ಮಧ್ಯಂತರ ಅರ್ಜಿದಾರರ ಸೇರ್ಪಡೆ: ಸಾಧಕ-ಬಾಧಕಗಳ ಅವಲೋಕನಕ್ಕೆ ಹೈಕೋರ್ಟ್‌ ಸಲಹೆ

7

ಮಧ್ಯಂತರ ಅರ್ಜಿದಾರರ ಸೇರ್ಪಡೆ: ಸಾಧಕ-ಬಾಧಕಗಳ ಅವಲೋಕನಕ್ಕೆ ಹೈಕೋರ್ಟ್‌ ಸಲಹೆ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ಸ್ ತೆರವುಗೊಳಿಸಬೇಕು ಎಂಬ ಕೋರಿಕೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ (ಪಿಐಎಲ್) ಜಾಹೀರಾತುದಾರ ಕಂಪನಿಗಳು, ಮುದ್ರಕರೂ ಸೇರಿದಂತೆ ಎಲ್ಲ ಮಧ್ಯಂತರ ಅರ್ಜಿದಾರರನ್ನು ಪಕ್ಷಗಾರರನ್ನಾಗಿ‌ ಮಾಡಿದರೆ ಪ್ರಕರಣಗಳ ವಿಚಾರಣೆಗೆ ಅಡ್ಡಿಪಡಿಸಿದಂತೆ ಆಗುವುದಿಲ್ಲವೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬ್ಯಾನರ್, ಹೋರ್ಡಿಂಗ್ಸ್‌ ಮತ್ತು ಫ್ಲೆಕ್ಸ್‌ಗಳ ತೆರವಿಗೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ’ಮಧ್ಯಂತರ ಅರ್ಜಿದಾರರು ಈ‌ ಪ್ರಕರಣಗಳಲ್ಲಿ ಪಕ್ಷಗಾರರಾಗುವ ಯಾವುದೇ ಅಗತ್ಯ ಇಲ್ಲ‌ ಹಾಗೂ ಸೂಕ್ತವೂ ಅಲ್ಲ" ಎಂದು ಪ್ರತಿಪಾದಿಸಿದರು.

ಬಿಬಿಎಂಪಿ ಪರ ವಕೀಲರೂ ವಾದ ಮಡಿಸಿ, ‘ನಗರದಲ್ಲಿ ಅನಧಿಕೃತ ಹಾಗೂ ಕಾನೂನು ಬಾಹಿರ ಜಾಹೀರಾತು ಫಲಕಗಳನ್ನು ಮಾತ್ರವೇ ತೆಗೆದಿದ್ದೇವೆ. ನೋಂದಣಿಗೊಂಡ ಜಾಹೀರಾತು ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಯಾವುದೇ ಜಾಹೀರಾತು ಗ್ರಾಹಕರು ಕೋರ್ಟ್ ಮೆಟ್ಟಿಲು ತುಳಿದಿಲ್ಲ.‌‌ 2016ರಿಂದ ಯಾವುದೇ ಪರವಾನಗಿ ನವೀಕರಣ ಮಾಡಿಲ್ಲ.‌ ಹೊಸ ಬೈ-ಲಾಗಾಗಿ (ಉಪ ನಿಯಮ) ಕಾಯುತ್ತಿದ್ದೇವೆ’ ಎಂದು ತಿಳಿಸಿದರು.

‘ಬೆಂಗಳೂರು ಬೆಳೆಯುತ್ತಿರುವ ನಗರ. ಇದರ ಸೌಂದರ್ಯ ಕಾಪಾಡುವುದು ಹಾಗೂ ಅನಧಿಕೃತ‌ ಜಾಹೀರಾತು ಫಲಕಗಳು ರಾರಾಜಿಸುವುದನ್ನು ತಡೆಯಲು ಬಿಬಿಎಂಪಿಗೆ ಸಾಂವಿಧಾನಿಕ‌ ಹಕ್ಕಿದೆ’ ಎಂದು ತಿಳಿಸಿದರು.‌

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ಎಲ್ಲಾ ಮಧ್ಯಂತರ ಅರ್ಜಿದಾರರು ಈ‌ ಪ್ರಕರಣದಲ್ಲಿ ನೇರವಾಗಿ‌ ಪಕ್ಷಗಾರರಲ್ಲ. ಈ ಕೋರ್ಟ್ ಕೂಡಾ ಅವರ ವಿರುದ್ಧ ವೈಯಕ್ತಿಕವಾಗಿ ಯಾವುದೇ ಆದೇಶ ಮಾಡಿಲ್ಲ’ ಎಂದರು.

"ಮಧ್ಯಂತರ ಅರ್ಜಿದಾರರ ಅಹವಾಲುಗಳನ್ನು ಆಲಿಸಿದ್ದೇವೆ ಮತ್ತು ಕೋರಿಕೆಗಳು ಏಕಸದಸ್ಯ ಪೀಠದಲ್ಲಿ ‌ವಿಚಾರಣೆ ಹಂತದಲ್ಲಿವೆ. ಹೀಗಿರುವಾಗ ನಿಮ್ಮನ್ನು ಪಕ್ಷಗಾರರನ್ನಾಗಿ ಮಾಡಿದರೆ ಏನಾಗುತ್ತದೆ, ಇದು ಇನ್ನಷ್ಟು ಸಮಸ್ಯೆಗಳಿಗೆ ಹಾದಿ ಮಾಡಿಕೊಡುವ  ಅನುಮಾನಗಳಿವೆಯಲ್ಲಾ" ಎಂದರು.

"ನೀವುಗಳು ಕಾನೂನು ಭಂಜಕರಾಗದೆ ಪರಿಪಾಲನೆಗೆ ಸಹಾಯ ಮಾಡಬೇಕು" ಎಂದೂ ಸಲಹೆ ನೀಡಿದರು.

"ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ಸ್ ಗಳಿಗೆ ಸಂಬಂಧಿಸಿದಂತೆ ಒಂದು ಸೂಕ್ತ ವಿಧಾನ ಮತ್ತು ಪರ್ಯಾಯ‌ ಮಾರ್ಗಗಳು ಏನಿವೆ ಎಂಬುದನ್ನು ಹುಡುಕೋಣ.‌ ಸದ್ಯ ಇದಕ್ಕೊಂದು ತಾತ್ಕಾಲಿಕ‌
ಪರಿಹಾರ ದೊರಕಿಸೋಣ" ಎಂದರು.

"ಒಂದು ವರ್ಷ ಕಾಲ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಮಾದರಿ ಜಾಹೀರಾತು ಫಲಕಗಳ ಅಳವಡಿಕೆ ನಿಷೇಧಕ್ಕೆ ಸಂಬಂಧಿಸಿದಂತೆ 2018ರ ಆಗಸ್ಟ್ 6 ರಂದು ಬಿಬಿಎಂಪಿ ಕೈಗೊಂಡಿರುವ ನಿರ್ಣಯವನ್ನು ಅಮಾನತ್ತಿನಲ್ಲಿರಿಸಿದರೆ ಏನಾಗಬಹುದು ಎಂದು ಪರಿಶೀಲನೆ ಮಾಡೋಣ" ಎಂದು ಹೇಳಿದರು.

"ಜಾಹೀರಾತು ಫಲಕಗಳ ಪ್ರದರ್ಶನ ವಿಷಯದಲ್ಲಿ ನಗರದಲ್ಲಿ  ಕಾನೂನು ಪಾಲನೆ ಮಣ್ಣು ಪಾಲಾಗಿದೆ. ನೀವು ಕೇವಲ ವಾಣಿಜ್ಯ ಹಿತಾಸಕ್ತಿಯಿಂದ  ಮಾತನಾಡುತ್ತಿದ್ದೀರಿ.‌ ನಗರದ ಸ್ವಚ್ಛತೆಗೆ ಸಂಬಂದಿಸಿದಂತೆ ನಿಮ್ಮ‌ ಕೊಡುಗೆ ಏನು, ಈ ನಗರ ಮತ್ತು ಇಲ್ಲಿನ ಜನರು ಇದರಿಂದ ತೊಂದರೆಗೊಳಗಾಗಬಾರದು ಎಂಬುದೇ ಕೋರ್ಟ್ ನ ಕಾಳಜಿ. ಈ ದಿಸೆಯಲ್ಲಿ ನಿಮ್ಮ ಸಲಹೆ ಏನಾದರೂ ಇದ್ದರೆ ತಿಳಿಸಿ" ಎಂದು ಸೂಚಿಸಿದರು.

"ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರ ಉದ್ದೇಶಿತ ಬೈಲಾಗಳನ್ನು ಅಂತಿಮಗೊಳಿಸಿ" ಎಂದು ಸೂಚಿಸುತ್ತಿದ್ದಂತೆಯೇ ಜಾಹೀರಾತು ಕಂಪನಿಗಳ ಪರ ವಕೀಲರು ಬಿ.ವಿ.ಶಂಕರ ನಾರಾಯಣ ರಾವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

"ಉದ್ದೇಶಿತ ಬೈಲಾ ಜಾಹೀರಾತುದಾರ ಕಂಪನಿಗಳ ಪಾಲಿಗೆ ಮರಣ ಮೃದಂಗದಂತಿದೆ" ಎಂದು ಆತಂಕ ವ್ಯಕ್ತಪಡಿಸಿದರು.

"ಇದನ್ನೆಲ್ಲಾ ನಂತರ ಕೂಲಂಕಷವಾಗಿ ಪರಿಶೀಲಿಸೋಣ" ಎಂದು ಸಮಾಧಾನಪಡಿಸಿದ ಮುಖ್ಯ ನ್ಯಾಯಮೂರ್ತಿಗಳು  ವಿಚಾರಣೆಯನ್ನು ನಾಳೆಗೆ (ಡಿ.19) ಮುಂದೂಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !