ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತನಿಗೆ ಉತ್ತಮ ಫಸಲಿನ ನಿರೀಕ್ಷೆ

ಭಾರಿ ಮಳೆಗೆ ತಗ್ಗು ಪ್ರದೇಶದ ಬೆಳೆಗಳಿಗೆ ಹಾನಿ; ಜಿಲ್ಲೆಯಾದ್ಯಂತ ಅನೇಕ ಮನೆಗಳಿಗೆ ಹಾನಿ
Last Updated 8 ಆಗಸ್ಟ್ 2022, 9:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಈ ಸಲ ಮುಂಗಾರು ವಿಳಂಬವಾದಾಗ ರೈತರು ಚಿಂತಾಕ್ರಾಂತರಾಗಿದ್ದರು. ಆದರೆ, ಜುಲೈನಿಂದ ಸುರಿಯುತ್ತಿರುವ ಉತ್ತಮ ಮಳೆ ಆ ಚಿಂತೆ ದೂರವಾಗುವಂತೆ ಮಾಡಿದೆ.

ಮುಂಗಾರು ತಡವಾಗಿ ಪ್ರವೇಶಿಸಿದ್ದರಿಂದ ರೈತರು ಕೂಡ ವಿಳಂಬವಾಗಿಯೇ ಬಿತ್ತನೆ ಮಾಡಿದ್ದರು. ಅದಾದ ನಂತರ ಸತತವಾಗಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಹೆಚ್ಚಿನ ಬೆಳೆಗಳಿಗೆ ಅನುಕೂಲವಾಗಿದೆ. ಇದರಿಂದ ಸಹಜವಾಗಿಯೇ ರೈತಾಪಿ ವರ್ಗ ಸಂತಸಗೊಂಡಿದೆ. ಅನ್ನದಾತ ಉತ್ತಮ ಮುಂಗಾರು ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಅದರಲ್ಲೂ ಕಬ್ಬು, ಭತ್ತ, ಮೆಕ್ಕೆಜೋಳದ ಬಂಪರ್‌ ಬೆಳೆಯ ನಿರೀಕ್ಷೆ ಹೊಂದಿದ್ದಾನೆ. ಬರುವ ದಿನಗಳಲ್ಲಿ ಹೆಚ್ಚಿನ ಮಳೆ ಆಗಬಾರದು ಎಂದು ರೈತರು ಈಗಿನಿಂದಲೇ ಪ್ರಾರ್ಥಿಸತೊಡಗಿದ್ದಾರೆ.

ಜಿಲ್ಲೆಯಲ್ಲಿ ನೀರಾವರಿಗಿಂತ ಮಳೆಯಾಶ್ರಿತ ಪ್ರದೇಶವೇ ಹೆಚ್ಚಾಗಿರುವುದರಿಂದ ರೈತರು ಮಳೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. 2,50,989 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶವಿದ್ದರೆ, 81,805 ನೀರಾವರಿ ಪ್ರದೇಶವಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಸೇರಿ ಒಟ್ಟು 1.77 ಲಕ್ಷ ಹೆಕ್ಟೇರ್‌ ಕೃಷಿಯೋಗ್ಯ ಭೂಮಿ ಇದೆ. ಇದರಲ್ಲಿ ಶೇ 60ರಷ್ಟು ಜಮೀನಿನಲ್ಲಿ ಬಿತ್ತನೆ ಆಗಿದೆ. ಉಳಿದ ಶೇ 40ರಷ್ಟು ಬಿತ್ತನೆ ಬಾಕಿ ಇದೆ. ಭತ್ತ, ಹತ್ತಿ ಹಾಗೂ ಮೆಕ್ಕೆಜೋಳ ಪ್ರಮುಖ ಬೆಳೆ. ತೋಟಗಾರಿಕೆಯಲ್ಲಿ ಮೆಣಸಿನಕಾಯಿ ಮೇಲೆ ಅಧಿಕ ಅವಲಂಬನೆ ಇದೆ. ಕಳೆದ ವರ್ಷ ಮೆಣಸಿನಕಾಯಿ ಮಳೆಯಲ್ಲಿ ಕೊಚ್ಚಿಹೋದ ಬಳಿಕ ಬಹಳಷ್ಟು ರೈತರು ಬೇರೆ ಬೆಳೆಗಳತ್ತ ಮುಖ ಮಾಡಿದ್ದಾರೆ.ಉಳಿದಂತೆ ರಾಗಿ, ಸಜ್ಜೆ, ನವಣೆ ಮತ್ತಿತರ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ.

ಕೆಲವೆಡೆ ಅವಾಂತರ:

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆ ತಡವಾಗಿ ಬಂದರೆ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿಯ ಕೆಲವು ಭಾಗಗಳಲ್ಲಿ ಸಕಾಲಕ್ಕೆ ಆಗಮನವಾಗಿತ್ತು. ಅಲ್ಲದೇ ಸತತವಾಗಿ ಈ ಎರಡೂ ತಾಲ್ಲೂಕುಗಳಲ್ಲಿ ವರ್ಷಧಾರೆ ಆಗುತ್ತಿರುವುದರಿಂದ ಹೆಚ್ಚಿನ ಬೆಳೆ ಹಾನಿಯೂ ಈ ಎರಡೇ ತಾಲ್ಲೂಕುಗಳಲ್ಲಿ ಆಗಿರುವುದು ವರದಿಯಾಗಿದೆ. ಅದರಲ್ಲೂ ತಗ್ಗು ಪ್ರದೇಶದ ಗದ್ದೆಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಬೆಳೆ ಹಾಳಾಗಿದೆ. ಭತ್ತ, ಮೆಕ್ಕೆಜೋಳ, ರಾಗಿ ಬೆಳೆಗೆ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿದೆ. ಅಲ್ಲಲ್ಲಿ ಮೆಣಸಿನಕಾಯಿ, ಹತ್ತಿ ಬೆಳೆಯೂ ಹಾಳಾಗಿದೆ. ಇನ್ನು, ಬಾಳೆ, ಪೇರಲ, ಪಪ್ಪಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ಹಾಳಾಗಿದ್ದು, ಸಮೀಕ್ಷೆ ಪ್ರಗತಿಯಲ್ಲಿದೆ. ಅದು ಮುಗಿದ ನಂತರ ನಷ್ಟದ ನಿಖರ ಮಾಹಿತಿ ಸಿಗಲಿದೆ.

ಭಾರಿ ಮಳೆಗೆ ಇದುವರೆಗೆ ಜಿಲ್ಲೆಯಾದ್ಯಂತ 73 ಮನೆಗಳಿಗೆ ಹಾನಿಯಾಗಿದೆ. 2 ಮನೆಗಳಿಗೆ ತೀವ್ರ ತೆರನಾದ ಹಾನಿ ಉಂಟಾಗಿದೆ. 45 ಮನೆಗಳಿಗೆ ನೀರು ನುಗ್ಗಿ ನಷ್ಟವಾಗಿದೆ. ಹೊಸಪೇಟೆ ತಾಲ್ಲೂಕಿನ ಜಿ. ನಾಗಲಾಪುರದಲ್ಲಿ ರೈತ ಉಚ್ಚಂಟಿ ಬೊಮ್ಮಪ್ಪ ಹಳ್ಳದ ನೀರಲ್ಲಿ ಕೊಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಿಂದ ಸಮೃದ್ಧಿಯ ವಾತಾವರಣ ಸೃಷ್ಟಿಯಾಗಿದ್ದರೆ, ಅಲ್ಲಲ್ಲಿ ನಡೆದ ಅಹಿತಕರ ಘಟನೆಗಳ ನೋವು ಇದೆ.

ಬಳ್ಳಾರಿ ಜಿಲ್ಲೆಯಲ್ಲಿ ಮಳೆಗೆ 73 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 4 ಮನೆಗಳು ಸಂಪೂರ್ಣ ಕುಸಿದಿದ್ದು, ರೈತರೊಬ್ಬರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಇದುವರೆಗೆ 229 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 13.2 ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯನಗರ ಜಿಲ್ಲೆಯಲ್ಲಿ ಮಳೆಗಾಲದಲ್ಲಾದ ನಷ್ಟದ ಅಂಕಿ ಅಂಶ

01 ನೀರಲ್ಲಿ ಕೊಚ್ಚಿಕೊಂಡು ಸಾವು

73 ಮನೆಗಳಿಗೆ ಭಾಗಶಃ ಹಾನಿ

02 ಮನೆಗಳಿಗೆ ತೀವ್ರ ಹಾನಿ

45 ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿ

ಮೂಲ ಆಧಾರ: ಜಿಲ್ಲಾಧಿಕಾರಿ ಕಚೇರಿ, ವಿಜಯನಗರ ಜಿಲ್ಲೆ

ಏ.1ರಿಂದ ಜುಲೈ 31ರ ವರೆಗೆ ವರೆಗೆ ವಿಜಯನಗರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರಮುಖ ಬೆಳೆಗಳ ತಾಲ್ಲೂಕುವಾರು ವಿವರ (ಹೆಕ್ಟೇರ್‌ಗಳಲ್ಲಿ)

ತಾಲ್ಲೂಕು; ಭತ್ತ; ಮೆಕ್ಕೆಜೋಳ; ರಾಗಿ

ಕೂಡ್ಲಿಗಿ; 0; 0.40; 7.50

ಕೊಟ್ಟೂರು; 0; 0; 5

ಹೊಸಪೇಟೆ; 7.98; 0.65; 1

ಹಗರಿಬೊಮ್ಮನಹಳ್ಳಿ; 23.78; 1.20; 0

ಹೂವಿನಹಡಗಲಿ; 454; 9; 0

ಹರಪನಹಳ್ಳಿ; 369.14; 1516; 2.42

ಮೂಲ ಆಧಾರ: ಕೃಷಿ ಇಲಾಖೆ, ವಿಜಯನಗರ ಜಿಲ್ಲೆ

ವಿಜಯನಗರ ಜಿಲ್ಲೆ ನೀರಾವರಿ, ಮಳೆಯಾಶ್ರಿತ ಪ್ರದೇಶದ ವಿವರ

81805 ಹೆಕ್ಟೇರ್‌ ನೀರಾವರಿ ಪ್ರದೇಶ

250989 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ

ಬೆಳೆಗಳಿಗೆ ಅನುಕೂಲ

ಕೂಡ್ಲಿಗಿ: ತಾಲ್ಲೂಕಿನಲ್ಲಿ ಮೇ ಮಧ್ಯಭಾಗದಿಂದ ಇಲ್ಲಿಯವರೆಗೆ ಉತ್ತಮ ಮಳೆಯಾಗಿದೆ. ಆದರೆ, ಮಳೆಯಿಂದ ಯಾವುದೇ ಬೆಳೆ ನಷ್ಟವಾಗಿಲ್ಲ.

ಬಿತ್ತನೆ ಮಾಡಿದ ಬೆಳೆಗಳು ಉತ್ತಮವಾಗಿದ್ದು, ಇದೇ ರೀತಿ ಮಳೆ ಮುಂಂದುವರಿದರೆ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಮೇ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಸುಮಾರು 22 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. 21 ರೈತರಿಗೆ ಸೇರಿದ 17.40 ಎಕರೆ ವೀಳ್ಯದೆಲೆ, 3.33 ಎಕರೆ ಬಾಳೆ ತೋಟ ಹಾಗೂ 2 ಎಕರೆ ಪಪ್ಪಾಯಿ ತೋಟ ಹಾಳಾಗಿದೆ.

ಎಲ್ಲೆಡೆ ನಳನಳಿಸುತ್ತಿರುವ ಹಸಿರು:

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲೆಡೆ ಹಸಿರು ನಳನಳಿಸುತ್ತಿದೆ. ರೈತರು ಈ ಬಾರಿ ಉತ್ತಮ ಮುಂಗಾರು ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನಲ್ಲಿ 47,548 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಿದ್ದು, ಮೂರು ಹೋಬಳಿಯಲ್ಲೂ ಬಿತ್ತನೆ ಗುರಿ ಮೀರಿ ಸಾಧನೆಯಾಗಿದೆ. ಅತಿ ಹೆಚ್ಚು 26,200 ಹೆಕ್ಟೇರ್ ನಲ್ಲಿ ಮೆಕ್ಕೆಜೋಳ, 2428 ಹೆಕ್ಟೇರ್‌ ಜೋಳ, 785 ಹೆಕ್ಟೇರ್‌ ಸಜ್ಜೆ, 1695 ಹೆಕ್ಟೇರ್‌ ತೊಗರಿ, 2065 ಹೆಕ್ಟೇರ್‌ ಸೂರ್ಯಕಾಂತಿ ಬಿತ್ತನೆಯಾಗಿದೆ. ನಿರಂತರ ಮಳೆ ಸುರಿದಿದ್ದರಿಂದ ಬೆಳೆಗಳು ಹುಲುಸಾಗಿ ಬೆಳೆದಿವೆ. ಆರಂಭಿಕ ಮುಂಗಾರಿನಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, ಜೋಳದ ಬೆಳೆಗಳು ತೆನೆ ಮೂಡುವ, ಕಾಳು ಕಟ್ಟುವ ಹಂತದಲ್ಲಿವೆ. ಈ ತಿಂಗಳಲ್ಲಿ ಎರಡು ಮೂರು ಬಾರಿ ಮಳೆ ಸುರಿದರೆ ಸಾಕು ಸುಗ್ಗಿ ರೈತರಿಗೆ ಹಿಗ್ಗು ತರಲಿದೆ.

ಉತ್ತಮ ಬೆಳೆಯ ನಿರೀಕ್ಷೆ:

ಕೊಟ್ಟೂರು: ತಾಲ್ಲೂಕಿನಾದ್ಯಂತ ಸುರಿದ ಮಳೆಗೆ ತೇವಾಂಶ ಹೆಚ್ಚಳದಿಂದ ಸುಮಾರು 15 ಹೆಕ್ಟರ್ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

ತಾಲ್ಲೂಕಿನಾದ್ಯಂತ 32 ಸಾವಿರ ಹೆಕ್ಟೇರ್‌ ನಲ್ಲಿ ಬಿತ್ತನೆಯಾಗಿದ್ದು ಬೆಳೆಗಳು ಉತ್ತಮವಾಗಿವೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಈರುಳ್ಳಿ, ಸೂರ್ಯಕಾಂತಿ ಹಾಗೂ ಶೇಂಗಾ ಬೆಳೆಗಳಿಗೆ ಪ್ರತಿಕೂಲವಾಗುವ ಸಂಭವವಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಶ್ಯಾಮ ಸುಂದರ್ ಕಳವಳ ವ್ಯಕ್ತಪಡಿಸುತ್ತಾರೆ.

ತೋಟಗಾರಿಕಾ ಬೆಳೆಗಳಾದ ಬಾಳೆ 60 ಹೆಕ್ಟೇರ್‌, ಪಪ್ಪಾಯಿ 50 ಹೆಕ್ಟೇರ್‌, ದಾಳಿಂಬೆ 40 ಹೆಕ್ಟೇರ್‌, ಎಲೆಬಳ್ಳಿ 40 ಹೆಕ್ಟೇರ್‌ ಅಂದಾಜು ನಷ್ಟವಾಗಿರುತ್ತದೆ.

ಮಳೆ ರೈತರ ಮೊಗದಲ್ಲಿ ಕಳೆ:

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಾಡುವ ಹಂತದಲ್ಲಿದ್ದ ಜೋಳ, ಮೆಕ್ಕೆಜೋಳ, ಸಜ್ಜೆ, ಶೇಂಗಾ ಬೆಳೆಗಳು ನಳನಳಿಸುತ್ತಿವೆ. ‌ರೈತರಲ್ಲಿ ಸಂತಸ ಮೂಡಿದೆ.

ತಾಲ್ಲೂಕಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಗೆ ಭತ್ತ 23.78 ಹೆಕ್ಟೇರ್, ಮೆಕ್ಕೆಜೋಳ 1.20 ಹೆಕ್ಟೇರ್, ಹತ್ತಿ 0.60 ಹೆಕ್ಟೇರ್, ಶೇಂಗಾ 0.40 ಹೆಕ್ಟೇರ್ ನಷ್ಟವಾಗಿದೆ.

ಮೆಕ್ಕೆಜೋಳಕ್ಕೆ ಹೆಚ್ಚಿನ ಹಾನಿ:

ಹರಪನಹಳ್ಳಿ : ತಾಲ್ಲೂಕಿನ ವಿವಿಧೆಡೆ ಸುರಿದ ಭಾರಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ 718 ಹೆಕ್ಟೇರ್‌ ಮೆಕ್ಕೆಜೋಳ ಹಾನಿಯಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಬೆಳೆಯೆಲ್ಲ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.

ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ 66 ಸಾವಿರ ಹೆಕ್ಟೇರ್‌ ಬೆಳೆ ಸೋಂಪಾಗಿ ಬೆಳೆದಿತ್ತು. ಹೆಚ್ಚಿನ ಮಳೆಗೆ ತೇವಾಂಶ ಹೆಚ್ಚಳವಾಗಿ ಬೆಳೆಗಳಿಗೆ ಕೊಳೆ ರೋಗ ಶುರುವಾಗಿದೆ. ರೈತರು ತಕ್ಷಣವೇ ಜಮೀನುಗಳಲ್ಲಿ ನಿಂತಿರುವ ನೀರು ಹೊರ ಸಾಗಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗೊಂದಿ ಮಂಜುನಾಥ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT