಣೇಶ ಮೈದಾನದಿಂದ ಮೆರವಣಿಗೆ ಹೊರಟು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

ತುಮಕೂರು: ಅಂಗನವಾಡಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಟೌನ್ ಹಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್‍ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರಿಗೆ ಮನವಿ ಸಲ್ಲಿಸಿದರು.

ಐಸಿಡಿಎಸ್ ಯೋಜನೆಯಡಿ ಅತ್ಯಂತ ಕಡಿಮೆ ಸವಲತ್ತುಗಳಿಗೆ ದಿನಕ್ಕೆ ಆರುವರೆ ಗಂಟೆ ಕೆಲಸವನ್ನು ಅಂಗನವಾಡಿ ನೌಕರರು ಮಾಡುತ್ತಿದ್ದಾರೆ. ಅಲ್ಲದೇ ಎಲ್ಲ ತರಹದ ಕೆಲಸಗಳ ಜೊತೆಗೆ ಚುನಾವಣೆ ಕೆಲಸ, ಸರ್ವೆ, ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ, ಅಂಗವಿಕಲರಿಗೆ ಸಂಬಂಧಿಸಿದ ಕೆಲಸಗಳು, ಕೆಲವೆಡೆ ಶೌಚಾಲಯ ಕಟ್ಟಿಸಲು, ಮಾತೃಪೂರ್ಣ ಯೋಜನೆ ಜಾರಿಗೆ ಬಳಸಿಕೊಳ್ಳಲಾಗುತ್ತಿದೆ. ಸಣ್ಣಪುಟ್ಟ ತಪ್ಪುಗಳಾದರೆ ಇವರನ್ನೇ ಹೊಣೆ ಮಾಡಿ ಕೆಲಸದಿಂದ ತೆಗೆದು ಹಾಕುವುದು, ಅವಮಾನಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಸಂಘಟನೆ ಮುಖಂಡರು ಆರೋಪಿಸಿದರು.

ಈ ಕಾರಣಕ್ಕಾಗಿಯೇ ಜಿಲ್ಲಾಧಿಕಾರಿ ಚಲೊ ಪ್ರತಿಭಟನೆ ಮಾಡಲಾಗುತ್ತಿದೆ.  ಕೂಡಲೇ ಇಲಾಖೆ ಮತ್ತು ಸಂಘದ ಪದಾಧಿಕಾರಿಗಳ ಜಂಟಿ ಸಭೆಯನ್ನು ನಡೆಸಿ ಅಂಗನವಾಡಿ ನೌಕರರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯ ಮಾಡಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಮಾವಳಿ ರಚಿಸಬೇಕು, ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್ ಪಡೆಯಬೇಕು, ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು, ಮಾತೃಪೂರ್ಣ ಯೋಜನೆಗೆ ಬೇಕಾದ ಮೊಟ್ಟೆ, ತರಕಾರಿ, ಅಡುಗೆ ಅನಿಲ ಹಣವನ್ನು ಮುಂಗಡವಾಗಿ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿ ಅಗತ್ಯಕ್ಕೆ ತಕ್ಕಷ್ಟು ಪೂರೈಸಬೇಕು. ಮುಂಬಡ್ತಿ ಹೊಂದಿದ ಸಹಾಯಕಿಯರಿಗೆ ಯಾವುದೇ ಸ್ಥಳೀಯ  ಪಟ್ಟಭದ್ರ ಹಿತಾಸಕ್ತಿಗಳಿಂದ ತೊಂದರೆಯಾಗದಂತೆ ಸುಸೂತ್ರವಾಗಿ ಕೆಲಸ ಮಾಡಿಕೊಂಡು ಹೋಗುವಂತಹ ವಾತಾವರಣ ಕಲ್ಪಿಸಿಕೊಡಬೇಕು ಎಂಬುದು ಸೇರಿದಂರತೆ 20 ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಜಿ.ಕಮಲಾ, ಪ್ರಧಾನ ಕಾರ್ಯದರ್ಸಿ ಗುಲ್ಜಾರ್ ಭಾನು, ಖಜಾಂಚಿ ಬಿ.ಎಸ್.ಅನಸೂಯ, ಪದಾಧಿಕಾರಿಗಳಾದ ಪಾರ್ವತಮ್ಮ, ಮಂಜುಳಾ, ನಸೀಮಾ, ಸಿದ್ದಪ್ಪ, ಮುಖಂಡರಾದ ಸೈಯದ್ ಮುಜೀಬ್, ಅನಸೂಯ, ವನಜಾಕ್ಷಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !