ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಮಂಜಮ್ಮ ಜೋಗತಿ ಆತ್ಮಕಥೆ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಾಠ
Last Updated 31 ಜುಲೈ 2019, 12:19 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಜೋಗತಿ ನೃತ್ಯದ ಮೂಲಕ ತಮ್ಮದೇ ಆದ ತಂಡ ಕಟ್ಟಿಕೊಂಡು ರಾಜ್ಯದಾದ್ಯಂತ ಛಾಪು ಮೂಡಿಸಿರುವ ಇಲ್ಲಿನ ಜೋಗತಿ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಅವರ ಆತ್ಮಕಥೆ ಈಗ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿದೆ.

ಲೇಖಕ ಡಾ.ಚಂದ್ರಪ್ಪ ಸೊಬಟಿ ಅವರು ಮಂಜಮ್ಮ ಜೋಗತಿ ಅವರ ಬಗ್ಗೆ ಬರೆದ ‘ಆತ್ಮಕಥನ’ ಕೃತಿಯಿಂದ ಆಯ್ದುಕೊಂಡ ಕೆಲವು ಪುಟಗಳ ಆತ್ಮಕಥೆಯನ್ನು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವುಕಲಾವಿದರ ಆತ್ಮ ಚರಿತ್ರೆ ವಿಭಾಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದೆ.

2019ರಿಂದ 2022ನೇ ಶೈಕ್ಷಣಿಕ ವರ್ಷದ ತನಕ ಬಿ.ಎ ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಅರಿವು-5 ಪಠ್ಯಪುಸ್ತಕದಲ್ಲಿ ‘ಮಂಜಮ್ಮ ಜೋಗತಿ: ಆತ್ಮಕಥನದ ಅನಾವರಣ’ ಎಂಬ ಶೀರ್ಷಿಕೆಯಡಿಯಲ್ಲಿ ಪಾಠ ಅಭ್ಯಾಸ ಮಾಡಲಿದ್ದಾರೆ. ಈ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ರಾಜ್ಯದ ನೂರಕ್ಕೂ ಹೆಚ್ಚು ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳು ಇದೇ ಶೈಕ್ಷಣಿಕ ವರ್ಷದಿಂದ ಅಭ್ಯಾಸ ಮಾಡಲಿದ್ದಾರೆ.

ಕಲ್ಲುಕಂಭ ಗ್ರಾಮದಲ್ಲಿ ಪಿಗ್ಮಿ ಹಣ ಸಂಗ್ರಹ ಮಾಡುತ್ತಿದ್ದ 16ರ ಹರೆಯದ ಮಂಜುನಾಥ ಆಕಸ್ಮಿಕವಾಗಿ ದೇಹದಲ್ಲಿ ಆದ ಬದಲಾವಣೆಯಿಂದ ಮಂಜಮ್ಮ ಜೋಗತಿಯಾಗಿ ಬದಲಾಗಿದ್ದಾರೆ. ಗುರು ಕಾಳಮ್ಮ ಜೋಗತಿ ಬಳಿ ಸೇರಿಕೊಂಡ ನಂತರ ಜೋಗತಿ ನೃತ್ಯ ಕಲೆತು, ತಂಡ ಕಟ್ಟಿಕೊಂಡು ಸಾಗಿದ ಜೀವನದ ದಾರಿಯಲ್ಲಿ ಕಂಡ ಸಂಕಷ್ಟ, ಸಂಕೋಲೆ, ಬದುಕು ಬವಣೆ ಹಾಗೂ ಅನುಭವಗಳ ಸಾರವನ್ನು ಚಂದ್ರಪ್ಪ ಸೊಬಟಿ ಅವರು 2014ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹ ಕೇಂದ್ರವು ‘ಆತ್ಮಕಥನ’ವಾಗಿ ಪ್ರಕಟಿಸಿದೆ.

ಸದ್ಯ ಜಾನಪದ ಅಕಾಡೆಮಿ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಮಂಜಮ್ಮ ಜೋಗತಿ ದೇಶದ ನಾನಾ ಭಾಗಗಳಲ್ಲಿ ಕಲೆ ಪ್ರದರ್ಶಿಸಿದ್ದಾರೆ.

‘ನೋಡ್ರಿ ಸಮಾಜದಲ್ಲಿ ಅತ್ತ ಗಂಡು ಅಲ್ಲದ ಇತ್ತ ಹೆಣ್ಣು ಅಲ್ಲದ ನನ್ನಂತಹ ಜೋಗತಿಯರನ್ನು ಕಂಡರೆ ಕೀಳರಿಮೆಯಿಂದ ನೋಡುವವರೇ ಹೆಚ್ಚು. ಆದರೆ, ಪಠ್ಯದಿಂದ ಜಗತ್ತಿಗೆ ವಾಸ್ತವಾಂಶ ಗೊತ್ತಾಗಲಿದೆ’ ಎಂದು ಮಂಜಮ್ಮ ಜೋಗತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT